ಶಿವಮೊಗ್ಗ : ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ, ಅವ್ಯವಹಾರ ನಡೆದಿರುವುದಿಲ್ಲ. ಸುಳ್ಳು ವದಂತಿಗಳಿಗೆ ಸಮಾಜ ಬಾಂಧವರು ಕಿವಿಗೊಡಬೇಡಿ. ಅಲ್ಲಲ್ಲಿ ಗುಸುಗುಸು ಮಾತನಾಡುವುದು ಸಮಾಜಕ್ಕೆ ಶೋಭೆ ತರುವಂತದಲ್ಲ ಎಂದು ಸಂಘದ ಅಧ್ಯಕ್ಷ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹೇಳಿದ್ದಾರೆ.
ಗುರುವಾರ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಬಂಜಾರ ಸಂಘವು ಕಳೆದ 48 ವರ್ಷಗಳಿಂದ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯ ಸರ್ಕಾರ ಸಂಘ ಸಂಸ್ಥೆಗಳಿಗಾಗಿ ನೀಡಲಾಗಿರುವ ನಿವೇಶನಗಳಲ್ಲಿ ಬಾಲರಾಜ್ ಅರಸ್ ರಸ್ತೆಯಲ್ಲಿ 20 ಗುಂಟೆಯನ್ನು ಮಂಜೂರು ಮಾಡಿದೆ. ಈ ಜಾಗದಲ್ಲಿ ಸಂಘವು ಹಾಸ್ಟೆಲ್ ನಿರ್ಮಿಸಿ ಸಮಾಜ ಬಂಧುಗಳಿಗೆ ಸೇವೆ ಒದಗಿಸಲು ಅವಕಾಶ ಮಾಡಿಕೊಂಡಿತ್ತು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಹಾಸ್ಟೆಲ್ ಮುಚ್ಚಲ್ಪಟ್ಟು ಪಾಳು ಬಿದ್ದಂತಾಗಿತ್ತು ಎಂದರು.
ಬಹಳ ವರ್ಷಗಳಿಂದ ಸಮಾಜದ ಕನಸಿನಂತೆ ಸದರಿ ಸ್ಥಳದಲ್ಲಿ ಭವನ ನಿರ್ಮಾಣವಾಗಬೇಕೆಂದು ನಿರ್ಣಯ ಕೈಗೊಂಡು ನೂತನ ಸಮಿತಿ ರಚಿಸಿ ನನ್ನನ್ನು 2021 ರಲ್ಲಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ನಿರೀಕ್ಷೆಯಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸ್ಪಂದಿಸಿದ ನಾಯಕರು ಸರ್ಕಾರವ ವಿವಿಧ ಇಲಾಖೆಗಳಿಂದ ರೂ.10,33,79,000 ಗಳನ್ನು ಮಂಜೂರು ಮಾಡಿಸಿಕೊಟ್ಟರು. ಇದುವರೆಗೆ ರೂ.8,83,79,000 ಅನುದಾನ ಬಿಡುಗಡೆಯಾಗಿದ್ದು, ಇನ್ನೂ ರೂ.1,50,00,000 ಕೋಟಿ ಬಿಡುಗಡೆಯಾಗಬೇಕಾಗಿದೆ ಎಂದರು.
ಕಟ್ಟಡ ನಿರ್ಮಾಣಕ್ಕೆ ಒಟ್ಟು ರೂ.11,74,54,000 ಸರ್ಕಾರದಿಂದ ಬಿಡುಗಡೆಯಾಗಬೇಕಾದ ಬಾಕಿ ಅನುದಾನ ಹೊರತುಪಡಿಸಿ ರೂ.1,40,75,000 ಗುತ್ತಿಗೆದಾರರಿಗೆ ಸಂಘವು ಪಾವತಿ ಮಾಡಬೇಕಾಗಿರುತ್ತದೆ. ಇದುವರೆಗೆ ಬಂಜಾರ ಭವನಕ್ಕೆ ಶುಭ ಕಾರ್ಯಗಳಿಂದ 1,21,82,401 ರೂ. ಸ್ವೀಕೃತವಾಗಿದೆ. ಭವನ ನಿರ್ಮಾಣಕ್ಕೆ ಸಮಾಜ ಗಣ್ಯರಿಂದ ರೂ.36,12,414, ತಾಂಡಗಳಿಂದ ರೂ.14,17,712, ಸದಸ್ಯತ್ವದಿಂದ ಪಾವತಿಯಾಗಿರುವ ರೂ.2,49,000 ಹೀಗೆ ಒಟ್ಟು ರೂ.1,80,18,927 ಸಮಾಜಕ್ಕೆ ಸಂದಾಯವಾಗಿ ಭವನದಲ್ಲಿ ಶುಭ ಕಾರ್ಯಗಳಿಗಾಗಿ ಅವಶ್ಯಕವಾಗಿ ಬೇಕಾಗಿರುವ ಪೀಟೋಪಕರಣ, ಜನರೇಟರ್ ಹಾಗೂ ಇತರೆ ಸಾಮಗ್ರಿಗಳಿಗೆ ಒಟ್ಟು ರೂ.90 ಲಕ್ಷ ಗುತ್ತಿಗೆದಾರರಿಗೆ ಸಂಘ ಪಾವತಿ ಮಾಡಿದೆ. ಗುತ್ತಿಗೆದಾರರಿಗೆ ರೂ.1,93,75,000 ಪಾವತಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಆರ್.ಜಗದೀಶ್, ನಾನ್ಯಾನಾಯ್ಕ್, ನಾಗೇಶ್‍ನಾಯ್ಕ್, ಶಿವಾನಂದ ನಾಯ್ಕ್, ಆರ್.ಸಿ.ನಾಯ್ಕ್, ಬೋಜ್ಯನಾಯ್ಕ್, ಮಂಜುನಾಯ್ಕ್, ವಾಸುದೇವ ನಾಯ್ಕ್ ಇನ್ನಿತರರು ಉಪಸ್ಥಿತರಿದ್ದರು.