ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣನವರ ಜಾಮೀನು ಅರ್ಜಿ ಇಂದು ವಜಾಗೊಂಡಿದೆ.
ಎರಡನೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣ, ಕೆ.ಆರ್.ನಗರದ ಅಪಹರಣ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಪ್ರಜ್ವಲ್‌ರನ್ನ ಎಸ್‌ಐಟಿ ವಶಕ್ಕೆ ಪಡೆದಿತ್ತು. ಕಸ್ಟಡಿ ಅವಧಿ ಮುಗಿಯುತ್ತಿದ್ದಂತೆ ಇಂದು 42ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು.
ಈಗಾಗಲೇ ಮೂರು ಕೇಸ್‌ಗಳನ್ನ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ 4ನೇ ಕೇಸ್ ದಾಖಲಾದಂತಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳದ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ ಎಂದು ದೂರು ದಾಖಲಾಗಿದೆ. ಇದೇ ಪ್ರಕರಣದ ತನಿಖೆಗಾಗಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ ಎಸ್‌ಐಟಿ ಅಧಿಕಾರಿಗಳು, 4 ದಿನ ಕಸ್ಟಡಿಗೆ ಪಡೆದಿದ್ದರು. ಜೂನ್ 29ರವರೆಗೆ ಪ್ರಜ್ವಲ್‌ನನ್ನ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ಕೋರ್ಟ್ ಆದೇಶಿಸಿತ್ತು.