ಲೇಖನ : ಸೀತಾ ಎಸ್. ನಾರಾಯಣ, ಹರಿಹರ.
ಸ್ತ್ರೀ ಎಂದರೆ ಅಷ್ಟೇ ಸಾಕೆ…
’ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ;’ ಮನು ಮಹರ್ಷಿಯ ಈ ಮಾತು ಸಾಕಷ್ಟು ವಾದ-ವಿವಾದಕ್ಕೆ ಒಳಗಾಗಿ ಸ್ತ್ರೀವಾದದ ಹೆಸರಲ್ಲಿ ಹಲವಾರು ಅಭಿಪ್ರಾಯಗಳು-ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ. ಹಾಗೇ ಹಲವು ಸ್ತ್ರೀಪರ ಕಾನೂನುಗಳು ಆಧುನಿಕತೆಯ ನೆಪದಲ್ಲಿ ದುರುಪಯೋಗವಾಗುತ್ತಿರುವುದು ತೆರೆಮರೆಯ ಸತ್ಯವಾಗಿದೆ. ಆತ್ಮಸಾಕ್ಷಿ ಎಂಬುದು ಮಾನವರಲ್ಲಿರಬೇಕಾದ ಸಹಜಗುಣ. ಅದಿಲ್ಲದಿದ್ದಾಗ ಯಾವ ಕಾನೂನು ಯಾರನ್ನೂ ತಿದ್ದಲು ಸಾಧ್ಯವಿಲ್ಲ. ಮಹಿಳೆ ಶೋಷಣೆಗೊಳಗಾಗುತ್ತಿರುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಪುರುಷರೂ ಸಂಸಾರದಲ್ಲಿ ಕಿರಿಕಿರಿ ಅನುಭವಿಸುತ್ತಿರುವುದು. ಇದು ಚಂಡಿ-ಉದ್ದಾಲಕನ ಕಾಲದಿಂದಲೂ ನಡೆಯುತ್ತಾ ಬಂದಿದೆ. ಸುಖ-ಸಂತೋಷವನ್ನು ಪರಸ್ಪರ ತಿಳುವಳಿಕೆ, ಮಾನವೀಯತೆ, ಅಭಿಮಾನ. ಪ್ರೀತಿಯಿಂದ ಮಾತ್ರ ಪಡೆಯಲು ಸಾಧ್ಯ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಬೇಕೆಂದಾದಲ್ಲಿ ಇದನ್ನು ರೂಢಿಸಿಕೊಳ್ಳಲು ಇಬ್ಬರೂ ಇದಕ್ಕಾಗಿ ಶ್ರಮಿಸಬೇಕು. ಪೂರ್ವಾಗ್ರಹ ಪೀಡಿತರಾಗಿ ಪರಸ್ಪರ ನಿಂದನೆ, ಸುಳ್ಳು ದೋಷಾರೋಪಣೆ ಮಾಡುವುದನ್ನು ಬಿಟ್ಟು ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯತ್ನಿಸಬೇಕು.
ಸ್ತ್ರೀಯನ್ನು ದೈವತ್ವದ ನೆಲೆಯಲ್ಲಿ ಕಂಡು ಗೌರವಿಸುವುದು ಭಾರತೀಯ ಸಂಪ್ರದಾಯ. ಈ ಜಗತ್ತಿನ ಆಧಾರ ಶಕ್ತಿಯನ್ನು ಸ್ತ್ರೀ ರೂಪದಲ್ಲಿ ಕಂಡು ಜಗನ್ಮಾತೆಯೆಂದು ಆರಾಧಿಸುವ ಪರಂಪರೆ ನಮ್ಮದು. ಗಾರ್ಗಿ, ಮೈತ್ರೇಯಿಯರಂತಹ ಆತ್ಮಜ್ಞಾನಿ ಮಹಿಳೆಯರು ಉದಿಸಿದ ನಾಡು ನಮ್ಮದು. ಕಲ್ಪನಾ ಚಾವ್ಲಾರಂತಹ ಪ್ರತಿಭಾನ್ವಿತರು ಜನ್ಮ ತಳೆದ ಭೂಮಿಯಿದು. ಲಕ್ಷ್ಮಿಭಾಯಿ, ಚೆನ್ನಮ್ಮ, ಅಬ್ಬಕ್ಕ, ಓಬವ್ವರಂತಹ ವೀರವನಿತೆಯರು ಜನ್ಮವೆತ್ತಿದ ನಾಡು ನಮ್ಮದು. ಎಷ್ಟೋ ದೇಶಗಳಲ್ಲಿ ಮತದಾನದ ಹಕ್ಕಿಗಾಗಿ ಮಹಿಳೆಯರು ಹೋರಾಡುವ ಹೊತ್ತಿನಲ್ಲಿ ಮಹಿಳಾ ಪ್ರಧಾನ ಮಂತ್ರಿಯನ್ನು ಹೊಂದಿದ್ದ ದೇಶ ನಮ್ಮದು. ಆದರೆ ಅಂದು ಸ್ತ್ರೀಯರಿಗೆ ಇದ್ದ ಸ್ಥಾನಮಾನಗಳು ಇಂದೇಕಿಲ್ಲ? ಇಂದು ಜಗತ್ತಿನ ದೃಷ್ಟಿಯಲ್ಲಿ ಭಾರತವೆಂಬುದು ಮಹಿಳಾ ಶೋಷಣೆಯ ಭೂಮಿಯೆಂದು ಕುಖ್ಯಾತಿಯನ್ನು ಪಡೆದಿದೆ, ಏಕೆ?
ಇಂದು ಧರ್ಮಶಾಸ್ತ್ರಗಳ ಹೆಸರಿನಿಂದಲೂ ಸ್ತ್ರೀಯರ ಶೋಷಣೆಯಾಗುತ್ತಿದೆ. ಧಾರ್ಮಿಕ ಗ್ರಂಥಗಳ ಅಭಿಪ್ರಾಯ ವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಆರಂಭವಾದ ಕಟ್ಟುಪಾಡುಗಳು ಅವು. ವಿಧವೆ ಯರ ಪಾಡಂತು ಹೇಳ ತೀರದು. ಇದಕ್ಕೆಲ್ಲಾ ಮಹಿಳೆಯರ ಜಾಗೃತಿಯೇ ಪರಿಹಾರವಾಗಬಲ್ಲದು. ಇಂದು ಈ ವಿಷಯದಲ್ಲಿ ಮಹಿಳೆಯರ ಮನಃ ಪರಿವರ್ತ ನೆಯಾಗುತ್ತಿರುವುದು ಸಂತಸದ ಸಂಗತಿ.
ಹೆಣ್ಣು ಕರುಣಾಮಯಿ, ಮಮತಾಮಯಿ ಎಂದೆಲ್ಲಾ ಹೇಳುತ್ತಾರೆ. ’ಹೆಂಗರುಳು’ ಎಂಬ ನುಡಿಯೇ ಇದೆ. ಘಂಟೆಗಟ್ಟಲೆ ನಿಂತು ಭಾಷಣ ಮಾಡುವ, ಪುಟಗಟ್ಟಲೆ ಲೇಖನ ಮಂಡಿಸುವ, ಸ್ತ್ರೀತ್ವ, ಸ್ತ್ರೀವಾದ, ಸ್ತ್ರೀಶಕ್ತಿ, ಮಹಿಳಾ ಮೀಸಲಾತಿ, ಮಹಿಳಾ ಸಂಘ ಎಂದೆಲ್ಲಾ ಮಾತನಾಡುವ ಹೆಣ್ಣಿನ ಹೃದಯ ಮಾನವೀಯತೆ ಇಲ್ಲದೆ ಕೆಲವೊಮ್ಮೆ ಬರಡಾಗುವುದು ಏಕೆ? ಹೆಣ್ಣು ತಾನು ಗಂಡಿಗಿಂತ ಯಾವ ವಿಷಯದಲ್ಲಿ ಹೆಚ್ಚಿನವಳಾಗಿರಬೇಕೆಂದು ಮೊದಲು ತಿಳಿದುಕೊಳ್ಳಬೇಕು. ಪ್ರಾಕೃತವಾಗಿ ಅವಳ ಶ್ರೇಷ್ಠಳೇ. ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ಶ್ರೇಷ್ಠತೆಯನ್ನು ಅವಳು ಮೈಗೂಡಿಸಿಕೊಂಡಾಗ ಮಾತ್ರ ಆಕೆ ಶ್ರೇಷ್ಟ ಸ್ತ್ರೀ ಆಗುತ್ತಾಳೆ ಅಲ್ಲವೇ? ಅದನ್ನು ಬಿಟ್ಟು ಕೇವಲ ಆರ್ಥಿಕ ಅಥವಾ ದೈಹಿಕ ಸ್ವಾವಲಂಬನೆಯಷ್ಠೇ ಸ್ತ್ರೀತ್ವದ ಪರಿಪೂರ್ಣತೆಯಲ್ಲ. ಆಕೆ ಮಾನಸಿಕವಾಗಿ ಬೌದ್ಧಿಕವಾಗಿ ಹೆಚ್ಚಾಗಿ ಹಾರ್ದಿಕವಾಗಿ ಸ್ತ್ರೀಯಾಗಬೇಕು. ಆಗ ಆಕೆ ಪರಿಪೂರ್ಣಳು. ಇಂದಿನ ಸ್ತ್ರೀ ತಾನು ಸಬಲಳಾಗುವ ಹಂಬಲದಲ್ಲಿ ಯಾವ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾಳೆ ಎಂಬ ಜಿಜ್ಞಾಸೆ ಉಂಟಾಗುತ್ತಿದೆ.
ಕನಿಕರ ಹುಟ್ಟದ ಕಠೋರತೆಯನ್ನು ಆಕೆ ಹೃದಯದಲ್ಲಿ ತುಂಬಿಕೊಂಡು ಪೋಷಿಸಿಕೊಂಡಿದ್ದಾದರೂ ಏಕೆ? ಉತ್ತರ ದೂರದಲ್ಲಿ ಕೇಳಿ ಬರುತ್ತಿದೆ. ಆಕೆಯ ಕಠೋರತೆಗೆ, ನಿರ್ದಯತೆಗೆ ಕಾರಣ ಅಸ್ಪಷ್ಠವಾಗಿ ಗೋಚರಿಸುತ್ತಿದೆ. ’ಹೇ ಸ್ತ್ರೀ ನೀನೆಂದೂ ಸರ್ವಶಕ್ತಳು. ಸರ್ವಪೂಜಿತೆ, ಆದರೆ ಆ ಪವಿತ್ರ ಸ್ಥಾನವನ್ನು ನೀನಾಗಿ ನೀನೆ ಕಳೆದುಕೊಳ್ಳಬೇಡ, ಪುರುಷರಾಗಲು ಯೋಚಿಸಬೇಡ. ಸ್ತ್ರೀ ಆಗುವ ನಿಟ್ಟಿನಲ್ಲಿ ನಡೆ ಪರಿಪೂರ್ಣ ನಾರಿಯಾಗು. ನಿನ್ನೆದೆಯಲ್ಲಿ ಅಮೃತ ಹರಿಯಲಿ. ಅದೊಂದೇ ಸಾಕು, ನಿನ್ನನ್ನು ದೈವತ್ವಕ್ಕೊಯ್ಯಲು. ಏಕೆಂದರೆ ಪುರುಷ ಜೀವವನ್ನು ಬಿತ್ತಬಲ್ಲ. ಸೃಷ್ಠಿಸಲಾರ, ಪೋಷಿಸಲಾರ. ಆ ಪವಿತ್ರ ಕಾರ್ಯ ನಿನ್ನೊಬ್ಬಳಿಂದ ಮಾತ್ರ ಸಾಧ್ಯ. ನೀನು ಮಾತ್ರ ಮಮತೆ ವಾತ್ಸಲ್ಯಗಳನ್ನು ಪ್ರವಾಹದಂತೆ ಹರಿಸಿ ನೆಲವನ್ನು ನೆಲೆಯನ್ನು ಹಸಿರಾಗಿಸಲು ಶಕ್ತಳು. ನಿನ್ನೆದೆ ತೇವವಾಗಿರಲಿ. ದಯಾಪೂರ್ಣವಾಗಿರಲಿ, ಬರಡಾಗಲು ಕೊಡದಿರು, ವಿಷವೂಡಲು ಬಿಡದಿರು. ಕ್ಷಮಯಾ ಧರಿತ್ರಿಯಾಗಿರು. ರಾಷ್ರಕವಿ ಜಿ. ಎಸ್. ಶಿವರುದ್ರಪ್ಪರವರೆಂದಂತೆ,
ಮನೆ ಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?