ಪಾಳು ಬಿದ್ದ ಜಾಗದಂತಿರುವ ಇಲಾಖೆ ಆವರಣ, ಕಸದ ಕೊಂಪೆಯಾದ ನರ್ಸರಿ ಜಾಗ
ಶಿವಮೊಗ್ಗ : ನಗರದ ಗಾಂಧಿ ಪಾರ್ಕ್ ಆವರಣದಲ್ಲಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಇದ್ದ ಇಲ್ಲದಂತಿದೆ. ಗಾಂಧಿ ಪಾರ್ಕ್ ನಂತಹ ಹಸಿರು ತುಂಬಿಕೊಂಡ ಸುಂದರ ಜಾಗದಲ್ಲಿಯೇ ಈ ಇಲಾಖೆಯ ಕಚೇರಿ ಇದ್ದರೂ, ಸರಿಯಾದ ನಿರ್ವಹಣೆ ಇಲ್ಲದೆ ಇಲಾಖೆಯ ಆವರಣ ಪಾಳು ಬಿದ್ದ ಭೂಮಿಯಂತಾಗಿದೆ.
ಅಲಂಕಾರದ ಗಿಡಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಉದ್ದೇಶದೊಂದಿಗೆ ನಿರ್ಮಾಣ ಮಾಡಲಾಗಿದ್ದ ಪಾಲಿಗ್ಲಾಸ್ ಹೌಸ್ ಸರಿಯಾದ ನಿರ್ವಹಣೆ ಕಾಣದೆ, ಮುರಿದು ಹಾಳಾಗಿ ದುಸ್ಥಿತಿ ತಲುಪಿದೆ.ಇನ್ನು ನರ್ಸರಿ ಗಿಡಗಳನ್ನು ಬೆಳೆಯುವುದಕ್ಕಾಗಿ ನಿರ್ಮಿಸಿದ್ದ ನರ್ಸರಿ ಆವರಣ ಕಳೆ ಬೆಳೆದು ಹಾಳಾಗಿದೆ. ಇಷ್ಟಾಗಿಯೂ ಇಲಾಖೆಯ ಯಾವುದೇ ಸಿಬ್ಬಂದಿ ಈ ಬಗ್ಗೆ ಇದುವರೆಗೂ ಗಮನ ಹರಿಸದಿರುವುದು ದುರಂತವೇಹೌದು.
ಜಿಲ್ಲಾ ತೋಟಗಾರಿಕೆ ಇಲಾಖೆ ಅತ್ಯುತ್ತಮ ಜಾಗದಲ್ಲಿದೆ ಎನ್ನುವುದು ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಬಹುತೇಕ ಜನರಿಗೆ ಗೊತ್ತಿರುವ ಸಂಗತಿ. ಗಾಂಧಿ ಪಾರ್ಕ್ ಗೆ ಹೊಂದಿಕೊಂಡಂತಹ ವಿಶಾಲವಾದ ಜಾಗದಲ್ಲಿಯೇ ಈ ಇಲಾಖೆ ಇದೆ. ಬಹುಶಃ ನಗರ ಮಧ್ಯೆ ಇಷ್ಟೊಂದು ವಿಶಾಲವಾದ ಜಾಗ ಬೇರೆಯಾವುದೇ ಇಲಾಖೆಗೂ ಸಿಕ್ಕಿಲ್ಲ. ಸಿಕ್ಕಿದ್ದರೂ, ಇಲ್ಲಿರುವ ವಾತಾವಣ ಅಲ್ಲಿಲ್ಲ. ಅಷ್ಟೊಂದು ವಿಶಾಲ ಮತ್ತು ಸುಂದರವಾದ ಜಾಗದಲ್ಲಿರುವ ತೋಟಗಾರಿಕೆ ಇಲಾಖೆ ಅಲ್ಲಿನ ಬೇಜವಾಬ್ದಾರಿ ಅಧಿಕಾರಿಗಳಿಂದ ಸರಿಯಾದ ನಿರ್ವಹಣೆ ಕಾಣದೆ ಹಾಳು ಕೊಂಪೆಯಾಗಿರುವುದನ್ನುನೀವೊಮ್ಮೆ ಕಣ್ಣಾರೆ ಕಾಣಲೇ ಬೇಕು.
ಸರ್ಕಾರ ಯಾವ ಇಂಜಿನಿಯರ್ ಅಥವಾ ಅಧಿಕಾರಿ ಈ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಐಡಿಯಾ ಕೊಟ್ಟನೋ ಗೊತ್ತಿಲ್ಲ, ಇಲ್ಲಿನ ಒಂದೊಂದು ಕಟ್ಟಡವೂ ಒಂದೊಂದು ದಿಕ್ಕಿಗೆ ಮುಖ ಮಾಡಿ ನಿಂತಿವೆ. ಯಾವ ಕಟ್ಟಡದಲ್ಲಿ ಯಾರೆಲ್ಲ ಅಧಿಕಾರಿಗಳು, ಯಾವೆಲ್ಲ ವಿಭಾಗಗಳು ಕೆಲಸ ಮಾಡುತ್ತವೆಯೋ ಅದನ್ನು ತಿಳಿದುಕೊಂಡು ಹುಡುಕಾಡುವುದಕ್ಕೆ ಒಂದು ದಿವಸ ಬೇಕು. ಅಷ್ಟೊಂದು ಗೊಂದಲ ಹುಟ್ಟು ಹಾಕುವಂತೆ ಇಲ್ಲಿ ಇಲಾಖೆಯ ಕಟ್ಟಡಗಳು ಎದ್ದು ನಿಂತಿವೆ. ಇಷ್ಟಕ್ಕೂ ಸರ್ಕಾರ ಯಾವ ಪುರುಷಾರ್ಥಕ್ಕೆ ಈ ರೀತಿ ಮಾಡಿದೆಯೋ ಅದು ಭಗವಂತನಿಗೆ ಗೋತ್ತು.
ಸರ್ಕಾರದ ಸೌಲಭ್ಯ ಕೋರಿ ಇಲ್ಲಿಗೆ ಬರುವ ರೈತರು, ಫಲಾನುಭವಿಗಳು ಸಂಬಂಧಿಸಿದ ಕಚೇರಿಗಳನ್ನು ಹುಡುಕಾಡುವುದಕ್ಕೆ ಇಷ್ಟೇಲ್ಲ ಗೊಂದಲ ಸೃಷ್ಟಿಸಲಾಗಿದೆ ಅಂದಮೇಲೆ, ಸಾರ್ವಜನಿಕರಿಗೆ ಸರ್ಕಾರದಿಂದ ಯಾವ ಯಾವ ಸೌಲಭ್ಯ ಸಿಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಅಧಿಕಾರಿಗಳಿಂದ ಪಡೆಯುವುದು ಅಷ್ಟು ಸುಲಭವೇನಿಲ್ಲ. ದಿಕ್ಕಪಾಲಾದ ಅಧಿಕಾರಿಗಳು ನಿಮ್ಮನ್ನು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸುಖಾ ಸುಮ್ಮನೆ ಓಡಾಡಿಸದೆ ಬಿಡುವುದಿಲ್ಲ. ಗಾಂಧಿ ಪಾರ್ಕ್ ನ ಹಸಿರು ವಾತಾವರಣದ ತಂಪಾದ ಜಾಗದಲ್ಲಿ ಕುಳಿತು ಬೆಚ್ಚನೆ ತಿಂಗಳ ಸಂಬಳ ಎಣಿಸುವ ಈ ಮಂದಿ, ಕೆಲಸ ಮಾಡುವುದಕ್ಕಿಂತ ಟೀ ಪಾರ್ಟಿಗಳಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದನ್ನು ನೋಡಿದರೆ, ಈ ಇಲಾಖೆ ಯಾಕೆ ಬೇಕು ಅಂತ ನಿಮಗೂ ಅನ್ನಿದೆ ಇರದು.
ಅದು ಹಾಳಾಗಿ ಹೋಗಲಿ, ಈ ಕಚೇರಿಯ ಆವರಣ ನೋಡಿದರೆ ಎಂತವರಿಗೂ ಸಿಟ್ಟು ಬಾರದೆ ಇರದು. ಜಿಲ್ಲಾಧಿಕಾರಿಗಳು ಒಮ್ಮೆ ಇಲ್ಲಿಗೆ ಹೋಗಲೇಬೇಕಿದೆ. ಸಾರ್ವಜನಿಕರಿಗೆ ಕೈತೋಟ ಅಥವಾ ತಾರಸಿ ತೋಟ ಮಾಡುವುದಕ್ಕೆ ಇಲಾಖೆ ಮಾಹಿತಿ ಅಥವಾ ಗಿಡಗಳನ್ನು ಒದಗಿಸಬೇಕು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಇಲಾಖೆತಾರಸಿ , ಕೈತೋಟದ ಗಿಡ ಕೊಟ್ಟಿಲ್ಲ, ಹಾಗೆಯೇ ಈ ಬಗ್ಗೆ ಯಾವುದೇ ಕಾರ್ಯಾಗಾರವನ್ನೂ ಮಾಡಿಲ್ಲ ಎನ್ನುವ ದೂರುಗಳು ಸಾರ್ವಜನಿಕರಿಂದಲೇ ಕೇಳಿ ಬಂದಿವೆ. ಹಾಗೆಯೇ ಇಲಾಖೆಯೂ ಅಲಂಕಾರಿಕ ಗಿಡಗಳನ್ನು ಬೆಳೆಸಿ, ಸಾರ್ವಜನಿಕರಿಗೆ ನೀಡಬೇಕು. ಇದಕ್ಕಂತೆಲೇ ಈ ಹಿಂದೆ ಇಲಾಖೆ ಆವರಣದಲ್ಲಿ ಪಾಲಿಗ್ಲಾಸ್ ಹೌಸ್ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಅದು ಸರಿಯಾದ ನಿರ್ವಹಣೆ ಕಂಡಿಲ್ಲ. ಜತೆಗೆ ಅಂತಹ ಗಿಡ ಬೆಳೆಸುವ ಪರಿಪಾಠವು ಇದ್ದಂತಿಲ್ಲ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಇಲ್ಲಿ ಹಾಳಾದ ಪಾಲಿಗ್ಲಾಸ್ ಹೌಸ್.
ನರ್ಸರಿ ಆವರಣದ ಸ್ಥಿತಿಯಂತೂ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿಗೆ ಇನ್ನು ಕನ್ನಡಿ ಹಿಡಿದಂತಿದೆ. ಇಲ್ಲಿ ಸಸಿ ಬೆಳೆಸದೆ ಅದೆಷ್ಟೋ ವರ್ಷ ಕಳೆದಿವೆ. ಗಿಡ ಬೆಳೆಸುವುದು ಬಿಡಿ, ಸೂಕ್ತ ನಿರ್ವಹಣೆ ಸಹ ಮಾಡಿಲ್ಲ. ಪಾಳು ಬಿದ್ದ ಜಾಗದಂತಿರುವ ಇಲ್ಲಿ ಯಾವುದೇ ಚಟುವಟಿಕೆ ಇಲ್ಲ.ಇನ್ನು ಬಾಲರಾಜ್ ಅರಸ್ ರಸ್ತೆ ಬದಿ ಪೋಸ್ಟ್ ಆಫೀಸ್ ಪಕ್ಕ ಗಿಡಗಳನ್ನು ಮಾರಾಟ ಮಾಡುವ ವ್ಯವಸ್ಥೆ ಇದ್ದರೂ ಒಮ್ಮೆ ಇಲಾಖೆ ಮುಖ್ಯ ಗೇಟಿನಿಂದ ಒಳಹೋದರೆ ಆ ಭಾಗದಲ್ಲಿ ಸಿಗದೆ ಸುತ್ತು ಬಳಸಿ ಮಾರಾಟ ಕೇಂದ್ರ ಕಡೆ ಬರಬೇಕು. ಒಟ್ಟಾರೆ ಸರ್ಕಾರಿ ಇಲಾಖೆ ಯಲ್ಲಿ ಒಂದಿಷ್ಟು ಹೂವಿನ ಗಿಡಗಳು, ಅಲಂಕಾರಿಕ ಗಿಡಗಳನ್ನು ಕೊಳ್ಳಬೇಕು ಎಂದು ಬಂದವರು ಅನಿವಾರ್ಯವಾಗಿ ಖಾಸಗಿ ಸರ್ಸರಿ ಕಡೆ ಹೆಜ್ಜೆ ಹಾಕುವಂತೆ ಮಾಡುತ್ತದೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಕಚೇರಿ ಆವರಣದೊಳಗೆ ಸುಮಾರು ಹತ್ತು ಅಡಿ ಅಗಲದಷ್ಟು ಗೇಟಿನಿಂದ ಇನ್ನೊಂದು ತುದಿವರೆಗೂ ದಪ್ಪ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇದನ್ನು ಯಾವ ಪುರುಷಾರ್ಥಕ್ಕೆ ಮಾಡಲಾಗಿದೆಯೋ ದೇವರಿಗೆ ಗೊತ್ತು.ಸಿಮೆಂಟ್ ರಸ್ತೆಯ ಅಗತ್ಯವೇ ಇರಲಿಲ್ಲ. ಆದರೂ ಅಧಿಕಾರಿಗಳ ಕಾರು, ಬೈಕುಗಳು ಕೆಸರ ಮೆತ್ತಿಕೊಳ್ಳದಂತೆ ಮಾಡುವುದಕ್ಕೆ ಲಕ್ಷಾಂತರ ರೂ. ಖರ್ಚು ಮಾಡಲಾಗಿದೆಯೇ ಹೊರತು ಮತ್ತೇನಕ್ಕೂ ಅಲ್ಲ. ಇಷ್ಟಕ್ಕೂ ತೋಟಕಗಾರಿಕೆ ಇಲಾಖೆ ಜಿಲ್ಲೆಯ ಎಷ್ಟು ಜನರಿಗೆ ಹೇಗೆ ಉಪಯೋಗ ಆಗುತ್ತಿದೆ ಎನ್ನುವುದನ್ನು ದಾಖಲೆ ತೆಗೆದು ನೋಡಿದರೆ ಅತ್ಯಂತ ಕಡಿಮೆ ಜನಕ್ಕೆ ಮಾತ್ರ. ಇಷ್ಟಕ್ಕೂ ಈ ಇಲಾಖೆ ಯಾಕೆ ಬೇಕು?
ಜಿಲ್ಲೆಯ ರೈತರ ಹಿತಾದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಒಮ್ಮೆಇಲ್ಲಿಕೆ ಭೇಟಿ ನೀಡುವುದು ಸೂಕ್ತ.
………………………………………………
ಒಂದಲ್ಲ, ಎರಡಲ್ಲ ಹತ್ತಾರು ವರ್ಷಗಳಿಂದ ಇಲ್ಲಿ ಜಂಡಾ ಹೊಡೆದು ಕುಳಿತ ಅಧಿಕಾರಿಗಳ ಸಂಖ್ಯೆಯೇ ಇಲ್ಲಿ ಹೆಚ್ಚಿದೆ. ಅವರೆಲ್ಲ ಎಷ್ಟು ಸುಖವಾಗಿದ್ದಾರೆನ್ನುವುದನ್ನು ವರ್ಣಿಸುವುದಕ್ಕೂ ಕಷ್ಟ. ಬೆಳಗ್ಗೆ ೧೦ ಗಂಟೆಗೆ ಕಚೇರಿ ಬಂದರೆ, ಹಾಜರಿ ಹಾಕಿ ನಾಪತ್ತೆಯಾದವರು, ಕೊನೆಗೆ ಊಟದ ಸಮಯಕ್ಕೊಮ್ಮೆ ಕಾಣಿಸಿಕೊಂಡು, ಸಂಜೆ ನಾಪತ್ತೆಯಾಗುವವರೆ ಹಲವರಿದ್ದಾರೆ. ಪರಿಸ್ಥಿತಿ ಹೀಗಿದ್ದರೆ, ಕೆಲಸ ಕಾರ್ಯಗಳಿಗಾಗಿ ಕಚೇರಿ ಬರುವ ರೈತರಿಗೆ ಇವರ ದರ್ಶನ ಭಾಗ್ಯ ಹೇಗೆ? ಆಕಸ್ಮಾತ್ ಅಲ್ಲಿನ ಅಧಿಕಾರಿಗಳ ಪೋನ್ ನಂಬರ್ ಇದ್ದು ನೀವು ಫೋನ್ ಮಾಡಿದರೆ, ಅದು ಸ್ವಿಚ್ಟಾಫ್ ಅಂತ ಬರುತ್ತದೆ. ಇಲ್ಲವೇ ರಿಂಗ್ ಆದರೂ, ಅವರು ಕರೆ ಸ್ವೀಕರಿವುದಿಲ್ಲ. ಅಷ್ಟೊಂದು ಮದ ಅವರಿಗೆ ನೆತ್ತಿಗೇರಿ ಕುಳಿತಿದೆ. ಇಲ್ಲಿ ಒಬ್ಬರಲ್ಲ, ಇಬ್ಬರಲ್ಲ ಹತ್ತಾರು ಅಧಿಕಾರಿ ಸಿಬ್ಬಂದಿಗಳಿದ್ದಾರೆ. ಪ್ರತಿ ತಿಂಗಳ ಹತ್ತಾರು ಲಕ್ಷ ಸಂಬಳ ಇವರಿಗೆ ಹೋಗುತ್ತದೆ. ಅದು ಸಾರ್ವಜನಿಕರ ತೆರಿಗೆಯಿಂದಲೇ ಸರ್ಕಾರ ಅವರಿಗೆ ನೀಡುತ್ತದೆ. ಆದರೆ ಅವರಿಂದ ಸಾರ್ವಜನಿಕರಿಗೆ ಲಾಭ ಏನು?