ದಾವಣಗೆರೆ: ಮಕ್ಕಳಿಗೆ ವಚನ ಸಾಹಿತ್ಯ ಕಲಿಸಿ. ಇಲ್ಲದಿದ್ದರೆ ಅವರು ಅನ್ಯ ಸಂಸ್ಕೃತಿಯನ್ನು ಕಲಿತು ಅದನ್ನೇ ಅನುಸರಿಸಿ ಬದುಕನ್ನು ಹಾಳು ಮಾಡಿಕೊಳ್ಳುವ ಅಪಾಯವಿದೆ ಎಂದು ಬಸವ ತತ್ವದ ಚಿಂತಕ ವಿಶ್ವಾರಾಧ್ಯ ಸಂತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆವರು ಮಾತನಾಡಿದರು.
ಇಂದಿನ ಮಠಗಳಲ್ಲಿ ವಚನಗಳು ಸಿಗದಂತಹ ಸ್ಥಿತಿ ಏರ್ಪಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಮಂದಿರ, ಮಸೀದಿ, ಚರ್ಚ ಗಳು ಬಾಗಿಲು ಮುಚ್ಚಿದ್ದವು. ಆದರೆ, ಇಷ್ಟಲಿಂಗ ಪೂಜೆಗೆ ಯಾವುದೇ ಅಡ್ಡಿಗಳಿರಲಿಲ್ಲ. ಕೊರಳಲ್ಲಿ ಲಿಂಗ ಇರದ ಲಿಂಗಾಯತರನ್ನು ಹೇಗೆ ಲಿಂಗಾಯತರು ಎಂದು ಹೇಳುವುದು ಎಂದು ಅವರು ಪ್ರಶ್ನಿಸಿದರು.
ಇಂದಿನ ಸ್ವಾಮೀಜಿಗಳು ರಾಜಕಾರಣಿಗಳಿಗಿಂತ ಜಾಸ್ತಿ ಹಾಳಾಗಿದ್ದಾರೆ. ಮಠಗಳು ಮೋಜಿನಲ್ಲಿ ತೊಡಗಿವೆ.ಧರ್ಮದ ಹೆಸರಿನಲ್ಲಿ ದಗಲ್ಬಾಜಿತನ ನಡೆಯುತ್ತಿದೆ. ಬಸವ ತತ್ವ ಅಳವಡಿಸಿಕೊಂಡು ಸಮಾಜ ಮುಖಿ ಚಿಂತನೆಯಲ್ಲಿದ್ದವರು ಎಲ್ಲೋ ಕೆಲವರು ಇದ್ದಾರೆ. ಅರಿವು, ಅನ್ನ, ಶಿಕ್ಷಣದ ಸರಿಯಾದ ಮಾರ್ಗದರ್ಶನ ನೀಡುವವರೇ ನಿಜವಾದ ಸ್ವಾಮೀಜಿ. ಹೆಣ್ಣು ಭೋಗದ ವಸ್ತುವಲ್ಲ. ಸನಾತನ ಧರ್ಮವನ್ನು ಧಿಕ್ಕರಿಸಿ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಪಾಟೀಲ್,ದೇವರಮನಿ ಶಿವಕುಮಾರ್, ಅಥಣಿ ವೀರಣ್ಣ, ಅಣಬೇರು ರಾಜಣ್ಣ,
ಎಸ್. ಎಸ್. ಗಣೇಶ, ವೃಷಭೇಂದ್ರಪ್ಪ ಇತರ ಗಣ್ಯರು ಇದ್ದರು.
……………………………..
2021-22 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯುಪಿಎಸ್ ಸಿ ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದ ಸೌಭಾಗ್ಯಎಸ್,ಬೀಳಗಿಮಠ, ಎಸ್ ಎಸ್ ಎಲ್ ಸಿಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮಸ್ಥಾನ ಪಡೆದಿರುವ ಎಚ್. ಜಿ.ಗಾನವಿ ಅವರನ್ನು ಅಭಿನಂದಿಸಲಾಯಿತು. ಮಹಾಸಭಾವು ವರ್ಷಕ್ಕೆ 1 ಕೋಟಿ ರೂ, ವ್ಯಯ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಹ ದೊರೆಯುತ್ತಿದೆ.
……………………………………………
ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ ಎಂದು ಯಾರೋ ಒಬ್ಬರು ಹೇಳುತ್ತಾರೆ. ದೇವರೇ ಕಳುಹಿಸಿದ್ದರೆ ಅವರಿಗೆ ಈ ದೇಶದ ನಾಗರೀಕತ್ವ ಸಿಗಲ್ಲ, ಆಧಾರ ಕಾರ್ಡ್ ಸಿಗಲ್ಲ ಅಲ್ವಾ, ಅವರು ಸಮುದ್ರದ ಆಳಕ್ಕೆ ಇಳಿದು ನವಿಲುಗರಿ ನೆಡುತ್ತಾರೆ. ಇದು ಯಾವ ಯುಗ ಅಜ್ಞಾನದ್ದೋ, ವಿಜ್ಞಾನದ್ದೋ? ಇದು ದೇಶವನ್ನು ಗಂಡಾಂತರಕ್ಕೆ ದೂಡುವ ಹುನ್ನಾರದ ಭಾಗ. ಬಸವಣ್ಣನವರ ವಿಚಾರ ಅರಿತೆ ಮಾತ್ರ ಈ ಗಂಡಾಂತರದಿಂದ ಪರಾಗಬಹುದು.
– ವಿಶ್ವಾರಾಧ್ಯ ಸಂತ್ಯಂಪೇಟೆ , ಚಿಂತಕ
ಮಕ್ಕಳಿಗೆ ವಚನ ಸಾಹಿತ್ಯ ಕಲಿಸಿ: ಚಿಂತಕ ವಿಶ್ವಾರಾಧ್ಯ ಸಂತ್ಯಂಪೇಟೆ ಸಲಹೆ
RELATED ARTICLES