ಶಿವಮೊಗ್ಗ : ಬೆಂಗಳೂರಿನ ಪಯಣ ಸಂಸ್ಥೆ, ಫೀಪಲ್ಸ್ ಲಾಯರ್ಸ್ ಗೀಲ್ಡ್, ಶಿವಮೊಗ್ಗದ ರಕ್ಷ ಸಮುದಾಯ, ರಂಗಾಯಣ ನೇಟಿವ್ ಥೇಟರ್ ಇವರ ಸಂಯುಕ್ತಾಶ್ರಯದಲ್ಲಿ ಟ್ರಾನ್ಸ್ ಸಮುದಾಯದ ಜೀವನ ಚಿತ್ರಣವಿರುವ ತಲ್ಕಿ ಎಂಬ ನಾಟಕವನ್ನು ಜೂ.15 ರಂದು ಸಂಜೆ 7.00 ಕ್ಕೆ ರಂಗಾಯಣದಲ್ಲಿ ಆಯೋಜಿಸಲಾಗಿದೆ ಎಂದು ಪಯಣ ಸಂಸ್ಥೆಯ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಚಾಂದಿನಿ ತಿಳಿಸಿದರು.
ಗುರುವಾರ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ನಮ್ಮ ಜೀವನ ಏನು ಎಂದು ಹೇಳುವುದಕ್ಕೆ ಇದು ಎಂದು ಅವಕಾಶವಾಗಿದೆ. ತಲ್ಕಿ ನಾಟಕ ನಮ್ಮದೊಂದು ಹೊಸ ಪ್ರಯತ್ನ. ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಬದುಕಿನ ಬಗ್ಗೆ ಅವರ ಸುಖದುಃಖಗಳನ್ನು ಪ್ರತಿಬಿಂಬಿಸುವ ನಾಟಕ ತಲ್ಕಿಯಾಗಿದೆ. ಜನರು ತಮ್ಮ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಮತ್ತು ನಮ್ಮದೇ ಭಾಷೆ, ಪ್ರೀತಿಯನ್ನು ತೋರಿಸುವ ಮೂಲಕ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದ್ದೇವೆ ಎಂದರು.
ತಲ್ಕಿ ಎಂದರೆ ಮಾಂಸದಿಂದ ತಯಾರು ಮಾಡುವ ಆಹಾರ ಪದಾರ್ಥ. ಈ ತಲ್ಕಿ ನಾಟಕವು ಜೂ.14 ರಂದು ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ 2.30 ಕ್ಕೆ ಪ್ರದರ್ಶನ ನಡೆಯಲಿದೆ. ಹಾಗೆಯೇ ಜೂ.15 ರಂದು ರಂಗಾಯಣದಲ್ಲಿ ಸಂಜೆ 7.00 ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಶ್ರೀಜಿತ್ ಸುಂದರಂ, ನಟಿಯರಾದ ರೇವತಿ.ಎ, ಭಾನಮ್ಮ ಇದ್ದರು.