ಶಿವಮೊಗ್ಗ : ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಶಿವಮೊಗ್ಗ ನಗರದೆಲ್ಲಡೆ ಮಹಿಳೆಯರು ಸಂಭ್ರಮ, ಸಡಗರದಿಂದ ಆಚರಿಸಿದರು.
ಹೆಣ್ಣುಮಕ್ಕಳು ಲಕ್ಷ್ಮಿದೇವಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.ಹೆಂಗಳೆಯರು, ಮಕ್ಕಳು ಮುಂಜಾನೆಯೇ ಎದ್ದು ಮನೆಯ ಮುಂದೆ ಸಾರಿಸಿ ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ ಲಕ್ಷ್ಮೀ ದೇವಿಯ ಸ್ತ್ರೋತ್ರ, ವ್ರತ ಆಚರಣೆ ಮಾಡಿದರು.
ಶ್ರಾವಣ ಮಾಸದ ಪೂರ್ಣಿಮೆಯ ಹಿಂದಿನ ಶುಕ್ರವಾರದಂದು ವರಲಕ್ಷ್ಮಿ ವ್ರತ ಆಚರಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಓಲೈಸಲು ಭಕ್ತರು ಈ ಆಚರಣೆ ಮಾಡುತ್ತಾರೆ. ವರ ಎಂದರೆ “ವರ” ಮತ್ತು “ಲಕ್ಷ್ಮಿ” ಎಂದರೆ “ಅದೃಷ್ಟ ಅಥವಾ ಸಂಪತ್ತು ಎಂದರ್ಥ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಓಲೈಸುವ ಹಬ್ಬ ಎಂದೆ ಪ್ರಸಿದ್ಧಿ ಪಡೆದಿದ್ದು ಎಲ್ಲೆಡೆ ವರಮಹಾಲಕ್ಷ್ಮಿಯ ಹಬ್ಬದ ಸಡಗರ ಕಂಡುಬಂದಿತು.ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ನಡೆದವು.
ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ನಗರದ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆಯಿಂದಲೇ ಭಕ್ತರು ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು ವಿಶೇಷ ಪೂಜೆ ಸಲ್ಲಿಸಿದರು.
ಖರೀದಿ ಭರಾಟೆ :
ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಮಾರುಕಟ್ಟೆಗಳು ಜನರಿಂದ ತುಂಬಿಕೊಂಡಿದ್ದವು. ಅಲ್ಲಿಹಬ್ಬದ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿತ್ತು. ಹಬ್ಬಕ್ಕೆ ಬೇಕಾದ ಹೂವು-ಹಣ್ಣುಗಳನ್ನು ಜನರು ಖರೀದಿಸುತ್ತಿದ್ದರು. ಜನರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿತು. ಹೂವು, ಹಣ್ಣುಗಳ ಬೆಲೆಯಲ್ಲಿ ಡಬಲ್, ತ್ರಿಬಲ್ ಏರಿಕೆಯಾಗಿತ್ತು. ಹೀಗಿದ್ದರೂ ಕೂಡ ಜನರು ಹಬ್ಬಕ್ಕೆ ಬೇಕಾದ ಹೂ, ಹಣ್ಣು, ಖರೀದಿಸುವಲ್ಲಿ ಜನರು ಮಗ್ನರಾಗಿದ್ದು ಕಂಡು ಬಂತು.
ಗಗನಕ್ಕೇರಿದ ಬೆಲೆ:
ಅಗತ್ಯ ವಸ್ತುಗಳ ಬೆಲೆ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ಪೈನಾಪಲ್ ಎರಡಕ್ಕೆ ೧೦೦ ರೂ., ಮೂಸುಂಬೆ ಕೆ.ಜಿ.ಗೆ ೮೦-೧೦೦ ರೂ., ಬಾಳೆಹಣ್ಣು ಕೆ.ಜಿ.ಗೆ ೮೦ ರೂ., ಸೇಬು ೨೫೦ ರೂ., ದ್ರಾಕ್ಷಿ ೨೦೦ ರೂ., ಸಪೋಟ ೧೨೦ ರೂ., ದಾಳಿಂಬೆ ೨೦೦ ರೂ., ಸೇವಂತಿಗೆ ಹೂವು ಒಂದು ಮಾರಿಗೆ ೧೨೦ರೂ, ತಾವರೆ ಹೂವು ಜೊತೆಗೆ ೧೦೦ರೂ., ಮಲ್ಲಿಗೆ ೨೦೦ ರೂ., ಕಾಕಡ ೧೫೦ ರೂ., ಚಂಡು ಹೂವು ೫೦-೮೦ ರೂ., ಬಾಳೆಕಂದು ಜೊತೆಗೆ ೫೦ ರೂ., ಮಾವಿನ ಎಲೆ ಒಂದು ಕಟ್ಟಿಗೆ ೨೦ ರೂ., ಕಬ್ಬು ಒಂದು ಜೊತೆಗೆ ೪೦ ರೂ., ವರೆಗೆ ಮಾರಾಟವಾದವು.
ನಗರದ ಗಾಂಧಿ ಬಜಾರ್, ನೆಹರು ರಸ್ತೆ, ಗೋಪಿ ವೃತ್ತ, ಲಕ್ಷ್ಮಿ ಚಿತ್ರಮಂದಿರ ವೃತ್ತ, ಪೊಲೀಸ್ ಚೌಕಿ ಸೇರಿದಂತೆ ಎಲ್ಲೆಡೆ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಹಬ್ಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು. ಹಬ್ಬದ ಹಿದಲೆಯಲ್ಲಿ ಎಲ್ಲೆಡೆ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದ್ದರಿಂದ ಜನಜಂಗುಳಿ ಹೆಚ್ಚಾದ ಪರಿಣಾಮ ಮಾರುಕಟ್ಟೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿತು