ಭಾರತ ಹಬ್ಬಗಳ ದೇಶ. ಇಲ್ಲಿ ಹಲವು ಧರ್ಮ, ಪ್ರಾಂತ್ಯದ ಜಾತಿ, ಜನಾಂಗದ ಜನರಿದ್ದಾರೆ. ಈ ದೇಶದಲ್ಲಿ ಒಂದೊಂದು ಧರ್ಮದವರಿಗೂ ವಿಶಿಷ್ಟವಾದ ಹಬ್ಬಗಳಿವೆ. ಅದೇ ರೀತಿ ಹಿಂದೂ ಧರ್ಮದಲ್ಲಿ ಯುಗಾದಿ, ವಿಶೇಷವಾದ ಹಬ್ಬ. ಈ ಹಬ್ಬ ಹೊಸ ಸಂವತ್ಸರದಿಂದ ಪ್ರಾರಂಭಗೊಳ್ಳುತ್ತದೆ. ನಾಳೆಯಿಂದ ವಿಳಂಭಿನಾಮ ಸಂವತ್ಸರ ಆರಂಭವಾಗುವ ಮೂಲಕ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಈ ಹಬ್ಬದ ಆಚರಣೆಗಾಗಿ ನಗರದ ನಾಗರೀಕರು ಈಗಾಗಲೇ ತಯಾರಿ ಕಾರ್ಯ ಆರಂಭಿಸಿದ್ದು, ಇಂದು ಅಮವಾಸ್ಯೆ ಪೂಜಾ ಕಾರ್ಯಕ್ರಮವನ್ನು ತಮ್ಮ ಮನೆ ಹಾಗೂ ದೇವಸ್ಥಾನದಲ್ಲಿ ನೆರವೇರಿಸಿದ್ದಾರೆ.
ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದಂತಹ ಅಗತ್ಯ ಸಾಮಾಗ್ರಿಗಳಾದ ಹೂ, ಹಣ್ಣು, ಈ ಹಬ್ಬದ ವಿಶೇಷತೆಯಾಗಿರುವ ಮಾವಿನ ಸೊಪ್ಪು, ಬೇವಿನ ಸೊಪ್ಪನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾರುಕಟ್ಟೆ ಹಾಗೂ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾವಿನ ಸೊಪ್ಪು ಹಾಗೂ ಬೇವಿನ ಸೊಪ್ಪಿನ ರಾಶಿ ಕಂಡು ಬಂದಿದ್ದು, ಗ್ರಾಹಕರು ತಮಗೆ ಬೇಕಾದಷ್ಟು ಮಾವು, ಬೇವನ್ನು ಕೊಂಡುಕೊಳ್ಳುತ್ತಿದ್ದರು.
ನಾಳೆ ಎಣ್ಣೆ ಸ್ನಾನ ಮಾಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ ಚಂದ್ರ ದರ್ಶನ ಮಾಡುವಂತಹ ಕಾರ್ಯಕ್ರಮ ಈ ಹಬ್ಬದ ವೈಶಿಷ್ಟ್ಯ.