ಶಿವಮೊಗ್ಗ: ನನ್ನ ಮಗನ ಮೇಲಾಣೆ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ರಾಷ್ಟ್ರಭಕ್ತಿ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇಂದು ಶಪಥ ಮಾಡಿದರು.
ಅವರು ಅಪೂರ್ಣಗೊಂಡ ಆಶ್ರಯ ವಸತಿಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರವೇ ಹಂಚಿಕೆಯಾಗುವಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟದ ಜಾಥಾಕ್ಕೆ ಚಾಲನೆ ನೀಡಿದರು.
ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಜಾಥಾ ಆರಂಭವಾಗಿ ನೆಹರು ರಸ್ತೆಯ ಮೂಲಕ ಜಾಥವು ಸೀನಪ್ಪಶೆಟ್ಟಿ ವೃತ್ತವನ್ನು ತಲುಪಿತು. ಅಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಮಾತನಾಡಿದರು.
ಗೋಪಿ ಶೆಟ್ಟಿ ಮತ್ತು ಗೋವಿಂದಾಪುರದಲ್ಲಿ ಸುಮಾರು 9 ವರ್ಷಗಳ ಹಿಂದೆಯೇ ಈ ಆಶ್ರಯ ಯೋಜನೆಯನ್ನು ರೂಪುಗೊಳಿಸಲಾಗಿತ್ತು. ಮೂರು ವರ್ಷಗಳಲ್ಲಿ ಮನೆಯನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರು ಕೂಡ ಇದುವರೆಗೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ ಎಂದರು.
ಪ್ರತಿಭಟನೆಯಲ್ಲಿ ಈ.ವಿಶ್ವಾಸ್, ಎಂ. ಶಂಕರ್, ಸುವರ್ಣ ಶಂಕರ್, ಶಂಕರ್, ಬಾಲು, ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ, ಮೋಹನ್, ನಾಗರಾಜ್, ವಾಗೀಶ್, ಶ್ರೀಕಾಂತ್, ಜಾಧವ್ ಸೇರಿದಂತೆ ಫಲಾನುಭವಿಗಳು ಇದ್ದರು.