Thursday, September 19, 2024
Google search engine
Homeಇ-ಪತ್ರಿಕೆಇಂದು ನಾಗರ ಪಂಚಮಿ: ಅಣ್ಣ ತಂಗಿ ಬಾಂಧವ್ಯದ ಪ್ರತೀಕ

ಇಂದು ನಾಗರ ಪಂಚಮಿ: ಅಣ್ಣ ತಂಗಿ ಬಾಂಧವ್ಯದ ಪ್ರತೀಕ

 ಇಂದು ( ಆ. ೯ ) ನಾಗರ ಪಂಚಮಿ ಹಬ್ಬ. ಭಾರತೀಯ ಸಂಸ್ಕೃತಿಯಲ್ಲಿ ನಾಗರ ಪಂಚಮಿಯು ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಇದನ್ನು ಅಣ್ಣ ತಂಗಿ ಹಬ್ಬ ಎಂತಲೂ ಕರೆಯುತ್ತಾರೆ. ನಾಗರ ಪಂಚಮಿಯ ಹಬ್ಬಕ್ಕೆ ಮದುವೆಯಾಗಿ ಗಂಡನ ಮನೆಗೆ ಹೋದ ತಂಗಿಯನ್ನು ಅಣ್ಣನಾದವನು ತವರು ಮನೆಗೆ ಕರೆದುಕೊಂಡು ಬರುವುದು ವಾಡಿಕೆ.
……………..

ಹಬ್ಬ ಎಂದರೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ. ಎಲ್ಲರೂ ಹಬ್ಬಗಳನ್ನು ಇಷ್ಟಪಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಬಗೆಯ ಹಬ್ಬಗಳನ್ನು ನಾವು ಕಾಣಬಹುದಾಗಿದೆ. ಅವುಗಳೆಂದರೆ ದೀಪಾವಳಿ, ಯುಗಾದಿ, ಹೋಳಿ ಹಬ್ಬ, ಗಣೇಶ ಚತುರ್ಥಿ, ನಾಗರ ಪಂಚಮಿ ಹಾಗೂ ಇನ್ನೂ ಅನೇಕ ಹಬ್ಬಗಳನ್ನು ಭಾರತೀಯರು ಆಚರಿಸುತ್ತಾರೆ.

ಪುರಾತನ ಕಾಲದಿಂದಲೂ ಪ್ರತಿಯೊಂದು ಹಬ್ಬಗಳಿಗೂ ತನ್ನದೇ ಆದ ಇತಿಹಾಸವಿದೆ. ಅದರದ್ದೇ ಆದ ಆಚಾರ ವಿಚಾರಗಳಿವೆ. ಅದರಂತೆ ಹಿಂದಿನ ಕಾಲದಿಂದಲೂ ಬಂದಂತಹ ಸಂಸ್ಕೃತಿಯನ್ನು ಇನ್ನೂ ಸಹ ಪಾಲಿಸುತ್ತಾ ಬಂದಿದೆ. ಆದರೆ ನಗರ ಪ್ರದೇಶಗಳಲ್ಲಿ ಈ ಸಂಸ್ಕೃತಿ ಮರೆ ಮಾಚುತ್ತಿದೆ. ಆದರೆ ಹಳ್ಳಿ ಪ್ರದೇಶಗಳಲ್ಲಿ ಈಗಲೂ ಸಹ ಈ ಆಚಾರ ವಿಚಾರಗಳು ಕಂಡು ಬರುತ್ತವೆ.

ಭಾರತೀಯ ಸಂಸ್ಕೃತಿಯಲ್ಲಿ ನಾಗರ ಪಂಚಮಿಯು ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಇದನ್ನು ಅಣ್ಣ ತಂಗಿ ಹಬ್ಬ ಎಂತಲೂ ಕರೆಯುತ್ತಾರೆ. ನಾಗರ ಪಂಚಮಿಯ ಹಬ್ಬಕ್ಕೆ ಮದುವೆಯಾಗಿ ಗಂಡನ ಮನೆಗೆ ಹೋದ ತಂಗಿಯನ್ನು ಅಣ್ಣನಾದವನು ತವರು ಮನೆಗೆ ಕರೆದುಕೊಂಡು ಬರುವುದು ವಾಡಿಕೆ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ.

ಈ ನಾಗರ ಪಂಚಮಿಗೆ ಒಂದು ಇತಿಹಾಸವಿದೆ. ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರ ಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರ ಹಾವಿಗೆ ಹೇಳಿದಳು, “ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ” ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಪೂರ್ವಜರು ಹೇಳುವ ನಾಗರ ಪಂಚಮಿಯ ಕಥೆ.

ಇಲ್ಲಿಂದ ತಂಗಿಯಾದವಳು ಅಣ್ಣನು ಆರೋಗ್ಯದಿಂದ ಸಂತೋಷದಿಂದ ಇರಲಿ ಎನ್ನುವ ಉದ್ದೇಶದಿಂದ ಪಂಚಮಿಯ ಹಿಂದಿನ ದಿನ ಉಪವಾಸ ಮಾಡುತ್ತಾಳೆ. ಹಳ್ಳಿಗಳಲ್ಲಿ ಈ ಹಬ್ಬವನ್ನು ಬಹಳ ಸಂಪ್ರದಾಯ ಬದ್ಧವಾಗಿ ಆಚರಿಸುತ್ತಾರೆ. ನಾಗರ ಪಂಚಮಿಯ ದಿನದಂದು ಅಂಗಳವನ್ನು ಸಾರಿಸಿ ಗುಡಿಸಿ ರಂಗೋಲಿ ಹಾಕಿ ಅಂಗಳವನ್ನು ಸುಂದರವನ್ನಾಗಿ ಮಾಡಲಾಗುತ್ತದೆ. ಮನೆಯವರೆಲ್ಲರೂ ಸೇರಿ ವಿವಿಧ ಬಗೆಯ ಉಂಡೆಗಳನ್ನು ಕಟ್ಟುತ್ತಾರೆ. ಬುಂದೆ ಉಂಡೆ, ರವೆ ಉಂಡೆ, ಶೇಂಗಾ ಉಂಡೆ, ಅಳ್ಳಿಟ್ಟಿನ ಉಂಡೆ, ಅಂಟಿನ ಉಂಡೆ ಹೀಗೆ ಅನೇಕ ಬಗೆಯ ಉಂಡೆಗಳನ್ನು ತಯಾರಿಸಲಾಗುತ್ತದೆ. ಅಂದು ಮನೆಯಲ್ಲೇ ಮಣ್ಣನ್ನು ತಂದು ನಾಗನನ್ನು ತಯಾರಿಸಿ ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿ, ಮನೆಯವರೆಲ್ಲ ನಾಗ ಮೂರ್ತಿಗೆ ಹಾಲನ್ನು ಎರೆಯಲಾಗುತ್ತದೆ. ಮಾರನೇ ದಿನ ಮನೆಯವರೆಲ್ಲರೂ ಸೇರಿ ಗುಡಿಯಲ್ಲಿರುವ ನಾಗ ದೇವರ ವಿಗ್ರಹಕ್ಕೆ ಹಾಲನ್ನು ಎರೆಯಲಾಗುತ್ತದೆ.

ಈ ಹಬ್ಬದಲ್ಲಿ ಇನ್ನೊಂದು ವಿಶೇಷವೆಂದರೆ ಜೋಕಾಲಿ ಆಡುವುದು. ಊರಲ್ಲಿರುವ ದೊಡ್ಡ ಮರವೊಂದಕ್ಕೆ ಜೋಕಾಲಿ ಕಟ್ಟುತ್ತಾರೆ. ಮರದ ಕೊಂಬೆಯ ತುದಿಗೆ ಒಣ ಕೊಬ್ಬರಿಯನ್ನು ಕಟ್ಟಿರುತ್ತಾರೆ. ಜೋಕಾಲಿ ಆಡುತ್ತಾ ಅದನ್ನು ಬಾಯಲ್ಲಿ ಕಿತ್ತು ತಿನ್ನುವುದು ಒಂದು ಸವಾಲು. ಅದನ್ನು ಕೀಳಲು ಪೈಪೋಟಿ ನಡೆಯುತ್ತದೆ. ನಾ ಮುಂದು ತಾ ಮುಂದು ಎಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕೆಲವೊಮ್ಮೆ ಜೋಕಾಲಿ ಆಡುವಾಗ ಕೆಳಗೆ ಬೀಳುವುದು ಉಂಟು. ಬಿದ್ದು ಗಾಯ ಮಾಡಿಕೊಂಡಿರುವುದು ಉಂಟು. ಅದನ್ನು ನೋಡುವುದೇ ಒಂದು ಸೋಜಿಗ. ಇದು ಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನಾಗರ ಪಂಚಮಿಯ ಮೇಲೆ ಹಲವಾರು ಜನಪದ ಹಾಡುಗಳಿವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಈ ರೀತಿಯ ಹಾಡುಗಳನ್ನು ಕಾಣಬಹುದಾಗಿದೆ. “ಪಂಚಮಿ ಹಬ್ಬ ಉಳಿದವ ದಿನ ನಾಕ ಅಣ್ಣಾ ಬರಲಿಲ್ಲ ಯಾಕ್ ಕರಿಲಾಕ್” ಎಂಬ ಜಾನಪದ ಹಾಡುಗಳು ಹೆಚ್ಚು ಪ್ರಚಲಿತವಾಗಿವೆ. ಆದರೆ ನಗರ ಪ್ರದೇಶಗಳಲ್ಲಿ ಈ ಸಂಪ್ರದಾಯ ಮರೆ ಮಾಚುತ್ತದೆ. ಯಾವುದೇ ಆಚಾರ ವಿಚಾರಗಳು ಕಾಣಸಿಗುವುದಿಲ್ಲ. ಕೇವಲ ಹಬ್ಬ ಎನ್ನುವುದು ಬಿಟ್ಟರೆ ಯಾವುದೇ ಸಡಗರ ಸಂಭ್ರಮ ಕಾಣಿಸುವುದಿಲ್ಲ. ಈಗಿನ ಮಕ್ಕಳಿಗೂ ಸಹ ಈ ಹಬ್ಬಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾವ ಸಂಸ್ಕೃತಿ ಸಂಪ್ರದಾಯಗಳ ಅರಿವು ತಿಳುವಳಿಕೆ ಅವರಲ್ಲಿ ಕಾಣುವುದಿಲ್ಲ. ಆದಷ್ಟು ನಗರ ಪ್ರದೇಶಗಳ ಜನರು ಸಹ ಸಾಂಪ್ರದಾಯಿಕ ಹಬ್ಬಗಳ ಆಚರಣೆ ಮಾಡಲು ಮುಂದಾಗಬೇಕು. ಆ ಮೂಲಕ ವಿಶಿಷ್ಟ ಹಬ್ಬಗಳ ಆಚರಣೆಯ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ.

ಬಾಕ್ಸ್‌
ನಾಗರ ಪಂಚಮಿಯ ಮೇಲೆ ಹಲವಾರು ಜನಪದ ಹಾಡುಗಳಿವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಈ ರೀತಿಯ ಹಾಡುಗಳನ್ನು ಕಾಣಬಹುದಾಗಿದೆ. “ಪಂಚಮಿ ಹಬ್ಬ ಉಳಿದವ ದಿನ ನಾಕ ಅಣ್ಣಾ ಬರಲಿಲ್ಲ ಯಾಕ್ ಕರಿಲಾಕ್” ಎಂಬ ಜಾನಪದ ಹಾಡುಗಳು ಹೆಚ್ಚು ಪ್ರಚಲಿತವಾಗಿವೆ. ಆದರೆ ನಗರ ಪ್ರದೇಶಗಳಲ್ಲಿ ಈ ಸಂಪ್ರದಾಯ ಮರೆ ಮಾಚುತ್ತದೆ. ಯಾವುದೇ ಆಚಾರ ವಿಚಾರಗಳು ಕಾಣಸಿಗುವುದಿಲ್ಲ. ಕೇವಲ ಹಬ್ಬ ಎನ್ನುವುದು ಬಿಟ್ಟರೆ ಯಾವುದೇ ಸಡಗರ ಸಂಭ್ರಮ ಕಾಣಿಸುವುದಿಲ್ಲ.

-ಲಕ್ಷ್ಮಿ ಮಾದರ, ರಾಜ್ಯ ಸಮಾಚಾರ ಕೇಂದ್ರ ಹುಬ್ಬಳ್ಳಿ

RELATED ARTICLES
- Advertisment -
Google search engine

Most Popular

Recent Comments