ಸೊರಬ: ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಈ ನಡುವೆ ಮಂಗಳವಾರ ಆನವಟ್ಟಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ ಕುಸಿದು ಬಿದ್ದ ಆತಂಕಕಾರಿ ಘಟನೆ ನಡೆದಿದೆ.
ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ, ಕೊಠಡಿಯಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ ಎಂದು ತಿಳಿದುಬಂದಿದೆ.
ಶಾಲೆಯಲ್ಲಿ 104 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮಧ್ಯಾಹ್ನ ತರಗತಿ ಮುಗಿಸಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಗೋಡೆ ಕುಸಿದ ಕೊಠಡಿಯಲ್ಲಿ 31 ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ನೀಡಿದ ವಿಶ್ರಾಂತಿ ಸಮಯದಲ್ಲಿ ಕೊಠಡಿ ಗೋಡೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನಾಹುತವಾಗಿಲ್ಲ. ಆದರೆ, ಮೇಜು, ಆಸನಗಳು ಮತ್ತು ವಿದ್ಯಾರ್ಥಿಗಳ ಪಠ್ಯ ಪರಿಕರಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.
ಶಾಲೆಯು ಶಿಥಿಲಾವ್ಯಸ್ಥೆಯಲ್ಲಿದ್ದು, ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ದೂರುತ್ತಾರೆ. ತರಗತಿ ನಡೆಯುವ ವೇಳೆ ಗೋಡೆ ಕುಸಿದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ಸ್ಥಳಕ್ಕೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


