ದಾವಣಗೆರೆ: ಅತಿ ಹಿಂದುಳಿದ ಸಮಾಜಗಳಲ್ಲೊಂದಾದ ಮೂಲತಃ ನೇಕಾರಿಕೆ ಕಸುಬು ಹೊಂದಿರುವ ಸ್ವಕುಳಸಾಳಿ ಸಮಾಜದ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಸಭೆಯನ್ನು ಇಂದು (ಜೂ.೯) ಇಲ್ಲಿ ಆಯೋಜನೆಗೊಂಡಿದೆ ಎಂದು ದಾವಣಗೆರೆ ಸಂಘದ ಪ್ರಕಟಣೆ ತಿಳಿಸಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸ್ವಕುಳಸಾಳಿ ಶಿಕ್ಷಣ ಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯೂ ಏರ್ಪಾಡಾಗಿದೆ. ಜೊತೆಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ಸ್ವಕುಳಸಾಳಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವೂ ನಡೆಯಲಿದೆ ಎಂದು ಅದು ಹೇಳಿದೆ.
ಸ್ವಕುಳಸಾಳಿ ಸಮಾಜದ ರಾಜ್ಯಮಟ್ಟದ ಕಾರ್ಯಕ್ರಮವೊಂದು ದಾವಣಗೆರೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಜರುಗಲಿದ್ದು, ಇದರ ಆತಿಥ್ಯವನ್ನು ಸ್ವಕುಳಸಾಳಿ ಸಮಾಜದ ದಾವಣಗೆರೆ ಘಟಕ ವಹಿಸಿಕೊಂಡಿದೆ. ಭಾನುವಾರ ಬೆಳಿಗ್ಗೆ 10.30ಕ್ಕೆ ಶ್ರೀ ವೀರ ಮದಕರಿ ನಾಯಕ ವೃತ್ತ (ಹೊಂಡದ ಸರ್ಕಲ್)ದ ಬಳಿ ಇರುವ ಶ್ರೀ ಜಿಹ್ವೇಶ್ವರ ಧ್ಯಾನ ಮಂದಿರದಲ್ಲಿ ಏರ್ಪಾಡಾಗಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗಳೂ ಆಗಿರುವ ಕರ್ನಾಟಕ ರಾಜ್ಯ ಸ್ವುಕುಳಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ ಎನ್. ಭಂಡಾರೆ ಅವರು ವಹಿಸಲಿದ್ದಾರೆ ಎಂದು ಅದು ತಿಳಿಸಿದೆ.
ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಖಿಲ ಭಾರತ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ರಮೇಶ್ ಚಿಲ್ಲಾಳ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾಜ್ಯದ ವಿವಿಧ ಭಾಗಗಳಿಂದ ಸ್ವಕುಳಸಾಳಿ ಸಮಾಜದ ಹಿರಿಯರು, ರಾಜ್ಯ ಪದಾಧಿಕಾರಿಗಳು, ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಕುಳಸಾಳಿ ಸಮಾಜದ ದಾವಣಗೆರೆ ಘಟಕದ ಅಧ್ಯಕ್ಷ ಡಾ. ಜಿ.ಪಿ. ಮೋಹನ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದೆ ಎಂದು ಪ್ರಕಟಣೆ ಹೇಳಿದೆ.