ಮುಂಬೈ: ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು ರೋಚಕ ಗೆಲುವು ದಾಖಲಿಸಿ, ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಮುಂಬೈನಲ್ಲಿ ಭರ್ಜರಿ ವಿಜಯೋತ್ಸವ ಆಚರಿಸಲಾಯಿತು.
ಗುರುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಸಂಜೆ ಮುಂಬೈಗೆ ಬಂದಿಳಿದ ಭಾರತ ತಂಡ ಆಟಗಾರರು ಭಾರೀ ವಿಜಯಯಾತ್ರೆಯಲ್ಲಿ ಪಾಲ್ಗೊಂಡರು. ಮುಂಬೈನ ನಾರಿಮನ್ ಪಾಯಿಂಟ್ ನಿಂದ ಶುರುವಾದ ವಿಜಯಯಾತ್ರೆ ವಾಂಖೆಡೆ ಕ್ರೀಡಾಂಗಣದವರೆಗೂ ಸಾಗಿ ಬಂತು.
ಆರಂಭದಲ್ಲಿ ವಿಶ್ವ ವಿಜೇತರನ್ನು ಅಭಿನಂದಿಸುವ ಅಭಿಮಾನಿಗಳ ಸಂಭ್ರಮಕ್ಕೆ ವರುಣ ತಡೆಯೊಡ್ಡಿತ್ತಾದರೂ, ವರುಣ ಸಿಂಚನಕ್ಕೆ ಮೈಯೊಡ್ಡಿ ನಿಂತಿದ್ದ ಕ್ರಿಕೆಟ್ ಅಭುಮಾಣನಿಗಳು, ಸುರಿಯುವ ಮಳೆಗೂ ಜಗ್ಗದೇ ಮೈದಾನದಲ್ಲೇ ನಿಂತಿದ್ದು ಕಂಡು ಬಂತು. ಕೆಲವರಂತೂ ಮಳೆಯಲ್ಲೇ ನೆನೆದುಕೊಂಡು ಟೀಂ ಇಂಡಿಯಾ ಪರ ಘೋಷಣೆ ಕೂಗುತ್ತಿದ್ದರು.
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ರೋಹಿತ್ ಶರ್ಮಾ ಅವರ ಈ ಕರೆಗೆ ಕ್ರಿಕೆಟ್ ಆಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಬೆಂಬಲಿಸಿ, ಬಂದಿದ್ದರು.ಟೀಂ ಇಂಡಿಯಾ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದ ಜನ ಸಮೂಹ ಸಾಗರದಂತೆ ಭಾಸವಾಯಿತು. ಮುಂಬೈಗೆ ತೆರಳುವ ಮುನ್ನ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ ವಿಶ್ವಕಪ್ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು.
ಪ್ರಧಾನಿ ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ ನಮೋ ನಂ.1 ಎಂದು ಬರೆದ ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಯಿತು.