ಕೆರೆಗಳ ಸಂರಕ್ಷಣೆ ಎಂದರೆ ಅಂತರ್ಜಲ ಸೃಷ್ಟಿಸಿ ಸಕಲ ಜೀವಿಗಳಿಗೂ ಉಪಯೋಗವಾಗ ಬೇಕೆಂಬುದು ಸಮಾಜದಲ್ಲಿನ ಜನರ ಮತ್ತು ಸರ್ಕಾರದ ಆಶಯ. ಆದರೆ ಪಾಲಿಕೆ ವ್ಯಾಪ್ತಿಯ ಕೆರೆಗಳ ಅಭಿವೃದ್ದಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ? ಅಥವಾ ಭ್ರಷ್ಟಚಾರದ ಕೂಪ ಆಗುತ್ತಿದೆಯೇ? ಎಂಬ ಪ್ರಶ್ನೆ ನಾಗರೀಕರನ್ನು ಕಾಡುತ್ತಿದೆ.
ರಾಜ್ಯದಾದ್ಯಂತ ಅಪಾರ ಪ್ರಮಾಣದಲ್ಲಿ ಕೆರೆಗಳು ಒತ್ತುವರಿಯಾಗಿ ಕೆರೆಗಳಲ್ಲಿ ಹೂಳು ತುಂಬಿರುವ ವಿಷಯ ಸರ್ಕಾರಗಳ ಗಮನಕ್ಕೆ ಬಂದು,ವಿಧಾನ ಸಭೆಯಲ್ಲಿ ದೊಡ್ಡ ಪ್ರಮಾಣದ ಚರ್ಚೆ ನಡೆದು ಕೆರೆಗಳ ಒತ್ತುವರಿ ತೆರವುಗೊಳಿಸಿ ನೀರು ತುಂಬಿಸಲು ಸರ್ಕಾರ ನಿರ್ಣಯ ಕೈಗೊಂಡಿತ್ತು. ಅದರ ಭಾಗವಾಗಿ ೨೦೧೨ ಮತ್ತು ೨೦೧೩ರಲ್ಲಿ ಶಿವಮೊಗ್ಗ ನಗರ ಪಾಲಿಕೆ ಕಮಿಷನರ್ ಆಗಿದ್ದ ರವಿಯವರು ಪಾಲಿಕೆ ವ್ಯಾಪ್ತಿಯಲ್ಲಿ ೧೧೯ ಕೆರೆಗಳ ಪಟ್ಟಿ ಮಾಡಿದ್ದರು.ನಂತರ ಬಂದ ಕಮಿಷನರ್‌ಗಳು ಕೆರೆ ಒತ್ತುವರಿ ತೆರವು, ಅಭಿವೃದ್ದಿಗೆ ಒತ್ತುಕೊಟ್ಟಿದ್ದು ಕಡಿಮೆ ಎಂದರೆ ತಪ್ಪಾಗಲಾರದು.
ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಕೆರೆಗಳು ಮಹಾನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ,ಜಿಲ್ಲಾ ಪಂಚಾಯಿತಿ ಮೂರು ಇಲಾಖೆಗಳಡಿ ಬರುವುದರಿಂದ ಯಾವ ಕೆರೆಯನ್ನು ಯಾವ ಇಲಾಖೆಯಡಿ ಸರ್ವೆ ನಡೆಸಬೇಕೆಂಬ ಗೊಂದಲ ಇಂದಿಗೂ ಮುಂದುವರೆದಿದೆ. ಹಿಂದೆ ನಡೆಸಿದ ಸರ್ವೆಗಳು ಸಮರ್ಪಕವಾಗಿಲ್ಲದ ಕಾರಣ ಒಟ್ಟು ಇರುವ ಕೆರೆಗಳೆಷ್ಟು ಅವುಗಳಲ್ಲಿ ಎಷ್ಟು ಎಕರೆ ಒತ್ತುವರಿಯಾಗಿದೆ ಎಂಬುದರ ಬಗ್ಗೆ ಇಂದಿಗೂ ಸ್ಪಷ್ಟತೆಯಿಲ್ಲ. ಕೆರೆಗಳ ಸಮಗ್ರ ಸರ್ವೆ ಮತ್ತು ಅಭಿವೃದ್ದಿ ಪಡಿಸಲು ಸಣ್ಣ ನೀರಾವರಿ ಇಲಾಖೆಯೊಂದರಡಿಯಲ್ಲಿ ಕಾರ್ಯನಿರ್ವಹಿಸಿದರೆ ನಿರ್ವಹಣೆ ಸುಲಭವಾಗಿ ಗೊಂದಲ ಪರಿಹಾರವಾಗುತ್ತದೆ.
ವಿಚಿತ್ರವೆಂದರೆ, ನಗರಸಭೆ, ನಗರಾಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿಯಿಂದಲೇ ಕೆರೆ ಒತ್ತುವರಿ ಜಾಗದಲ್ಲಿ ನಿವೇಶನಗಳನ್ನು ಹಂಚಿದ್ದು ಬಯಲಿಗೆ ಬಂದಿದೆ. ಮಾತ್ರವಲ್ಲದೆ ಸರ್ಕಾರಿ ಕಛೇರಿಗಳನ್ನು ಕೆರೆಗಳ ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಕೆ.ಆರ್.ಐ.ಡಿ.ಎ. ನಿರ್ಮಾಣ ಇಲಾಖಾ ಕಛೇರಿ ಕಟ್ಟಡ. ಇದು ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಯಂತಿದೆ. ಇದು ಜನಪ್ರತಿನಿಧಿಗಳ ಗಮನಕ್ಕೆ ಬರಲಿಲ್ಲವೆ? ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡರೆ ಇಂತಹ ಗಂಭೀರ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕಿದೆ.
ಸಣ್ಣ ನೀರಾವರಿ ಇಲಾಖೆ ನಾಗರಿಕರ ತೆರಿಗೆ ಹಣದಿಂದ ಕೆರೆ ಅಭಿವೃದ್ದಿ ಮಾಡುತ್ತಿದೆ. ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡುವಾಗ ಎಕರೆಗೆ ೧ ಲಕ್ಷದಂತೆ “ಕೆರೆ ಅಭಿವೃದ್ದಿ ಶುಲ್ಕ”ವನ್ನು ಸಂಗ್ರಹಿಸಲಾಗುತ್ತದೆ. ಈ ರೀತಿ ಸಂಗ್ರಹ ಮಾಡಿದ ಹಣ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಸುಮಾರು ೧೮ ಕೋಟಿಗಿಂತಲು ಹೆಚ್ಚಿದೆ. ಕೆರೆ ಸಂರಕ್ಷಣೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಹಣವನ್ನು ವ್ಯಯ ಮಾಡಲಾಗುತ್ತಿದೆಯೆ? ಅಥವಾ ಅನುಪಯೋಗಿ ಯೋಜನೆಗಳು, ಕೆಲವೇ ಜನರ ಮೋಜು ಮಸ್ತಿಗಾಗಿ ದುಂದುವೆಚ್ಚ ಆಗುತ್ತಿದೆಯೆ? ಎಂಬ ಪ್ರಶ್ನೆ ನಿಧಿಗೆ, ಗೋಪಿಶೆಟ್ಟಿಕೊಪ್ಪ ಕೆರೆಗಳ ‘ಅಭಿವೃದ್ದಿ’ ನೋಡಿದವರಿಗೆ ಬಾರದಿರದು.
ಗೋಪಿಶೆಟ್ಟಿಕೊಪ್ಪದ ಸರ್ವೆ ನಂ ೯೭ ರಲ್ಲಿ ೩೭.೫ ಎಕರೆ ವಿಸ್ತೀರ್ಣದ ಕೆರೆ ಇದ್ದು, ಈ ಕೆರೆಯನ್ನು ಮೂರು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ೧ ಕೋಟಿಗಿಂತ ಹೆಚ್ಚು ಹಣದ ವೆಚ್ಚದಲ್ಲಿ ಅಭಿವೃದ್ದಿ ಪಡಿಸಿದೆ.
ಮೊದಲು ಕೃಷಿಗಾಗಿ ಉಪಯೋಗವಾಗುತ್ತಿದ್ದ ಕೆರೆ, ನಿರ್ವಹಣೆ ಇಲ್ಲದೆ ಪೊದೆಗಳು ಬೆಳೆದು ಕೊಂಪೆಯಾಗಿ ವಿಪರೀತ ಹೂಳು ತುಂಬಿತ್ತು.ಇದರೊಂದಿಗೆ ಗೋಪಾಳ, ಗೋಪಿಶೆಟ್ಟಿಕೊಪ್ಪ, ಚಾಲುಕ್ಯ ನಗರಗಳ ಒಳಚರಂಡಿ ನೀರು ತುಂಬಿ ಕೊಳೆಗೆರೆಯಾಗಿತ್ತು. ಹೂಳು ತೆಗೆದು ಕೆರೆ ಗಡಿ ಗುರುತಿಸಿ ಸುತ್ತಲು ಕೆರೆ ದಂಡೆ ಕಟ್ಟಿಸಿ ಬೇಲಿಹಾಕಿದ್ದೇನೊ ಸರಿ. ಆದರೆ ಕೆರೆ ಹೂಳನ್ನು ಸಂಪೂರ್ಣ ತೆಗೆಯದೆ ಅಲ್ಲಲ್ಲಿ ಹಾಗೆ ಬಿಟ್ಟಿದ್ದು ಕಾಣಿಸುತ್ತದೆ. ತುಂಗಾ ಮೇಲ್ದಂಡೆ ಕಾಲುವೆಯಿಂದ ಈ ಕೆರೆ ಕೇವಲ ಅರ್ಧ ಕಿ.ಮೀ. ಸಮೀಪ ಇದ್ದು ನೀರು ತುಂಬಿಸಲು ವಿಪುಲ ಅವಕಾಶವಿದ್ದರು ಯೋಜನಾಧಿಕಾರಿಗಳು ಅತ್ತ ಗಮನಹರಿಸಿಲ್ಲ. ಕೆರೆಯ ಸುತ್ತ ಗಿಡ ನೆಟ್ಟಿರುವ ಸುಳಿವು ಸಿಗುತ್ತಿಲ್ಲ. ಕೆರೆ ಸುತ್ತ (ವಾಕಿಂಗ್ ಪಾಥ್) ನಡೆದಾಡುವ ಹಾದಿ ನಿರ್ಮಾಣ ಮಾಡಲಾಗಿದೆ. ನಡೆದಾಡುವವರಿಲ್ಲದೆ ವಾಕಿಂಗ್ ಪಾಥ್ ತುಂಬಾ ಪೊದೆಗಳು ಬೆಳೆದುಕೊಂಡಿದ್ದು ಅನೈತಿಕ ದಂಧೆಯ ಅಡ್ಡೆಯಾಗಿದೆ.
ಕೆರೆ ಬೇಲಿಗೆ ಹಾಕಿರುವ ಕಬ್ಬಿಣದ ರಾಡುಗಳನ್ನು ಕಳ್ಳಕಾಕರು ಹಗಲುರಾತ್ರಿಯೆನ್ನದೆ ಕಿತ್ತೊಯ್ಯುತ್ತಿದ್ದಾರೆ. ಸ್ಥಳೀಯ ಜನರು ವಾಕಿಂಗ್ ಪಾಥ್ ಕೇಳಿದ್ದರೊ ಇಲ್ಲವೋ, ಬಳಸುತ್ತಾರೋ ಇಲ್ಲವೋ ಎಂಬುದನ್ನು ಗಮನಿಸದೆ ಇದಕ್ಕಾಗಿ ಕೋಟಿಗಟ್ಟಲೆ ಜನರ ತೆರಿಗೆ ಹಣ ಸುರಿದು ಹೊಳೆಯಲ್ಲಿ ಹುಣಿಸೆಹಣ್ಣು ತೊಳೆಯಲಾಗಿದೆ. ಕೆರೆ ಸಂರಕ್ಷಣೆಯಲ್ಲಿ ಹೂಳು ತೆಗೆಯುವುದು ಮುಖ್ಯ, ಅದಕ್ಕಿಂತ ಪ್ರಮುಖವಾದದ್ದು ಕೆರೆಗೆ ನೀರು ತುಂಬಿಸುವುದು. ಆ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ ಮರೆತಿದೆ. ಬೇಸಿಗೆ ಕಾಲ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಕೂಡಲೇ ಕೆರೆಗೆ ನೀರು ತುಂಬಿಸುವ ಕೆಲಸ ಆಗಬೇಕಾಗಿದೆ.
ಕೆರೆ ಒತ್ತುವರಿ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಪ್ರಾಮಾಣಿಕ ಸರ್ವೆ ನಡೆಸಬೇಕು. ಒತ್ತುವರಿಯಾಗಿದ್ದಲ್ಲಿ ತೆರವು ಮಾಡಿ ಗಡಿ ಸುತ್ತಲು ಬೇಲಿ ಹಾಕಿ ಕೆರೆದಂಡೆ ನಿರ್ಮಿಸಿ ಸುತ್ತಲು ಗಿಡಗಳನ್ನು ನೆಡಬೇಕು. ಹೂಳು ಇದ್ದ ಪಕ್ಷದಲ್ಲಿ ಅದನ್ನು ತೆಗೆಸಿ ನೀರು ತುಂಬಿಸಿ ಹೊರ ಹರಿವು ಮತ್ತು ಒಳ ಹರಿವಿನ ಟೂಬುಗಳ ನಿರ್ವಹಣೆ ಅತ್ಯಗತ್ಯವಾಗಿ ಆಗಬೇಕು. ಇದರಿಂದ ಅಂತರ್ಜಲ ಸೃಷ್ಟಿಯಾಗುವುದಲ್ಲದೆ ಹಸಿರು ಪರಿಸರ ನಿರ್ಮಾಣವಾಗಿ ಈಡೀ ಜೀವ ಸಂಕುಲದ ಸಮೃದ್ದಿಯಾಗುತ್ತದೆ. ಕೆರೆಗಳ ಸಂರಕ್ಷಣೆ ಕುರಿತು ಮಾನ್ಯ ಹಸಿರು ನ್ಯಾಯ ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟಿದೆ. ಅದರ ಪ್ರಕಾರವೇ ಕೆರೆಗಳ ಅಭಿವೃದ್ದಿ ಮಾಡುವುದಾಗಿ ವಿಧಾನ ಸಭೆ ನಿರ್ಣಯ ಕೂಡ ಕೈಗೊಂಡಿದೆ.
ಆದರೆ ಪಾಲಿಕೆ ವ್ಯಾಪ್ತಿಯ ಕೆರೆ ಅಭಿವೃದ್ದಿ ಕೆಲಸ ಅರ್ಧಂಬರ್ಧ ಇಲ್ಲವೆ ನಿರ್ದೇಶನದ ವಿರುದ್ದ ದಿಕ್ಕಿನಲ್ಲಿ ನಡೆಯುತ್ತಿದ್ದು, ದುಂದುವೆಚ್ಚ ಹಾಗೂ ಭ್ರಷ್ಟಚಾರ ತಾಂಡವಾಡುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೆರೆ ಸಂರಕ್ಷಣೆ ಯೋಜನೆ-ಆಂದೋಲನ ಸದುದ್ದೇಶದಿಂದ ಕೂಡಿದ್ದರೂ ಅದರ ಅನುಷ್ಠಾನ ಸಮರ್ಪಕವಾಗಿ ಪಾರದರ್ಶಕವಾಗಿ ಇಲ್ಲದಿರುವುದು ಸಾರ್ವಜನಿಕರಲ್ಲಿ ಬೇಸರ ತಂದಿದೆ.
ಈ ಮೊದಲು ಕೆರೆಗೆ ಹರಿ ಬಿಟ್ಟಿದ್ದ ಒಳಚರಂಡಿ ನೀರಿನ ರಾಜಾಕಾಲುವೆಯನ್ನು ತುಂಗಾ ಕಾಲುವೆಗೆ ನೇರವಾಗಿ ತಿರುಗಿಸಿದ್ದೀರಾ? ಕನಿಷ್ಟ ಸೀವೇಜ್ ಪ್ಲಾಂಟ್ (ಕೊಳೆ ನೀರು ಫಿಲ್ಟರ್) ಆಳವಡಿಸ ಬಹುದಿತ್ತಲ್ಲಾ ? ಎಂದು ಪತ್ರಿಕೆಯ ಪ್ರತಿನಿಧಿ ಕೇಳಿದರೆ , ಇಲ್ಲಿನ ಕೊಳೆ ನೀರನ್ನು ತುಂಗಾ ಕಾಲುವೆಗೆ ಹರಿಸುವುದು ಬಿಟ್ಟು ಬೇರೆ ಪರ್ಯಾಯಗಳಿರಲಿಲ್ಲ ಆದ್ದರಿಂದ ಹಾಗೆ ಮಾಡಿದೆವು.ಸೀವೇಜ್ ಪ್ಲಾಂಟ್ ಅಳವಡಿಸುವುದು ನನಗೆ ಗೊತ್ತಿಲ್ಲ.ಈ ಕೆರೆಗೆ ಪುರದಾಳು ಡ್ಯಾಂನಿಂದ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಸೂರ್ಯ ಪವಾರ್.
ಕೆರೆಯಲ್ಲಿ ಒಳಚರಂಡಿ ನೀರು ತುಂಬಿ ವಾಸನೆ ಬರುತ್ತಿತ್ತು.ಹೂಳು ತೆಗೆದು ಸ್ವಚ್ಚಗೊಳಿಸಿದ್ದೇನೊ ಸರಿ,ಅದೇ ಒಳಚರಂಡಿ ನೀರಿನ ರಾಜಾಕಾಲುವೆಯನ್ನು ತುಂಗಾ ಎಡದಂಡೆ ಕಾಲುವೆಗೆ ಸಂಪರ್ಕ ಕಲ್ಪಿಸಿದ್ದು ಅಕ್ಷಮ್ಯ.ಕೆರೆಯನ್ನು ಸ್ವಚ್ಚಗೊಳಿಸಿ ದೊಡ್ಡ ಕಾಲುವೆಯ ಒಳ್ಳೆಯ ನೀರನ್ನು ಮಲಿನ ಮಾಡಿದಂತಾಯಿತು.ಕೆರೆಗೆ ನೀರು ತುಂಬಿಸುವ ಕೆಲಸ ಆಗಲಿಲ್ಲ.ಜನರಿಗೆ ಉಪಯೋಗವಿಲ್ಲದಿದ್ದರೂ ರಾಜಕಾರಣಿಗಳು ಮತ್ತು ಕೆಲವು ಭ್ರಷ್ಟ ಅಧಿಕಾರಿಗಳು ಕೆರೆ ದಂಡೆ ಮೇಲೆ ವಾಕಿಂಗ್ ಪಾಥ್ ನಿರ್ಮಿಸಿದರು.ಅದನ್ನು ಜನರ್ಯಾರು ಬಳಸುತ್ತಿಲ್ಲ.ಇದಕ್ಕೆ ಹಾಕಿದ ಲಕ್ಷಗಟ್ಟಲೆ ಹಣ ಸ್ಮಶಾನಕ್ಕೆ ಹೋದ ಹೆಣದಂತಾಗಿದೆ.
– ಅಜಯ್, ಅಣ್ಣಾ ಹಜಾರೆ ಹೋರಾಟ ಸಮಿತಿ (ರಿ) ಗೋಪಾಳ
ನಮ್ಮೂರು ಪಾಲಿಕೆ ವ್ಯಾಪ್ತಿಗೆ ಸೇರುವ ಮೊದಲು ಕೆರೆ ನೀರನ್ನು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬಳಸುತ್ತಿದ್ದೆವು.ಸುತ್ತಲೂ ಬಡಾವಣೆಗಳಾದಂತೆ ಕೆರೆಯಲ್ಲಿ ಚರಂಡಿ ನೀರು ತುಂಬಿ ಮಲಿನವಾಗಿ ಯಾವುದಕ್ಕೂ ಬಳಸದಂತಾಗಿತ್ತು.ಸರ್ಕಾರದವರು ಹೂಳು ತೆಗೆದು ಒಳ್ಳೆಯ ಕೆಲಸ ಮಾಡಿದರು ಆದರೆ ನೀರು ತುಂಬಿಸದೆ ಹಾಗೆ ಬಿಟ್ಟರೆ ಕೆರೆ ಮೊದಲಿದ್ದ ಸ್ಥಿತಿಗೆ ತಲುಪ ಬಹುದು.ಕೂಡಲೆ ಕೆರೆಗೆ ನೀರು ತುಂಬಿಸುವ ಕೆಲಸವನ್ನು ಇಲಾಖೆ ಮಾಡಲಿ.
-ರಾಮಣ್ಣ – ರೈತ, ಗೋಪಿಶೆಟ್ಟಿಕೊಪ್ಪ
ನಗರಪಾಲಿಕೆ ವ್ಯಾಪ್ತಿಯ ‘ಕೆರೆಗಳ ಅಭಿವೃದ್ಧಿ’ ಏನಾಗುತ್ತಿದೆ?
RELATED ARTICLES