ಶಿವಮೊಗ್ಗ : ಕೀಳರಿಮೆ ಬಿಟ್ಟು ಆತ್ಮಾಭಿಮಾನ ಬೆಳೆಸಿಕೊಳ್ಳಿ ಎಂದು ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ರೈತರಿಗೆ ಕರೆ ನೀಡಿದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಮಹಾನಗರಪಾಲಿಕೆ ವತಿಯಿಂದ ನಡೆಯುತ್ತಿರುವ ರೈತ ದಸರಾ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನೀವು ಮಾಡುವ ಉದ್ಯೋಗದ ಬಗ್ಗೆ ಕೀಳರಿಮೆ ಬಿಡಿ, ಆತ್ಮಾಭಿಮಾನ ಬೆಳೆಸಿಕೊಳ್ಳಿ, ಆಗ ಮಾತ್ರ ಸಮಾಜದಲ್ಲಿ ನೀವು ಮೇಲೆ ಬರಲು ಸಾಧ್ಯ ಎಂದು ಹೇಳಿದರು.
ನಿಮ್ಮ ಉದ್ಯೋಗ ಏನು ಎಂದು ಯಾರಾದರೂ ಕೇಳಿದರೆ ದೇಶಕ್ಕೆ ಅನ್ನ ಹಾಕುತ್ತೇನೆ ಎಂದು ಹೇಳಿ, ಆದರೆ ನಿಮ್ಮಲ್ಲಿ ಕೀಳರಿಮೆ ಇದೆ. ಇದರಿಂದ ಹೊರಬಂದಾಗ ಮಾತ್ರ ಸಮಾಜದಲ್ಲಿರುವವರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಆಗ ನಿಮ್ಮ ಬೇಡಿಕೆಗಳು ಈಡೇರುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ಉತ್ತರೆ ಮಳೆ ಮಧ್ಯ ಕರ್ನಾಟಕ ಭಾಗದಲ್ಲಿ ಉತ್ತಮ ರೀತಿಯಲ್ಲಿ ಬಂದಿದೆ. ಈ ರೀತಿಯ ಮಳೆ ಮಗೆ ಮಳೆ ಬರಬೇಕಾಗಿತ್ತು. ಆದರೆ, ಉತ್ತರೆ ಮಳೆ ಇದೇ ಮಾದರಿಯಲ್ಲಿ ಬಂದಿದೆ. ಹಿಂದಿನ ದಿನಗಳಲ್ಲಿ ಮಗೆ ಮಳೆಯ ಬಗ್ಗೆ ಒಂದು ಗಾದೆ ಮಾತಿತ್ತು. ಬಂದರೆ ಮಳೆ, ಇಲ್ಲದಿದ್ದರೆ ಹೊಗೆ, ಈ ಗಾದೆ ಮಾತಿನಲ್ಲಿ ರೈತನ ವರ್ಷದ ಬದುಕು ಅಡಗಿತ್ತು ಎಂದು ಅರ್ಥಗರ್ಭಿತವಾಗಿ ತಿಳಿಸಿದರು.
ಹಿಂದಿನ ದಿನಗಳಲ್ಲಿ ಪ್ರತಿಯೊಂದು ಮಳೆಗೂ ರೈತ ಒಂದೊಂದು ಕಾಯಕವನ್ನು ಮಾಡುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಬಂದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ರೈತನಿದ್ದಾನೆ ಎಂದ ಅವರು, ರೈತನ ಸ್ಥಿತಿ ಗಂಭೀರವಾಗಿದೆ. ರೈತನು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಯಾವುದೇ ಸಾಲ ಮನ್ನಾ ಬೇಕಾಗುವುದಿಲ್ಲ ಎಂದರು.
ಜನರಿಗೆ ಹೆಂಡ ಕುಡಿಸಿ, ದೇಶಕ್ಕೆ ಸಾಲದ ಹೊರೆ ಹೊರಿಸಿ, ವಿದೇಶದಲ್ಲಿ ಇರುವವರಿಗೆ ಯಾವುದೇ ಭಯವಿಲ್ಲ. ಆದರೆ ಈ ದೇಶಕ್ಕೆಅನ್ನ ನೀಡಿದ ರೈತ ಇಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಮಾರ್ಮಿಕವಾಗಿ ನುಡಿದ ಅವರು, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಹಾದಿ ಹಿಡಿಯಬಾರದು. ನಿಮ್ಮ ಕಾಯಕದ ಬಗ್ಗೆ ಆತ್ಮಾಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಏಳುಮಲೈ, ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಗತಿಪರ ರೈತ ಮಹಿಳೆ ಆಶಾ ಶೇಷಾದ್ರಿ, ಆಯುಕ್ತ ಮುಲ್ಲೈ ಮುಹಿಲನ್ ಸೇರಿದಂತೆ ಪಾಲಿಕೆಯ ಸದಸ್ಯರುಗಳು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಕೀಳರಿಮೆ ಬಿಡಿ- ಆತ್ಮಾಭಿಮಾನ ಬೆಳೆಸಿಕೊಳ್ಳಿ : ರೈತರಿಗೆ ಬಸವಮರುಳಸಿದ್ಧ ಸ್ವಾಮೀಜಿ ಕರೆ
RELATED ARTICLES