ಬೆಂಗಳೂರು: ದರ್ಶನ್ ಮತ್ತು ಸಹಚರರಿಂದ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟಿ ರಮ್ಯಾ ಖಂಡಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು. ಅಭಿಮಾನಿಗಳನ್ನು ಬಳಸಿಕೊಂಡು ಹತ್ಯೆ ಎಷ್ಟು ಸರಿ? ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆ ಎಂದು ನಂಬಿದ್ದೇನೆ ಎಂದರು.
ಜಾಲತಾಣದಲ್ಲಿ ಬ್ಲಾಕ್ (Block) ಎನ್ನುವ ಆಯ್ಕೆ ಇದೆ. ಯಾರಾದರೂ ಟ್ರೋಲ್ ಮಾಡುತ್ತಿದ್ದರೆ ಮೊದಲು ಬ್ಲಾಕ್ ಮಾಡಿ. ನಾನು ಈ ಹಿಂದೆ ನನ್ನ ಟ್ರೋಲ್ ಮಾಡಿದ ಕೆಲವರ ವಿರುದ್ಧ ದೂರು ನೀಡಿದ್ದೆ. ಪೊಲೀಸರು ಕರೆದು ಎಚ್ಚರಿಕೆ ನೀಡಿದ ಬಳಿಕ ನಾನು ಕೇಸ್ ವಾಪಸ್ ಪಡೆದಿದ್ದೆ ಎಂದು ತಿಳಿಸಿದರು.
ನಾನು ವೀಡಿಯೋ ನೋಡಿದೆ. ರಾಡ್‌ನಿಂದ ತಲೆಗೆ ಹೊಡೆದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. ನಟರಾಗಿ ಜವಾಬ್ದಾರಿಯುತವಾಗಿರಬೇಕು ಎಂದು ಹೇಳಿದರು.
ಚಿತ್ರರಂಗ ಇದನ್ನು ಖಂಡಿಸಬೇಕು ಎನ್ನುವ ಬಗ್ಗೆ ನಾನು ಮಾತನಾಡವುದಿಲ್ಲ. ದರ್ಶನ್ ಹಿನ್ನೆಲೆಯ ಮೇಲೆ ಅವರಿಗೆ ಅವರದೇ ಆದ ಯೋಚನಾ ಲಹರಿ ಇರುತ್ತದೆ. ಇಂತಹ ಬೆಳವಣಿಗೆಯನ್ನು ಖಂಡಿಸದಿದ್ದರೆ ನಾವು ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೇವೆ ಎಂದು ಪ್ರಶ್ನಿಸಿದರು.