ಶಿವಮೊಗ್ಗ: ಕ್ಷೇತ್ರದ ಜನರು ನಾಲ್ಕು ಬಾರಿ ಸಂಸದರನ್ನಾಗಿ ಆಯ್ಜೆ ಮಾಡಿದ್ದಾರೆ. ಅವರ ಆಶೀರ್ವಾದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಅದರಾಚೆ ಸಚಿವ ಸ್ಥಾನ ಸಿಗುವ ವಿಷಯ ಪಕ್ಷಕ್ಕೆ ಬಿಟ್ಟಿದ್ದು, ಪಕ್ಷ ಏನೇ ನಿರ್ಧಾರ ತೆಗೆದುಕೊಂಡರೂ ಜಿಲ್ಲೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ನನ್ನದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ಧಾರೆ.
ಲೊಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ ಬುಧವಾರ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಅವರು, ತಮ್ಮ ಗೆಲುವಿಗೆ ಕಾರಣರಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ಮತದಾರರು ಹಾಗೂ ಬಿಜೆಪಿ-ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
ಸ್ವಾತಂತ್ರ ನಂತರ ಕಾಂಗ್ರೆಸ್ಸೇತರ ಪಕ್ಷವೊಂದು ಸತತ ೩ನೆ ಬಾರಿಗೆ ಸರಕಾರ ರಚಿಸುತ್ತಿರುವುದು ಬಿಜೆಪಿ ಮಾತ್ರವೇ. ಇದಕ್ಕೆ ಬೆಂಬಲ ಸೂಚಿಸಿದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್ ಮತ್ತು ಅದರ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ೨ ಲಕ್ಷಕ್ಕೂ ಅಧಿಕ ಅಂತರದಲ್ಲಿ ಜಯಿಸಿದ ನನಗೆ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಜನರ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದ ಜನ ನಮಗೆ ನಿರೀಕ್ಷೆ ಮೀರಿ ಜಯ ತಂದುಕೊಟ್ಟಿದ್ದಾರೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು, ಇತರೆ ಅಪಪ್ರಚಾರದಿಂದ ನಮ್ಮ ಶಕ್ತಿಯನ್ನು ಕುಂದಿಸಲು ಹವಣಿಸಿದರೂ ಕೂಡ, ಬಿಜೆಪಿ-ಜೆಡಿಎಸ್ ಮೈತ್ರಿಯು ಈಗ ೧೭ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ. ಪ್ರಜ್ಞಾವಂತ ಮತದಾರರು ತಮ್ಮ ದೂರದೃಷ್ಟಿಯಿಂದಾಗಿ ನಮ್ಮ ನಿರೀಕ್ಷೆ ಮೀರಿ ಗೆಲುವು ತಂದುಕೊಟ್ಟಿದ್ದಾರೆ. ಲೋಕಸಭೆಯ ಸದಸ್ಯನಾಗಿ ನಮ್ಮ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಈ ಗೆಲುವನ್ನು ಸಮರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ನಮ್ಮ ವಿರುದ್ದ ಸಾಕಷ್ಟು ಅಪಪ್ರಚಾರ ನಡೆದಿದೆ. ಇವೆಲ್ಲದಕ್ಕೂ ಮತದಾನದ ಮೂಲಕ ಜನರು ಉತ್ತರವನ್ನು ಕೊಟ್ಟಿದ್ದಾರೆ. ಆ ಬಗ್ಗೆ ನಾನಿಲ್ಲಿ ಹೆಚ್ಚಾಗಿ ಹೇಳುವುದಿಲ್ಲ. ನಿರೀಕ್ಷೆಗೂ ಮೀರಿದ ಹೆಚ್ಚಿನ ಮತದಾರರು ನನಗೆ ಅಶೀರ್ವಾದ ಮಾಡಿದ್ದಾರೆ. ಬೆಂಬಲ ಸೂಚಿಸಿದ ಜೆಡಿಎಸ್ ನ ಕಟ್ಟಕಡೆಯ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪತ್ರಿಕಾ ಮಾಧ್ಯಮದ ಸ್ನೇಹಿತರು ಕೇಂದ್ರದ ಯೋಜನೆಗಳು, ನಮ್ಮ ಪಕ್ಷದ ಸಿದ್ದಾಂತಗಳನ್ನು ಪ್ರಚಾರ ಮಾಡಿದ್ದಾರೆ. ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿದ ಇವರ ಸಹಕಾರವನ್ನು ನೆನೆಯುತ್ತೇನೆ. ಸಂಘ ಪರಿವಾರದ ಹಿರಿಯರು ನಮಗೆ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಅಶೀರ್ವಾದ ಮಾಡಿದ ಸಂಘದ ಪ್ರಮುಖರಿಗೆ ಹೃತ್ಪೂರ್ಕ ವಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಲ್ಲಿ ೮೭ ಸಾವಿರದ ಸಂಖ್ಯೆಯ ಗಡಿ ದಾಟಲು ಆಗುತ್ತಿಲ್ಲ. ತವರು ಮನೆಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ದೇಶದಲ್ಲಿ ನಮ್ಮ ನಿರೀಕ್ಷೆ ಕಡಿಮೆಯಾಗಿರುವ ಕುರಿತು ವಿಮರ್ಶೆ ಮಾಡುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎಚ್. ಚನ್ನಬಸಪ್ಪ, ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ, ಮಾಲತೇಶ, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ, ಮೋಹನ್ ರೆಡ್ಡಿ ಮುಂತಾದವರು ಹಾಜರಿದ್ದರು.