ಲೇಖನ : ಬಿ. ನಾಗರಾಜ್
ಹೊಸ ಚೈತನ್ಯ ತರುವ ಯುಗಾದಿ
ಯುಗ ಎಂದರೆ ಅನಾದಿಯೂ, ಅನಂತವೂ, ಅಮೂರ್ತವೂ ಆದ ಮಹಾ ಕಾಲದಲ್ಲಿ ಕಲ್ಪಿಸಲಾದ ಕಾಲಖಂಡ. ಕಾಲದ ಅಂಶ. ಇದು ಮನ್ವಂತರದ ಬದಲಾವಣೆಯ ಕಾಲ. ಆ ಪರ್ವ ಕಾಲ ಸನ್ನಿಹಿತವಾಗುತ್ತಿದೆ. ದುರ್ಮುಖ ಸಂವತ್ಸರಕ್ಕೆ ವಿದಾಯ ಹೇಳಿ ಹೇಮಲಂಬಿಗೆ ಸ್ವಾಗತ ಕೋರಲು ಸಕಲಜೀವ ಸಂಕುಲ ಸಿದ್ಧವಾಗಿದೆ.
ಸರ್ವರೂ ಸುಖದಿಂದ , ಸಮನ್ವಯದಿಂದ, ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಯುಗಾದಿಯ ಹಳತು ಕಳೆಯದೆ, ಹೊಸತು ಬರದು. ಹೊಸತು ಹುಟ್ಟದೆ ಹರುಷ ಸಿಗದು. ಇದು ಹಳೆಯದರ ಯಶಸ್ವಿನಲ್ಲಿ ಮೈ ಮರೆಯದೆ ಹೊಸತನ್ನು ಕಟ್ಟು ವ ಸಂಧಿಕಾಲ.
ಹೊಸತೆಲ್ಲ ಹಳತಾಗುವುದು ನಮ್ಮ ದಿನನಿತ್ಯದ ಆನುಭವ. ಕಾಲದ ಚಲನೆ ನೇರವೂ ಅಲ್ಲ. ಹಿಮ್ಮುಖವೂ ಅಲ್ಲ. ಅದು ಸುತ್ತುತ್ತಲೇ ಇರುವ ಚಕ್ರ. ನಿಂತಲ್ಲೇ ಅದರ ಚಲನೆ, ಅದರಿಂದಾಗಿ ಹೊಸತು ಹಳತಾಗುತ್ತದೆ. ಹಳತು ಹೊಸತಾಗುತ್ತದೆ.
ಹಳತನ್ನು ಸದಾ ಹೊಸತು ಮಾಡಿಕೊಳ್ಳುವ ನಿಸರ್ಗದ ಕ್ರಿಯೆಯಲ್ಲಿ ಮಹತ್ವದ ಸಂದೇಶವಿದೆ. ಅದೇ ಜೀವನ ಶ್ರದ್ಧೆ. ಜೀವನೋತ್ಸಾಹ, ಅದೇ ಯುಗಾದಿ ಹಬ್ಬದ ಮಹತ್ವ, ಬದುಕಿನ ಏಕತಾನತೆಯನ್ನು ನೀಗಿಕೊಂಡು ಕಾಲದಂತೆ ಚಲನ ಶೀಲವಾಗಿ ಎಂಬ ಸಂದೇಶ ಸಾರುತ್ತದೆ.
ಯುಗಾದಿ ಅಥವಾ ಉಗಾದಿ ಮರಳಿ ಬರುತ್ತಿದೆ. ಯುಗಾದಿ ವರ್ಷದ ಮೊದಲ ದಿನ, ಮೊದಲ ಹಬ್ಬ, ಹೊಸ ವರುಷವನ್ನು , ಹೊಸ ಹರುಷವನ್ನು ತರುವ, ಹೊಸತನ್ನು ಆರೋಪಿಸಿಕೊಳ್ಳುವ ಆಹ್ವಾನಿಸಿಕೊಳ್ಳುವ ಹಬ್ಬದ ದಿನ. ಮುಂದೆ ವರ್ಷದುದ್ದಕ್ಕೂ ಸಾಲು ಸಾಲಾಗಿ ಬರುವ ಹಬ್ಬಗಳಂತಲ್ಲ ಇದು. ಆ ಹಬ್ಬಗಳಿಗೆಲ್ಲ ದೇವರ ನಂಟು. ಗಂಟುಗಳಿವೆ. ಪುರಾಣ, ಪುಣ್ಯಕಥೆಗಳಿವೆ. ಯುಗಾದಿ ಯಾವುದೇ ನಿರ್ದಿಷ್ಟ ದೇವರ ಹಬ್ಬವಲ್ಲ. ವೇದಗಳಲ್ಲಾಗಲೀ, ಪುರಾಣಗಳಲ್ಲಾಗಲೀ, ಯುಗಾದಿಯ ಮಹಿಮೆ ಅಥವಾ ಹಬ್ಬದ ಉಲ್ಲೇಖ ವಾಗಲೀ ಕಂಡು ಬಂದಿಲ್ಲ. ಇದು ಯಾವಾಗ ಆರಂಭವಾಯಿತೋ ಗೊತ್ತಿಲ್ಲ. ಅಂಥ ದಾಖಲೆಗಳು ಕೂಡಾ ಲಭ್ಯವಿಲ್ಲ.
ಹಾಗೆ ನೋಡಿದರೆ ಯಾವುದೇ ಹಬ್ಬ ಅಪ್ಪಟ ದೈವಿಕವಾಗಿರುವುದಿಲ್ಲ. ದೇವರು ಧರ್ಮಗಳ ಸಂಗತಿಯೊಂದಿಗೆ ಸಂಬಂಧ ಹೊಂದಿಯೂ ಅಷ್ಟೇ ಆಗಿರದೆ, ಸಾಂಸ್ಕೃ ತಿಕವೂ, ಸಾಮಾಜಿಕವೂ ಆಗಿರುತ್ತವೆ.
ಪ್ರಾದೇಶಿಕ ರೀತಿ-ರಿವಾಜುಗಳು , ಕೃಷಿ, ಪಶುಪಾಲನೆ, ವ್ಯಾಪಾರ, ವಾಣಿಜ್ಯ ಮುಂತಾದ ಜೀವನಾಲಂಬಕಗಳು, ಆಹಾರ -ವ್ಯವಹಾರ , ಭಾಷೆ ಮನೋ ಧರ್ಮ, ನಂಬಿಕೆ, ಮೂಢನಂಬಿಕೆ ಇಂಥ, ಸಾಮಾಜಿಕ, ಸಾಂಸ್ಕೃತಿಕ ಅಂಶಗಳೆಲ್ಲ ಸೇರಿ ಹಬ್ಬದ ಆಚರಣೆ ರೂಪು ಗೊಂಡಿರುತ್ತದೆ. ಯುಗಾದಿಯಂತೂ ಸಾಂಸ್ಕೃತಿಕ ಹಬ್ಬವಾಗಿ ತೋರುತ್ತದೆ. ದೈವಿಕ ಹಬ್ಬವಾಗಿ ಅಲ್ಲ.
ಹಬ್ಬದ ಹೆಸರಲ್ಲೇ ಜಿಜ್ಞಾಸೆ :
ಈ ಹಬ್ಬದ ಹೆಸರು ಯುಗಾದಿ ಅಥವಾ ಉಗಾದಿ ತುಸು ಜಿಜ್ಞಾಸೆ ಬೇಡು ತ್ತದೆ. ಯುಗಾದಿ ಅಂದರೆ ಯುಗ+ಆದಿ ಎಂದರೆ ಯುಗದ ಆದಿ, ವರ್ಷದ ಆದಿ ಅಲ್ಲ. ಯುಗ ಎನ್ನುವುದು ಸಹಸ್ರಾರು ವರ್ಷಗಳ ಸುದೀರ್ಘ ಅವಧಿ. ನೂರಾರು ವರ್ಷಗಳ ಸಮಕಾಲೀನತೆಯನ್ನೂ ಯುಗ ಎನ್ನುವ ರೂಢಿ ಇದೆ. ಆದರೆ ೩೬೦ ದಿನಗಳ ಅಲ್ಪಾವಧಿಯ ವರ್ಷವನ್ನು ಯುಗ ಎನ್ನಲಾಗದು. ಕಾಲ ವನ್ನು ಕಂಡರಿಯುವ ಪ್ರಯತ್ನವಾಗಿ ವರ್ಷವನ್ನೇ ಯುಗ ಎನ್ನಲಾಯಿತೇ ? ಇದಮಿತ್ತಂ ಎಂದು ಉತ್ತರಿಸಲಾಗದ ಪ್ರಶ್ನೆ. ಎಣಿಸಲಾಗದ ಅಷ್ಟೇ ಅಲ್ಲ. ಕಲ್ಪಿಸಲಾಗದ ಕಾಲವನ್ನು ಎಣಿಸುವ, ಕಲ್ಪಿಸುವ, ಅಗತ್ಯವಂತೂ ಈ ಬದುಕಿಗೆ ಇದೆ. ಕಾಲ ಅಖಂಡ, ಅಖಂಡವನ್ನು ಪರಿಭಾವಿಸಲಾಗದು. ಪರಿಭಾವಿಸುವುದೇ ಆದರೆ ಕಾಲವನ್ನು ಖಂಡ-ತುಂಡವಾಗಿಸಬೇಕು. ಕಾಲವು ಚಕ್ರದಂತೆ ಸುತ್ತುತ್ತಲೇ ಇರುತ್ತದೆ.
ಪ್ರಾಚೀನರ ಕಾಲದ ಕಲ್ಪನೆ ಅತ್ಯದ್ಬುತ. ಕಾಲ ಎಂದೊಡನೆ ಗಂಟೆಯ ಮೂಲಕ ಕಾಲವನ್ನು ಸೂಚಿಸುವ ಗಡಿ ಯಾರವೇ ಕಣ್ಣಿಗೆ ಕಟ್ಟುತ್ತಿದೆ. ಕಾಲದ ಕಲ್ಪನೆ ನಮಗೆ ಸಿಲುಕುವುದೇ ಸೂರ್ಯ -ಚಂದ್ರರ ಮೂಲಕ ಅವರು ಕಾಲ ನಿರ್ಮಾಪಕರು ಎನ್ನುತ್ತಾನೆ ಕಾಳಿದಾಸ.
ಚಂದ್ರ ಒಂದು ಕಲೆಯೊಡನೆ ತುಸು ಕಾಣಿಸಿಕೊಳ್ಳುವ ರಾತ್ರಿಯಿಂದಾ ರಂಭಿಸಿ ಪೂರ್ಣವಾಗಿ ಕಾಣಿಸಿಕೊಳ್ಳು ವವರೆಗಿನ ಹದಿನೈದು ರಾತ್ರಿಗಳ (ಹಗಲೂ ಸೇರಿ) ಅವಧಿ ಕೃಷ್ಣ ಪಕ್ಷ. ಎರಡು ಪಕ್ಷಗಳು ಸೇರಿ ಒಂದು ಮಾಸ ( ತಿಂಗಳು) ಎರಡು ಮಾಸಗಳಿಗೆ ಒಂದು ಋತು. ಆರು ಋತುಗಳಿಗೆ ಒಂದು ಸಂವತ್ಸರ (ವರ್ಷ) ಇದು ಚಾಂದ್ರಮಾನ ವರ್ಷ.
ಲೆಕ್ಕಕ್ಕೆ ಅಂತಹ ಅರವತ್ತು ಸಂವತ್ಸರ. ಅವು ಮತ್ತೆ ಮತ್ತೆ ಪುನರಾ ವರ್ತನೆಯಾಗುತ್ತಲೇ ಇರುತ್ತವೆ. ಕಾಲಕ್ಕೆ ಚಕ್ರಗತಿ. ಸೌರಮಾನದಲ್ಲಿ ಸೂರ್ಯ ನು ಇಪ್ಪತ್ತೇಳು ನಕ್ಷತ್ರಗಳನ್ನು ದಾಟಿ ಚಲಿಸುವ ಒಂದು ಸುತ್ತು ವರ್ಷ ಕಾಲ ಅಮೂರ್ತ. ಅದು ಮೂರ್ತಗೊಳ್ಳುವುದು ಲೆಕ್ಕದಲ್ಲಿ. ವರ್ಷದ ಆದಿಯನ್ನು ಅದರ ಸಾರ್ಥಕತೆಯನ್ನು ನಾವು ಚಿಂತಿಸಬೇಕಾಗಿದೆ. ಆದಿ ಎನ್ನುವುದೂ ನಮ್ಮ ಕಲ್ಪನೆ. ಚಕ್ರಕ್ಕೆ ಆದಿ ಎಲ್ಲಿ ? ಅಂತ್ಯವಿಲ್ಲ ?ಎಲ್ಲಿಯೋ ಒಂದು ಕಡೆ ಬಣ್ಣದ ಪಟ್ಟೆ ಎಳೆದು ಗುರುತಿಸಬೇಕು. ಆದರೂ ನಾವು ಹೊರಟ ಕಡೆಯೇ ಬಂದು ಸೇರುತ್ತೇವೆ. ಆದಿ ಎಲ್ಲೋ, ಅಲ್ಲೇ ಅಂತ್ಯ. ಅಂದರೆ ಎರಡೂ ಇಲ್ಲ ಎಂದೇ ಅರ್ಥ. ವಿಭಿನ್ನ ಶಕಗಳಲ್ಲಿ ವರ್ಷಾರಂಭ ಬೇರೆ. ಬೇರೆಯಾಗಿದ್ದು, ಪಾಶ್ಚಾತ್ಯ ರಲ್ಲಿ ಚಳಿಗಾಲದೊಂದಿಗೆ ವರ್ಷಾರಂಭವಾಗುತ್ತದೆ.
ವಸಂತ ಕಾಲದ ಚೈತ್ರ ಮಾಸದ ಮೊದಲ ದಿನವೇ ವರ್ಷಾರಂಭ ಎನ್ನುವ ಪರಿಗಣನೆ ನಮ್ಮಲ್ಲಿ ಬಹಳ ಕಾಲದಿಂದ ಪ್ರಚಲಿತದಲ್ಲಿದೆ. ವಸಂತದಲ್ಲಿ ವರ್ಷಾರಂಭ ಎನ್ನುವುದೇ ತುಂಬಾ ಸಾರ್ಥಕವಾದ, ಔಚಿತ್ಯ ಪೂರ್ಣವಾದ ಪರಿಕಲ್ಪನೆ.
ಅರಳಿದ ಸುಮ, ಸುವಾಸಿತ ಮಂದಾನಿಲ, ಝೇಂಕರಿಸುವ ದುಂಬಿ, ಕುಹೂ ಎನ್ನುವ ಕೋಗಿಲೆ,ಮೈ ತುಂಬಾ ಹೂ ತಳೆದ ಮಾಮರಗಳು, ಒಟ್ಟಿನಲ್ಲಿ ಚೆಲುವಿನ ಆಗರದೊಂದಿಗೆ ಜೀವನ ಪ್ರೀತಿಯ ಉಲ್ಲಾಸದ ಮಾದರಿಗಳು. ಪ್ರತೀ ವರ್ಷದ ಯುಗಾದಿ ಅವನ್ನೆಲ್ಲ ನಮಗೆ ನೆನಪಿಸುತ್ತಲೇ ಇದೆ. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ… ಮುಂತಾಗಿ ಮನ ದುಂಬಿ ಹಾಡಿದ ವರಕವಿ ಬೇಂದ್ರೆ, ಕವಿತೆಯ ಕೊನೆಯಲ್ಲಿ ಹೇಳುತ್ತಾರೆ. ‘ನಮ್ಮನ್ನಷ್ಟೇ ಮರೆತಿದೆ.. ಕಟುವಾದ ವಾಸ್ತವ. ! ಇಡೀ ಪ್ರಕೃತಿ ವರ್ಷ ವರ್ಷವೂ ಹೊಸ ತಾಗುತ್ತದೆ. ಮನುಷ್ಯ ಮಾತ್ರ ತನ್ನ ಜಂಜಡದಲ್ಲಿ ಮುಳುಗಿ ಹೋಗಿ ನವೋ ಲ್ಲಾಸದಿಂದ ವಂಚಿತನಾಗಿದ್ದಾನೆ. ಅದಕ್ಕಾಗಿ ನಾವು ಪ್ರಕೃತಿಯನ್ನೇ ಮಾದರಿ ಯಾಗಿಟ್ಟುಕೊಂಡು ಬದುಕಿಗೆ ಹೊಸ ಉಲ್ಲಾಸವನ್ನು ಹೊಸ ಚೈತನ್ಯವನ್ನು ಆವಾಹಿಸಿಕೊಳ್ಳಬೇಕು. ಹೊಸ ನಿರ್ಧಾರಗಳನ್ನು ಕೈಗೊಂಡು ಮುನ್ನಡೆ ಯಬೇಕು. ಬದುಕಿನ ಏಕತಾನತೆಯನ್ನು ನೀಗಿಕೊಂಡು ಕಾಲದಂತೆ ಚಲನ ಶೀಲವಾಗಬೇಕು. ಅದು ಯುಗಾದಿ ಹಬ್ಬದ ಸಾರ್ಥಕತೆ.