ಶಿವಮೊಗ್ಗ : ತುಂಗಾ ನದಿಯ ಪ್ರವಾಹದಿಂದ ನಾಗರೀಕರ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದ್ದು, ಇದರ ರಕ್ಷಣೆಗಾಗಿ ತುಂಗಾ ನದಿಯ ಬಲದಂಡೆಗೆ ಸುಮಾರು 100 ಮೀಟರ್ ಉದ್ದಕ್ಕೆ ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಎಸ್. ಎನ್. ಚನ್ನಬಸಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಅವರು ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ ನಗರದ ಮದರಿಪಾಳ್ಯದ ಶ್ರೀ ಕಲ್ಲೇಶ್ವರ ದೇವಸ್ಥಾನದ ಪಕ್ಕ ಹಾದು ಹೋಗುವ ತುಂಗಾ ನದಿಯ ಪ್ರವಾಹದಿಂದ ನಾಗರೀಕರ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದ್ದು, ಇದರ ರಕ್ಷಣೆಗಾಗಿ ತುಂಗಾ ನದಿಯ ಬಲದಂಡೆಗೆ ಸುಮಾರು 100 ಮೀಟರ್ ಉದ್ದಕ್ಕೆ ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಲು ಕರ್ನಾಟಕ ನೀರಾವರಿ ನಿಗಮ ನಿಯಮಿತ ಶಿವಮೊಗ್ಗ ಇವರಿಗೆ ಅನುದಾನವನ್ನು ಬಿಡುಗಡೆ ಮಾಡಲು ಕೋರಿದ್ದಾರೆ.
ಹಾಗೆಯೇ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯ ನೀರುಕೆರೆ ಕಟ್ಟಿ ತುಂಬಿ ಭದ್ರಾ ಎಡದಂಡೆ ಕಾಲುವೆ ಮುಖಾಂತರ ಹರಿದು ಶಿವಮೊಗ್ಗ ನಗರದ ಅನೇಕ ಬಡಾವಣೆಗಳಲ್ಲಿ ನೀರು ನುಗ್ಗಿ ಪ್ರವಾಹ ಉಂಟಾಗಿ ಅನೇಕ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದ್ದು, ನಾಳೆ ಹೆಚ್ಚುವರಿ ನೀರನ್ನು ಹೊರಗೆ ಹರಿದು ಬಿಡಲು ಬೀಡುಗುಂಡಿಗಳು ಲಭ್ಯವಿರದ ಕಾರಣ, ಭದ್ರಾ ಎಡದಂಡೆ ಕಾಲುವೆಯಲ್ಲಿ ಬೀಡುಗುಂಡಿಗಳನ್ನು ನಿರ್ಮಾಣಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ತುಂಗಾ ಮೇಲ್ದಂಡೆ ಯೋಜನೆಯಲ್ಲಿ ನಿಗಮದ ಜಾಗವನ್ನು ಒತ್ತುವರಿ ಮಾಡುವುದಲ್ಲದೆ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿರುವುದರಿಂದ ಸರದಿ ಕಾಲುವೆಯ ಎರಡು ಬದಿಗಳಲ್ಲಿ ಚೈನೇಜ್ 10,000 ಕಿಲೋಮೀಟರ್ ರಿಂದ ಚೈನೇಜ್ 21,000 ಕಿಲೋಮೀಟರ್ ವರೆಗೆ ಬ್ರಾಬೆಡ್ ಜಿಎಲ್ ವೈರ್ ಫೆನ್ಸಿಂಗ್ ಮತ್ತು ಚೇನ್ ಲಿಂಕ್ ಫೆನ್ಸಿಂಗ್ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಕೋರಿದ್ದಾರೆ.