ಲೇಖನ : ಸೌಮ್ಯ ಗಿರೀಶ್
ಬಿದಿಗೆ ಚಂದ್ರಮನ ಕಾಣುವ ಸಡಗರ
ನಮ್ಮೆಲ್ಲರ ಜೀವನದ ಮೊದಲ ತುತ್ತಿನ ಸಂಗಾತಿಯಾಗಿ, ಚಂದಮಾಮನಾಗಿ ನೆಂಟಸ್ತಿಕೆ ಬೆಳೆಸಿಕೊಂಡ ಚಂದಿರ ಬಾನಂಗಳದಲ್ಲಿ ಬೆಳಕಲ್ಲಿ ಬೀಗುವುದನ್ನು ನೋಡುವುದೇ ಒಂದು ಚಂದ. ದಿನ ದಿನವೂ ಕ್ಷೀಣಿಸುತ್ತಾ ಮರೆಯಾದಾಗ “ಅಯ್ಯೋ ಚಂದಮಾಮ” ಇಲ್ಲ ಎಂದು ಮರುಗಿಸುವ ಅಮಾವಾಸ್ಯೆ ಕಳೆಯುತ್ತಿದ್ದಂತೆ ಪಾಡ್ಯದಿಂದ ಮತ್ತೆ ಬಾನಂಗಳದಲ್ಲಿ ಕಾಣಲು ಪ್ರಾರಂಭವಾಗುವ ಚಂದಿರ ಬಿದಿಗೆಯೊಂದಿಗೆ ಕಿರುನಗೆಯ ಆಕಾರದಲ್ಲಿ ನೋಡುವವರ ಮೊಗದಲ್ಲೂ ಕಿರುನಗೆ ಬೀರುತ್ತಾ ಮತ್ತೆ ಬೆಳಗಲು ಪ್ರಾರಂಭಿಸುತ್ತಾನೆ.
ಒಂದೆಡೆ ಚೌತಿ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಪ್ರತೀತಿ ಇದ್ದರೆ, ಮತ್ತೊಂದೆಡೆ ಅದೇ ಚಂದಿರನನ್ನು ಬಿದಿಗೆಯಂದು ನೋಡಲು, ದರ್ಶನ ಪಡೆಯಲು ಕಾತುರತೆ. ಇದೇ ಅಲ್ಲವೆ ನಮ್ಮ ನಂಬಿಕೆಗಳು, ಸಂಸ್ಕೃತಿಗಳಲ್ಲಿನ ವಿಭಿನ್ನತೆಗೆ ಸಾಕ್ಷಿ. ಯುಗಾದಿ ಬಂತೆಂದರೆ ಕೇವಲ ಬೇವು-ಬೆಲ್ಲ ಮಾತ್ರವಲ್ಲ ಪಾಡ್ಯದ ನಂತರ ಬಿದಿಗೆಯ ಸಡಗರವೂ ಜೋರು.
ಬಾನಂಗಳದಲ್ಲಿ ಮಂದಹಾಸ ಬೀರುತ್ತ ಹೊಸ ವರ್ಷದ ಭರವಸೆಯ ಬೆಳಕಿನ ಸಂಕೇತವಾದ ಚಂದಿರನನ್ನು ಕಂಡ ಕೂಡಲೇ ಕೈಯಲ್ಲಿ ಹಿಡಿದ ನೀರಿನಿಂದ ಅವನಿಗೆ ಆರ್ಘ್ಯ ಬಿಟ್ಟು, ಆಗಸದತ್ತ ಅರಿಶಿನ ಕುಂಕುಮ ಚೆಲ್ಲಿ, ವರ್ಷದ ಮೊದಲ ಚಂದಿರನ ದರ್ಶನ ಪಡೆಯುವ ಈ ಶುಭ ಘಳಿಗೆಗೆ ಅಕ್ಕ-ಪಕ್ಕದ ಮನೆಯವರು, ಬಂಧು-ಮಿತ್ರರು ಎಲ್ಲರೂ ಸಾಕ್ಷಿಯಾಗುತ್ತಾರೆ. ಚಂದಿರದ ನೋಡಿದ ಸಂಭ್ರಮದಲ್ಲಿ ಪರಸ್ಪರ ಬೇವು-ಬೆಲ್ಲ ಹಂಚಿಕೊಳ್ಳುತ್ತಾ ಜೀವನದಲ್ಲೂ ಕಹಿಯಾದ ಅಮಾವಾಸ್ಯೆಗಳು ಸರಿದು ಭರವಸೆಯ ಬಿದಿಗೆಯಿಂದ ಸವಿ ತುಂಬುವ ಹುಣ್ಣಿಮೆಯೂ ಇದೆ ಎಂಬ ಸಂದೇಶ ಸಾರುವ ಚಂದ್ರ ನಿಜಕ್ಕೂ ಬೇವು-ಬೆಲ್ಲದ ಸಂಕೇತ ಎಂದರೆ ತಪ್ಪಿಲ್ಲ.


