ಲೇಖನ : ಸೌಮ್ಯ ಗಿರೀಶ್
ಸಂಭ್ರಮಕ್ಕೆ ಕಾರಣ ನೀ….
ಹಬ್ಬಗಳು ಬಂತೆದರೆ ಅದೇನೋ ಸಡಗರ ಸಂಭ್ರಮ ಎಲ್ಲೆಡೆ ಮನೆ ಮಾಡುತ್ತದೆ. ಅದೆಷ್ಟೇ ವಸಂತಗಳು ಬಂದರೂ ಪ್ರತಿ ವಸಂತವೂ ಹೊಸ ಚೈತನ್ಯವನ್ನು ತುಂಬುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಹೆಣ್ಣಿನ ಹುರುಪು. ಮನೆಯಲ್ಲಿ ಬಳೆಗಳ ನಾದ, ಪಾತ್ರೆಗಳ ಸದ್ದು, ಒಂದಷ್ಟು ತರಾತುರಿಯ ತಯಾರಿ, ಮನೆಯ ಮುಂದೆ ರಾರಾಜಿಸುವ ರಂಗೋಲಿ ಎಲ್ಲದರ ಹಿಂದಿರುವುದು ಒಂದು ಹೆಣ್ಣು. ಪ್ರತಿ ನಿತ್ಯವೂ ಕಾಯಕವೇ ಆದರೂ ಹಬ್ಬದ ಸಡಗರದಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯ.
ಹಬ್ಬ ಎಂದರೆ ಹೆಣ್ಣು ಮಕ್ಕಳ ಖರೀದಿ ಒಂದು ಅವಿಭಾಜ್ಯ ಅಂಗ. ಹಬ್ಬವೆಂದರೆ ಒಡವೆ-ವಸ್ತ್ರ, ಹೂವು ಹಣ್ಣು, ಸಿಂಗಾರ ಸಾಮಗ್ರಿ ಹೀಗೆ ಪಟ್ಟಿಗಳ ಸರಮಾಲೆಯನ್ನೇ ಇಡುತ್ತಾ ಪ್ರಾರಂಭ ವಾಗುತ್ತದೆ ಹಬ್ಬದ ಸಂಭ್ರಮ. ಮಾರುಕಟ್ಟೆಯಲ್ಲಿ ಬಂದಿರುವ ಬಹುತೇಕ ಎಲ್ಲ ಹೊಸ ಸಾಮಗ್ರಿಗಳ ಪಕ್ಷಿನೋಟ ಮುಗಿಸಿ, ಒಂದೆರಡನ್ನು ಹೆಕ್ಕಿ ತೆಗೆದು ಮನೆಗೆ ತರುವುದರಿಂದ ಹಬ್ಬದ ಸಡಗರಕ್ಕೆ ಚಾಲನೆ ದೊರೆತಂತೆ. ಅದೆಷ್ಟೋ ಬಾರಿ ತನಗೊಂದು ಸೀರೆ ಇಲ್ಲದಿದ್ದರೂ ಪರವಾಗಿಲ್ಲ ತನ್ನ ಮಕ್ಕಳು ಒಳ್ಳೆ ಉಡುಗೆ ತೊಟ್ಟು ಸಂಭ್ರಮಿಸಲಿ ಎನ್ನುವ ಅದೆಷ್ಟೋ ತ್ಯಾಗಗಳ ಸಾಕ್ಷಿಯಾಗುತ್ತವೆ ಹಬ್ಬಗಳು.
ಬೆಳಗು ಹರಿಯುವ ಮುಂಚೆಯೇ ಎದ್ದು ಮಂಜು ಮುಸುಕಿದ ಮುಂಜಾವಿನಲಿ ಬಣ್ಣ-ಬಣ್ಣದ ಹಸೆ ಬಿಡಿಸಿ, ಅದಕ್ಕೊಂದಷ್ಟು ರಂಗು ತುಂಬುವುದರಿಂದ ಪ್ರಾರಂಭವಾಗುತ್ತದೆ ಹಬ್ಬದ ಸಡಗರ. ಮಕ್ಕಳ ಅಭ್ಯಂಜನ, ಎಲ್ಲರ ಮೆಚ್ಚಿನ ಹಬ್ಬದಡುಗೆ, ವಿಶೇಷ ತಿನಿಸುಗಳು ಹೀಗೆ ಹತ್ತು ಹಲವು ತಯಾರಿಯ ನಡುವೆ ತನ್ನ ಸಿಂಗಾರಕ್ಕೇ ಹೊತ್ತು ಸಿಗದೇ ಆದಾವುದೋ ಸೀರೆಗೆ, ಅದಾವುದೋ ಕುಪ್ಪಸ ತೊಟ್ಟು, ನೀರೆರೆದ ತಲೆಯ ಸಿಕ್ಕನ್ನೂ ಬಿಡಿ ಸದೆ ಒಂದು ತುರುಬು ಕಟ್ಟಿ ಮನೆಯವರೆಲ್ಲರ ಸಂಭ್ರಮ ಹೆಚ್ಚಿಸುತ್ತಾ, ಅದರಲ್ಲೇ ತನ್ನ ಸಂಭ್ರಮ ಕಾಣುತ್ತಾಳೆ ಹೆಣ್ಣು.
ಆದರೆ ಅದೆಷ್ಟು ಮಂದಿ ತಾನೆ ನಮ್ಮ ಸಂಭ್ರಮಕ್ಕೆ ಈ ಕಳೆ ತಂದವಳು ನನ್ನ ಅಮ್ಮ, ನನ್ನ ಹೆಂಡತಿ, ನನ್ನ ಅಕ್ಕ-ತಂಗಿ ಎಂದು ಯೋಚಿಸಿದ್ದೀರಿ. ಆ ಅಡುಗೆ ಸವಿಯುವಾಗ ಒಮ್ಮೆ “ ವ್ಹಾ ಎಂಥಾ ಬೊಂಬಾಟ್ ಅಡುಗೆ ಮಾಡಿದ್ದೀಯಾ, ಸೂಪರ್…” ಎಂದು ನೋಡಿ, ಇಲ್ಲ “ನೀ ಹಾಕಿದ ರಂಗೋಲಿ ತುಂಬಾ ಚೆನ್ನಾಗಿದೆ” ಎಂದು ನೋಡಿ, ಅವಳ ದಿನದ ದಣಿವೆಲ್ಲಾ ಮಂಜಿ ನಂತೆ ಕರಗಿ ಮುಖದಲ್ಲೊಂದು ಮಂದಹಾಸದ ಜೊತೆ ಹೊಸ ಹುರುಪು ಮತ್ತು ಚೈತನ್ಯವನ್ನು ತುಂಬಿಕೊಳ್ಳುತ್ತಾಳೆ.
ಅವಳಿಲ್ಲದ, ಅವಳ ತಯಾರಿಯಿಲ್ಲದ, ಅವಳ ಅಡುಗೆ ಇಲ್ಲದ ಹಬ್ಬ ನಿಜಕ್ಕೂ ಹಬ್ಬವೇ? ನಿಮ್ಮ ಹಬ್ಬಕ್ಕೆ ಇಷ್ಟು ರಂಗನ್ನು ತುಂಬುವ ಅವಳ ಹಬ್ಬಕ್ಕೆ ನಿಮ್ಮದೊಂದಷ್ಟು ಪ್ರೀತಿ, ಅಕ್ಕರೆಯ ಸವಿಮಾತುಗಳು ಬೆರೆತರೆ ತನ್ನ ದಣಿವಿನ ಕಹಿಯನ್ನು ಮರೆತು ಬೆಲ್ಲದಂತಹ ಪ್ರೀತಿಯನ್ನು ಮತ್ತಷ್ಟು ಹರಿಸಬಲ್ಲಳು ಹೆಣ್ಣು.