ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಸುಸಜ್ಜಿತ ಸ್ಲೇಟಿಂಗ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದ್ದಾರೆ.
ಸಮೀಪದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಶಿವಮೊಗ್ಗದ ನಮ್ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹ ಪ್ರಾಯೋಜಕತ್ವದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ರೋಡ್ ರೇಸ್ ಸ್ಕೇಟಿಂಗ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ವ್ಯವಸ್ಥಿತವಾದ ಸ್ಕೇಟಿಂಗ್ ಕ್ರೀಡಾಂಗಣ ಇಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯನ್ನು ನಡೆಸಲು ಕನಿಷ್ಠ 200 ಮೀಟರ್ ವಿಸ್ತೀರ್ಣದ ಅತ್ಯಂತ ವ್ಯವಸ್ಥಿತ ಸ್ಕೇಟಿಂಗ್ ಕ್ರೀಡಾಂಗಣ ಅಗತ್ಯ ಎಂದು ಕೇಳಿದ ಬೇಡಿಕೆಗೆ ಆ ಕ್ಷಣದಲ್ಲೇ ಸ್ಪಂದಿಸಿ, ಈ ಭರವಸೆ ನೀಡಿದರು.
ನಾಲ್ಕನೇ ಬಾರಿ ಶಿವಮೊಗ್ಗ ಜಿಲ್ಲೆಯ ಜನತೆ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ನಮ್ಮ ಮುಖ್ಯ ಉದ್ದೇಶ. ನಾನು ನಾಲ್ಕನೇ ಬಾರಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದ ಈಗಾಗಲೇ ರಸ್ತೆ, ರೈಲು, ವಿಮಾನ, ಶಿಕ್ಷಣ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಈಗ ಕ್ರೀಡಾ ಸಚಿವರನ್ನು ಭೇಟಿ ಮಾಡಿ ಶಿವಮೊಗ್ಗದಲ್ಲಿ ಅತ್ಯಂತ ವ್ಯವಸ್ಥಿತವಾದ ಕ್ರೀಡಾಂಗಣವನ್ನು ಮಾಡಿಸಿ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಡಿಎಸ್ ಅರುಣ್ ಅವರು ಸದ್ಯದಲ್ಲೇ ನಡೆಯಲಿರುವ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಜಾಗದ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಚರ್ಚಿಸಲಿದ್ದಾರೆ. ನಾನು ಕೇಂದ್ರ ಸರ್ಕಾರದಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಅನುದಾನವನ್ನು ತರುತ್ತೇನೆ. ನನಗೆ ಈ ಬಗ್ಗೆ ವಿಶ್ವಾಸವಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ಬಗೆಯ ಅಭಿವೃದ್ಧಿಗಳಿಗೆ ನಾನು ಸದಾ ಸಕ್ರಿಯನಾಗಿರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್, ಶಿವಮೊಗ್ಗ ನಮ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್ ಪ್ರಧಾನ ಕಾರ್ಯದರ್ಶಿ ಎಂ ರವಿ ಹಾಗೂ ಕರ್ನಾಟಕ ರಾಜ್ಯ ರೋರಲ್ ಕೇಟಿಂಗ್ ಅಸೋಸಿಯೇಷನ್ ಪ್ರಮುಖರು ಮತ್ತು ಅಂತರಾಷ್ಟ್ರೀಯ ಮಟ್ಟದ ತರಬೇತಿ ಪಡೆದ ಅಂಪೈರ್ ಗಳು ಉಪಸ್ಥಿತರಿದ್ದರು.