ಶಿವಮೊಗ್ಗ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಶಾಂತಿಯುತ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಭಯೋತ್ಪಾದಕರು ಎಂಬ ಆರೋಪ ಹೊರಿಸಿ ಅವರ ಮೇಲೆ ಪ್ರಯೋಗಿಸುವ ಅಸ್ತ್ರಗಳನ್ನು ರೈತರ ಮೇಲೆ ಪ್ರಯೋಗಿಸಿದ್ದೇ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಎಂದು ಎಸ್.ಕೆ.ಎಂ. ಅಖಿಲ ಭಾರತ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ ಹೇಳಿದ್ದಾರೆ.
ಅವರು ಇಂದು ಸರ್ಕಾರಿ ನೌಕರರ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಯಾವುದೇ ಇರಲಿ, ಇದೇ ರಾಜಕಾರಣ ಮುಂದುವರೆದರೆ ದೇಶದಲ್ಲಿ ರೈತರಿಗೆ ಉಳಿಗಾಲವಿಲ್ಲ. ಹೋರಾಟ ಮಾಡುವ ರೈತರನ್ನು ಖಲಿಸ್ತಾನಿ, ಉಗ್ರವಾದಿ ಪಟ್ಟ ಕಟ್ಟುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ, ತಮ್ಮ ಹಕ್ಕಿಗಾಗಿ ಹೋರಾಡಿದರೆ ಅವರ ಮೇಲೆ ದಮನಕಾರಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ರೈತ ಸಂಘಟನೆಗಳು ಮಾತ್ರ ಪ್ರಸ್ತುತ ಈ ದೇಶದಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡಬಹುದಾಗಿದೆ ಎಂದರು.
ನೀತಿ ಸಂಹಿತೆ ಜಾರಿಯಾದಾಗ ರೈತರು ಹೋರಾಟ ಸ್ಥಗಿತಗೊಳಿಸುತ್ತಾರೆ ಎಂಬ ಭಾವನೆ ಸರ್ಕಾರಕ್ಕಿತ್ತು. ಆದರೂ ಇದೇ ಮೊದಲ ಬಾರಿಗೆ ದೇಶದ ಇತಿಹಾಸದಲ್ಲಿ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ರೈತರ ಹೋರಾಟ ಮುಂದುವರೆಸಿ ಎಲ್ಲಾ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ನಮ್ಮ ಬಳಿ ಬಂದು ಮಂಡಿಯೂರಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ಇದು ನಮ್ಮ ಒಗ್ಗಟ್ಟಿಗೆ ಸಿಕ್ಕ ಫಲ ಎಂದರು.
ದಕ್ಷಿಣ ಭಾರತ ರಾಜ್ಯಗಳ ಎಂಎಸ್‌ಪಿ ಕೆಎಂ ಸಂಚಾಲಕ ಕುರುಬೂರು ಶಾಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಂಎಸ್‌ಪಿ ನಿಗದಿ ಮಾಡಬೇಕಾದ ಕೇಂದ್ರ ಯಾವುದೇ ನಿರ್ಧಾರ ಮಾಡಿಲ್ಲ. ದೇಶದ ಬೆನ್ನೆಲುಬು ರೈತ ಎನ್ನುತ್ತಾರೆ. ಆ ಬೆನ್ನೆಲುಬು ಮುರಿಯಲು ಹವಣಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕಾರದ ಕೆ.ವಿ. ಬಿಜು, ಅಭಿಮನ್ಯು ಕುಹರ್, ಲಲ್ವಿಂದರ್ ಸಿಂಗ್ ಔಲಾಖ್, ಸುಕ್ಷಿತ್ ಸಿಂಗ್, ಜಾಫರ್ ಖಾನ್, ಪಿ.ಆರ್. ಪಾಂಡ್ಯನ್, ಟಿ.ಎನ್. ರಾಮನ್ ಗೌಡರ್, ವೆಂಕಟೇಶ್ವರರಾವ್, ನರಸಿಂಹನಾಯ್ಡು, ಕರ್ನಾಟಕದ ಎಂ.ಪಿ. ಕರಿಬಸಪ್ಪಗೌಡ ಇದ್ದರು.