ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಲ್ಲಿನ ಸಮೀಪದ ಪಿಳ್ಳಂಗೆರೆ ಬಳಿ ನಡೆದಿದೆ. ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ.
ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಿಳ್ಳಂಗೆರೆ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಷ್ಟು ಮಾತ್ರವಲ್ಲದೆ, ಅಲ್ಲಿಯೇ ತಿರುವಿನಲ್ಲಿಯೇ ನಿಂತಿದ್ದ ಓಮ್ನಿ ಕಾರಿಗೆ ಗುದ್ದಿ, ಅದರ ಸಮೇತ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ವಿದ್ಯುತ್ ವಯರ್ ಬಸ್ ಮೇಲೆ ಬಿದ್ದಿದೆ. ತಂತಿಯಲ್ಲಿ ಆಗ ವಿದ್ಯುತ್ ಪ್ರವಹಿಸುತ್ತಿತ್ತಾದರೂ, ದಾರಿಯಲ್ಲಿ ತೆರಳುತ್ತಿದ್ದ ಇತರೆ ವಾಹನಗಳ ಪ್ರಯಾಣಿಕರು ಕೂಡಲೆ ರಕ್ಷಣೆಗೆ ಧಾವಿಸಿ, ಮೆಸ್ಕಾಂಗೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ರವಾನಿಸಿದರು.
ಹಾಗೆಯೇ ಅಪಘಾತಕ್ಕೀಡಾದ ಬಸ್ಸಿನಿಂದ ಗಾಬರಿಯಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ವಯರ್ ಬಗ್ಗೆ ಎಚ್ಚರ ವಹಿಸುವಂತೆ ಕೂಗಿ ತಿಳಿಸಿ ಹಲವರ ಪ್ರಾಣ ರಕ್ಷಿಸಿದ್ದಾರೆ.
ಅಲ್ಲದೆ, ಅಪಘಾತದ ಸದ್ದು ಕೇಳಿ ಪಿಳ್ಳಂಗೆರೆ ಗ್ರಾಮಸ್ಥರು ಕೂಡ ನೆರವಿಗೆ ಧಾವಿಸಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತುರ್ತು ನೆರವು ನೀಡಿ, ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದಂತೆ ಆಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ವಿದ್ಯುತ್ ಕಂಬ ಮತ್ತು ಓಮ್ನಿ ಕಾರಿಗೆ ಬಸ್ಸು ಡಿಕ್ಕಿಯಾದ ಹಿನ್ನೆಲೆಯಲ್ಲಿ ಬಸ್ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ಹೇಳಲಾಗಿದೆ. ಜತೆಗೆ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.