ಶಿವಮೊಗ್ಗ : ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಘೋಷಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರುಗಳಿಗೆ ಹಕ್ಕುಪತ್ರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಕ್ಕುಪತ್ರ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದುವರೆಸ ಲಾಗುವುದು. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿಯ ಸಿದ್ದಾಂತ, ನರೇಂದ್ರ ಮೋದಿ ಮತ್ತು ಬಿ.ಎಸ್. ಯಡಿಯೂ ರಪ್ಪ ಅವರ ಕೆಲಸಗಳನ್ನು ಮೆಚ್ಚಿ ಇಂದು ಕಾಂಗ್ರೆಸ್-ಜೆಡಿಎಸ್‌ನ ಅನೇಕ ಮುಖಂ ಡರುಗಳು ಬಿಜೆಪಿ ಸೇರುತ್ತಿದ್ದಾರೆ. ಇದು ಬಿಜೆಪಿಗೆ ಹೆಚ್ಚಿನ ಶಕ್ತಿ ಬಂದಂತಾಗಿದೆ. ಕೊಳಚೆ ಪ್ರದೇಶಗಳಲ್ಲಿ ಬಿಜೆಪಿ ಪರ ಒಲವು ಹೆಚ್ಚಾಗುತ್ತಿದೆ. ಬಿಜೆಪಿಗೆ ಪ್ರವಾ ಹದಂತೆ ಹರಿದು ಬರುತ್ತಿರುವ ಬೆಂಬಲ ದಿಂದ ತಮ್ಮ ಗೆಲುವು ನಿಶ್ಚಿತ ಎಂದರು.
ತಮ್ಮನ್ನು ಸಮಾಜವಾದಿ, ಜಾತ್ಯಾ ತೀತವಾದಿ ಎಂದು ಕರೆದು ಕೊಳ್ಳುತ್ತಿ ರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರುಬರು ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆಂದು ಬದಾಮಿ ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸಿರುವುದು ಜಾತಿವಾದ ವಲ್ಲವೇ? ಓಟಿಗಾಗಿ ಹಿಂದುಳಿದವರು ಬೇಕು ನಿಮಗೆ, ಅಭಿವೃದ್ದಿಯಲ್ಲಿ ಹಿಂದುಳಿದವರಿಗೆ ಮಾಡಿದ್ದೇನು? ಈ ಬಗ್ಗೆ ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಈಶ್ವರಪ್ಪ ಅವರು, ಮೋದಿ ರಾಷ್ಟ್ರವಾದಿಯಾಗಿ ದ್ದರೆ ಸಿದ್ದರಾಮಯ್ಯ ವರು ಜಾತಿವಾದಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಮಾತನಾಡಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳೊಂದಿಗೆ ಟೆಲಿ ಸಂವಾದ ನಡೆಸಿದ್ದು, ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿ ತಂದಿದೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಅಭಿವೃದ್ದಿ ಬಗ್ಗೆ ಪ್ರಧಾನಿಗಳೊಂದಿಗೆ ಸಂವಾದ ನಡೆಸಿದ್ದು, ಇದು ದೇಶದಲ್ಲಿ ಪ್ರಥಮ ಪ್ರಯತ್ನವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರಮುಖರಾದ ಡಿ.ಎಸ್. ಅರುಣ್, ಬಿ.ಆರ್.ಮಧುಸೂದನ್, ಎಸ್. ಜ್ಞಾನೇಶ್ವರ್ ಮತ್ತಿತರರು ಉಪಸ್ಥಿತ ರಿದ್ದರು.