ಬೆಂಗಳೂರು: ಇಂದು ಬೆಳಗ್ಗೆ ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಬಸ್ ಉರಿದಿದೆ. ನಗರದ ಎಂಜಿ ರಸ್ತೆಯಲ್ಲಿ ಘಟನೆ ನಡೆದಿದೆ. ಬಸ್ನಲ್ಲಿ 30 ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರೋಸ್ ಗಾರ್ಡನ್ ನಿಂದ ಶಿವಾಜಿನಗರದ ಕಡೆಗೆ ಬಿಎಂಟಿಸಿ ಬಸ್ ತನ್ನ ದಿನನಿತ್ಯದ ಸಂಚಾರವನ್ನು ಮಾಡುತ್ತಿತ್ತು. ಬಸ್ ಅನಿಲ್ ಕುಂಬ್ಳೆ ಜಂಕ್ಷನ್ ಹತ್ತಿರ ತಲುಪಿದ ಕೂಡಲೇ ಏಕಾಏಕಿ ಬೆಂಕಿ ಹತ್ತಿಕೊಂಡಿದೆ.
ಚಾಲಕ ಮತ್ತು ಕಾರ್ಯನಿರ್ವಾಹಕನ ಸಮಯ ಪ್ರಜ್ಞೆಯಿಂದ ನಡೆಯಬೇಕಾಗಿದ್ದ ಭಾರೀ ಅನಾಹುತವೊಂದು ತಪ್ಪಿದ್ದು, ಬೆಂಕಿ ಹತ್ತಿಕೊಂಡ ಕೂಡಲೇ ಗಮನಕ್ಕೆ ಬಂದ ಡ್ರೈವರ್, ಕೂಡಲೇ ಪ್ರಯಾಣಿಕರನ್ನು ಬಸ್‌ಗೆ ಬೆಂಕಿ ಬಿದ್ದಿದೆ, ಬಸ್‌ನಿಂದ ಬೇಗ ಬೇಗ ಇಳಿಯಿರಿ ಎಂದು ಸೂಚನೆ ನೀಡಿದ್ದಾರೆ. ಪ್ರಯಾಣಿಕರು ಕೂಡ ತಟಪಟಂತ ಇಳಿದು ಅನಾಹುತದಿಂದ ಪಾರಾಗಿದ್ದಾರೆ.
ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್‌ನಿಂದ ಮೇಲೆದ್ದ ಭಾರಿ ಪ್ರಮಾಣದ ಹೊಗೆ ಪಕ್ಕದಲ್ಲಿದ್ದ ಮೆಟ್ರೋ ನಿಲ್ದಾಣವನ್ನು ಸಹ ಆವರಿಸಿತ್ತು.