ಶಿವಮೊಗ್ಗ: ಕಳೆದ ಬಜೆಟ್‌ನಲ್ಲಿ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಪಶುಪಾಲನಾ ಇಲಾಖೆ ಇತರ ವೆಚ್ಚಗಳಿಗೆ ಬಳಕೆ ಮಾಡಿದೆ ಎಂಬ ಆರೋಪವಿದೆ. ಕೂಡಲೇ ಸರ್ಕಾರ ಸ್ಪಷ್ಟನೆ ನೀಡಬೇಕು. ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಇಂದು ಹಸುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರೈತರಿಗೆ ೮ ತಿಂಗಳಿನಿಂದ ಪ್ರೋತ್ಸಾಹ ಧನ ಬಾಕಿ ಇದೆ. ಕೇಳಿದರೆ ಅಧಿಕಾರಿಗಳು ಮತ್ತು ಇಲಾಖೆ ಆರ್ಥಿಕ ಇಲಾಖೆ ಮೇಲೆ ಬೊಟ್ಟು ಮಾಡುತ್ತಾರೆ. ಬರಪರಿಹಾರದ ಹಣವು ಇಲ್ಲ, ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಭೂ ಸಿರಿ, ರೈತ ವಿದ್ಯಾನಿಧಿ, ಯೋಜನೆಯನ್ನು ನಿಲ್ಲಿಸಲಾಗಿದೆ. ದುಪ್ಪಟ್ಟು ಹಣ ಟ್ರಾನ್ಸಾಫಾರಂಗಳಿಗೆ ರೈತರು ನೀಡುವಂತಾಗಿದೆ. ಮುದ್ರಾಂಕ ದರ, ಪೆಟ್ರೋಲ್ ಡಿಸೇಲ್ ದರ, ಆಸ್ತಿನೊಂದಣಿ ದರ, ಶೇ. ೩೦ರಷ್ಟು ಹೆಚ್ಚಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಪ್ರಾರಂಭಿಸಿಲ್ಲ. ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. ೮೨೪ ರೈತರ ಆತ್ಮಹತ್ಯೆಯಾಗಿದೆ. ಪಶು ಆಹಾರ, ಪ್ರತಿ ಮೆಟ್ರಿಕ್ ಟನ್‌ಗೆ ೫೦೦ರೂ. ಹೆಚ್ಚಳವಾಗಿದೆ ಎಂದು ಆರೋಪಿಸಿದರು.
ಹಾಲಿನ ದರ ಶೇ.೪ರಷ್ಟು ಏರಿಸಿ ಆ ಹಣವನ್ನು ರೈತರಿಗೆ ತಲುಪಿಸುತ್ತೇವೆ ಎಂದು ಹೇಳಿಕೆ ಕೊಟ್ಟು ಇದುವರೆಗೂ ನೀಡಿಲ್ಲ. ಮತ್ತೆ ಈಗ ೨ ರೂ. ಹೆಚ್ಚಿಸಿದ್ದಾರೆ. ಒಟ್ಟು ೬ ರೂ.ಗಳನ್ನು ಇದುವರೆಗೂ ಏರಿಸಿದ್ದು, ಆ ಹಣವನ್ನು ಕೂಡಲೇ ರೈತರಿಗೆ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಮೋರ್ಚಾ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಸಿದ್ದಲಿಂಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಆರ್.ಕೆ.ಸಿದ್ರಾಮಣ್ಣ, ದತ್ತಾತ್ರಿ, ಗಣೇಶ್ ಬಿಳಕಿ, ಶಿವರಾಜ್, ವಿನ್ಸಂಟ್, ಮೋಹನ್‌ರೆಡ್ಡಿ, ದೀನ್‌ದಯಾಳ್, ಪ್ರಕಾಶ್ ಕುಕ್ಕೆ, ಅಣ್ಣಪ್ಪ ಇನ್ನಿತರರಿದ್ದರು.