ಶಿವಮೊಗ್ಗ : ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಈ ಭಾಗದ ಜನತೆಗೆ ಆರೋಗ್ಯ ಸೇವೆಯನ್ನು ನೀಡುವ ನಿಟ್ಟಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಂಜಪ್ಪ ಆಸ್ಪತ್ರೆಯಲ್ಲಿ ಇದೀಗ ಪ್ರಥಮ ಬಾರಿಗೆ ಬೆನ್ನುಮೂಳೆ ಹಾಗೂ ಮೂಲೆ ಶಸ್ತ್ರಚಿಕಿತ್ಸಾ ತಜ್ಞರ ತಂಡದೊಂದಿಗೆ ಹೊಸ ಸಾಧನೆಯ ದಾಪುಗಾಲನ್ನು ಇಟ್ಟಿದೆ.
ಕಳೆದ ಜು.೧೭ರಂದು ರೋಗಿಯೊಬ್ಬ ರಿಗೆ ನಂಜಪ್ಪ ಆಸ್ಪತ್ರೆಯ ಇತಿಹಾಸ ದಲ್ಲಿಯೇ ಪ್ರಥಮ ಬಾರಿಗೆ odontoid screw Fixation ಶಸ್ತ್ರಚಿಕಿತ್ಸೆಯನ್ನು ಬೆನ್ನು ಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಡಾ|| ದೀಪಕ್ ಹೆಚ್.ಜಿ., ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ||ಮಂಜುನಾಥ್ ಹಾಗೂ ಅರವಳಿಕೆ ತಜ್ಞ ಡಾ||ಅರ್ಜುನ್ ಭಾಗವತ್ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಸುಮಾರು ೫೫ ವರ್ಷ ವಯೋಮಾನದ ಚನ್ನಬಸಪ್ಪ ಎಂಬುವರಿಗೆ ಕಳೆದ ಜು.೧೬ರಂದು ಕತ್ತು ಮೂಳೆ ಮುರಿತ (odontoid fracture) ಕ್ಕೆ ಒಳಗಾಗಿದ್ದು ಇದಕ್ಕಾಗಿ ಚಿಕಿತ್ಸೆ ಪಡೆಯಲು ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಪರೀಕ್ಷಿಸಿದ ವೈದ್ಯರ ತಂಡ ಮರುದಿನವೇ ಒಡೊಂಟೊಯಿಡ್ ಸ್ಕ್ರೂ ಫಿಕ್ಸೇಷನ್ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ಅದರಲ್ಲಿ ಯಶಸ್ಸು ಕೂಡಾ ಸಾಧಿಸಿದರು.
ಒಡೊಂಟೊಯಿಡ್ ಸ್ಕ್ರೂ ಫಿಕ್ಸೇಷನ್ ಎಂದರೆ ಏನು?
ಒಡೊಂಟೊಯಿಡ್ ಎಂದರೆ ಕುತ್ತಿಗೆಯ ಎರಡನೆ ಮೂಳೆಯ ಒಂದು ಭಾಗ, ಕುತ್ತಿಗೆ ತಿರುಗುವ ಪ್ರಕ್ರಿಯೆ ಮೊದಲ ಮೂಳೆ ಹಾಗೂ ಒಡೊಂಟೊಯಿಡ್ ಮೂಳೆಗಳ ಸಹಾಯದಿಂದ ಸಾಧ್ಯವಾಗುತ್ತದೆ. ಒಡೊಂಟೊಯಿಡ್ ಮೂಳೆ ಮುರಿತದಿಂದ ಕುತ್ತಿಗೆಯ ಮೊದಲನೆ ಮೂಳೆ ತನ್ನ ಸ್ಥಿರತೆಯನ್ನು ಕಳೆದುಕೊಳ್ಳುತ್ತದೆ. ಹಾಗೂ ಕುತ್ತಿಗೆಯಲ್ಲಿ ಹಾದು ಹೋಗುವ ಬೆನ್ನು ಹುರಿಗೆ ಪೆಟ್ಟಾಗುತ್ತದೆ. ಒಡೊಂಟೊಯಿಡ್ ಮೂಳೆ ಮುರಿತದಿಂದಾಗಿ ಎಷ್ಟೋ ಜನ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಈ ಮೂಳೆ ಮುರಿತ ಶೇ.೮೦ ರಷ್ಟು ಕೂಡಿಕೊಳ್ಳುವುದಿಲ್ಲ, ಕೆಲವು ಬಾರಿ ಸೊಟ್ಟವಾಗಿ ಕೂಡಿಕೊಳ್ಳುತ್ತವೆ.
ಈ ಮೂಳೆಯ ಶಸ್ತ್ರಚಿಕಿತ್ಸೆ ತುಂಬಾ ಕಷ್ಟಕರ, ಏಕೆಂದರೆ ಮೂಳೆ ತುಂಬಾ ಚಿಕ್ಕದಾಗಿದ್ದು, ಆ ಚಿಕ್ಕ ಮೂಳೆಯ ತುಂಡಿನಲ್ಲಿ ಸ್ಕ್ರೂಗಳನ್ನು ಅಳವಡಿಸುವುದು ತುಂಬಾ ಕಷ್ಟಕರ, ಹಾಗಾಗಿ ಚನ್ನಬಸಪ್ಪನವರಿಗೆ ಕನಿಷ್ಟ ಸೀಳುಗಾಯದ ಮುಖಾಂತರ ಕತ್ತಿನ ಮುಂಭಾಗದಿಂದ ಮೂಳೆಗೆ ಚಿಕ್ಕ ಸ್ಕ್ರೂ ಅಳವಡಿಸಲಾಗಿದ್ದು, ಕತ್ತಿನ ಚಲನೆಯನ್ನು ಉಳಿಸಿಕೊಳ್ಳಲಾಗಿದೆ. ಈ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯಲ್ಲಿ ರಕ್ತಸ್ರಾವ, ನೋವಿನ ಪ್ರಮಾಣ ಹಾಗೂ ಶಸ್ತ್ರಚಿಕಿತ್ಸೆಗೆ ತಗಲುವ ಸಮಯವು ಕಮ್ಮಿಯಾಗಿದ್ದು ರೋಗಿಯು ಬೇಗನೆ ಚೇತರಿಸಿಕೊಳ್ಳುತ್ತಾರೆ.
ಇದುವರೆಗೆ ಈ ಶಸ್ತ್ರಚಿಕಿತ್ಸೆಯು ಕೇವಲ ಮಹಾನಗರಗಳಲ್ಲಿ ಮಾತ್ರ ಲಭ್ಯವಿದ್ದು ಇದೀಗ ನಂಜಪ್ಪ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ನಡೆಸುವ ನಿಟ್ಟಿನಲ್ಲಿ ಅಲ್ಲಿನ ವೈದ್ಯರು ಯಶಸ್ವಿಯಾಗಿದ್ದಾರೆ.