ದಾವಣಗೆರೆ: ಇಲ್ಲಿನ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಐವರ ಪೈಕಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಮಹಿಳೆ ಪಾರ್ವತಮ್ಮ (45) ಪಕ್ಕದ ಮನೆಯಲ್ಲಿ ಅನಿಲ ಸೋರಿಕೆ ಆಗುತ್ತಿರುವ ವಿಷಯ ತಿಳಿದ ತಕ್ಷಣ ಸಹಾಯಕ್ಕೆ ಧಾವಿಸಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಲಲಿತಮ್ಮ (50), ಸೌಭಾಗ್ಯ (36) ಇಬ್ಬರೂ ಕೂಡ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಲ್ಲೇಶಪ್ಪ (60), ಪ್ರವೀಣ್ (35) ಅವರಿಗೆ ಚಿಕಿತ್ಸೆ ಮುಂದುವರೆದಿದೆ.ಸಿಲಿಂಡರ್ ಸೋರಿಕೆಯಾಗುತ್ತಿದ್ದ ಹಿನ್ನೆಲೆ ಸರಿಪಡಿಸಲು ಪಕ್ಕದ ಮನೆಯ ಪ್ರವೀಣ್ ಅವರನ್ನು ಲಲಿತಮ್ಮ ಕರೆದಿದ್ದರು. ಅಡುಗೆ ಕೋಣೆಗೆ ಆಗಮಿಸಿದ ಪ್ರವೀಣ್ ಅವರು ಲೈಟ್ ಸ್ವಿಚ್ ಹಾಕಿದ ಪರಿಣಾಮ ಸಿಲಿಂಡರ್ ಸ್ಫೋಟ ಆಗಿರುವ ಸಾಧ್ಯತೆ ಇದೆ. ಪ್ರವೀಣ್ ಅವರೊಂದಿಗೆ ಸೌಭಾಗ್ಯ, ಮೃತ ಪಾರ್ವತಮ್ಮ ಕೂಡ ಅನಿಲ ಸೋರಿಕೆ ಬಗ್ಗೆ ಗಮನಿಸಲು ಲಲಿತಮ್ಮ ಅವರ ಮನೆಗೆ ಆಗಮಿಸಿದ್ದರು. ಆ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ.
ಲಲಿತಮ್ಮ, ಸೌಭಾಗ್ಯ ಇಬ್ಬರಿಗೂ ದೇಹದಲ್ಲಿ ಶೇ.50 ರಿಂದ 60ರಷ್ಟು ಸುಟ್ಟ ಗಾಯಗಳಾಗಿವೆ. ದಾವಣಗೆರೆಯ ಹೈಟೆಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.