ದಾವಣಗೆರೆ: ವಾಲ್ಮೀಕಿ ನಿಗಮದ ಹಗರಣ ಕಾಂಗ್ರೆಸ್ ಸರ್ಕಾರದ ಅತಿದೊಡ್ಡ ಹಗರಣವಾಗಿದ್ದು, ಕೇವಲ ಸಚಿವ ನಾಗೇಂದ್ರ ತಲೆತಂಡವಾದರೆ ಸಾಲದು. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಹಾಗೂ ಎಸ್ಟಿ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ನೂರಾರು ಬಿಜೆಪಿ ಹಾಗೂ ಎಸ್ಟಿ ಮೋರ್ಚಾದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಒಂದು ಹಂತದಲ್ಲಿ ಬ್ಯಾರಿಕೇಡ್ ಗಳನ್ನು ತಳ್ಳಿ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಯತ್ನಿಸಿದ್ದಾಗ ಪೊಲೀಸರು ತಡೆದು ಸಮಾಧಾನಪಡಿಸಿದರು.
ಮಾಜಿ ಸಂಸದ ಜಿಎಂ ಸಿದ್ದೇಶ್ವರ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ವಾಲ್ಮೀಕಿ ನಿಗಮದ 187 ಕೋಟಿ ರೂ ಹಣ ತೆಲಾಂಗಣ ರಾಜ್ಯ ಇತರೆ ರಾಜ್ಯಗಳಿಗೆ ವರ್ಗಾಯಿಸಿ ಚುನಾವಣೆಗೆ ಬಳಕೆ ಆಗಿರುವ ಶಂಕೆ ಇದೆ. ಪರಿಶಿಷ್ಟ ಪಂಗಡದ ಜನರಿಗೆ ಕೊಡುವ ಹಣ ಗೋಲ್ ಮಾಲ್ ಆಗಿರುವುದನ್ನು ಬಿಜೆಪಿ ಖಂಡಿಸುತ್ತದೆ. ಈ ಹಗರಣದಲ್ಲಿ ಕೇವಲ ಸಚಿವ ನಾಗೇಂದ್ರ ಅವರ ರಾಜೀನಾಮೆ, ಅಧಿಕಾರಿಗಳ ಅಮಾನತ್ತಾರದರೆ ಸಾಲದು ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರ ಪಾತ್ರ ಇದ್ದಂತಿದೆ. ಅವರು ನೈತಿಕ ಹೊಣಹೊತ್ತು ರಾಜೀನಾಮೆ ನೀಡಬೇಕು ಎಂದ ಒತ್ತಾಯಿಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಗಾಯತ್ರಿ ಸಿದ್ದೇಶ್ವರ ಇತರ ಮುಖಂಡರು ಪ್ರತಿಭಟನೆ ನೇತೃತ್ವ ವಹಿಸಿದ್ದರು.