ಸಾಗರ: ಇಲ್ಲಿನ ಜನ್ನತ್ ನಗರದ ಆರು ವರ್ಷದ ಬಾಲಕ ಶಂಕಿತ ಡೇಂಗ್ಯೂಗೆ ಶನಿವಾರ ಬಲಿಯಾದ ಘಟನೆ ನಡೆದಿದ್ದು, ರಣಭೀಕರ ಮಳೆ ನಡುವೆಯೂ ಡೇಂಗ್ಯೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಜನ್ನತ್ ನಗರದ ಆರು ವರ್ಷದ ಬಾಲಕ ಮಹ್ಮದ್ ನಯಾನ್ ಮೃತ ಬಾಲಕನಾಗಿದ್ದು, ಕಳೆದ ಐದು ದಿನಗಳಿಂದ ನಯಾನ್ ತೀವೃ ಜ್ವರದಿಂದ ಬಳಲುತ್ತಿದ್ದನು. ಪೋಷಕರು ಬಾಲಕನಿಗೆ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರು. ಶುಕ್ರವಾರ ಬಾಲಕನಿಗೆ ತೀವ್ರ ಜ್ವರ ಮತ್ತು ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಜ್ವರ, ವಾಂತಿ ಜೊತೆಗೆ ಬಿ.ಪಿ. ಲೋ ಆಗಿದ್ದರಿಂದ ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಯಾನ್ ಶನಿವಾರ ಮೃತಪಟ್ಟಿದ್ದಾರೆ. ಇದರಿಂದ ಸಾಗರದಲ್ಲಿ ಶಂಕಿತ ಡೇಂಗ್ಯೂಗೆ ಬಲಿಯಾದವರ ಸಂಖ್ಯೆ ಎರಡಕ್ಕೇರಿದೆ.