ರಾಜ್ಯ ಸರ್ಕಾರಕ್ಕೆ ಆಲ್ ಇಂಡಿಯಾ ಬಿಎಸ್ಪಿ ಮುಖಂಡ ಎ.ಡಿ.ಶಿವಪ್ಪ ಒತ್ತಾಯ
ಶಿವಮೊಗ್ಗ: ಒಳ ಮೀಸಲಾತಿ ಹಾಗೂ ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಶಿವಪ್ಪ ಒತ್ತಾಯಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಒಳ ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ಮಾಡಿರುವ ಕಾಂತರಾಜ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಒಳ ಮೀಸಲಾತಿ ತಕ್ಷಣವೇ ಜಾರಿಗೆ ತರಲು ಕರ್ನಾಟಕದಲ್ಲಿ ಅತ್ಯಂತ ಸೂಕ್ತವಾದ ವಾತವರಣ ನಿರ್ಮಾಣವಾಗಿದೆ ಹಾಗೂ ಒಳ ಮೀಸಲಾತಿಯ ಸುಪ್ರೀಂಕೋರ್ಟ್ ತೀರ್ಪನ್ನು ಎಸ್ಸಿ ಪಟ್ಟಿಯೊಳಗಿನ ಬಹುತೇಕ ಉಪಜಾತಿಗಳು ಸ್ವಾಗತಿಸಿವೆ. ಆದರೂ ಒಂದೆರಡು ಉಪಜಾತಿಗಳು ಕ್ಷೀಣವಾಗಿ ವಿರೋಧ ವ್ಯಕ್ತಪಡಿಸಿವೆ. ಆದರೆ ನ್ಯಾ. ಸದಾಶಿವ ಆಯೋಗ ನಡೆಸಿದ ಅಧ್ಯಯನದ ರೀತಿಯ ಬಗ್ಗೆ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.
೨೦೧೫ರಲ್ಲಿ ಕಾಂತರಾಜ್ ಆಯೋಗವು ವೈಜ್ಞಾನಿಕವಾಗಿ ಎಲ್ಲಾ ಜಾತಿಗಳ ದತ್ತಾಂಶವನ್ನು ಸಂಗ್ರಹಿಸಿ ತನ್ನ ವರದಿಯನ್ನು ನೀಡಿದೆ. ಈ ವರದಿಯಲ್ಲಿ ಪ್ರತಿಯೊಂದು ಜಾತಿಯ ಹಾಗೂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಕಾಂತರಾಜ ಆಯೋಗದ ವರದಿಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಿದರು
.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎನ್.ಶ್ರೀನಿವಾಸ್, ಗುತ್ಯಪ್ಪಗಾಮ, ಲೋಕೇಶ್ ತಮ್ಮಡಿಹಳ್ಳಿ, ಎ.ಡಿ.ಲಕ್ಷ್ಮೀಪತಿ. ಪ್ರಜ್ವಲ್, ಎಂ.ಕೆ.ಮನು ಉಪಸ್ಥಿತರಿದ್ದರು.