ಶಿವಮೊಗ್ಗ: ಮಕ್ಕಳ ರಕ್ಷಣೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ ಕೊಳ್ಳ ಸೂಚನೆ ನೀಡಿದರು.
ಆರ್‍ಟಿಇ-2009, ಪೋಕ್ಸೋ-2012 ಹಾಗೂ ಬಾಲನ್ಯಾಯ ಕಾಯ್ದೆ-2015 ರ ಅನುಷ್ಟಾನ ಕುರಿತು ಭಾಗೀದಾರರೊಂದಿಗೆ ಜೂ.21 ರಂದು ಜಿ.ಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಮತ್ತು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು ಇದು ಆಘಾತಕಾರಿ ವಿಷಯವಾಗಿದೆ. ಮಕ್ಕಳನ್ನು ಈ ಎಲ್ಲ ಪಿಡುಗುಗಳಿಂದ ರಕ್ಷಿಸಲು ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಆರ್‍ಡಿಪಿಆರ್ ಸೇರಿದಂತೆ 10 ಇಲಾಖೆಗಳು ಅತ್ಯಂತ ಜವಾಬ್ದಾರಿಯಿಂದ ಮತ್ತು ಸಮನ್ವಯತೆ ಸಾಧಿಸಿ, ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯಿಂದಾಗಿಯೇ ಮಕ್ಕಳ ವಿರುದ್ದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಮಕ್ಕಳ ರಕ್ಷಣೆ ಸಂಬಂಧ ಈ ಹತ್ತೂ ಇಲಾಖೆಗಳು ಪ್ರತಿ ತಿಂಗಳಿಗೆ ಓರ್ವ ಇಲಾಖೆ ನೋಡಲ್ ಇಲಾಖೆಯಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಡಿವೈಎಸ್‍ಪಿ ಹಾಗೂ ಹಿರಿಯ ಮಕ್ಕಳ ಪೊಲೀಸ್ ಅಧಿಕಾರಿ ಬಾಬು ಅಂಜನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.