ಲೇಖನ : ಸೌಮ್ಯ ಗಿರೀಶ್
ಸರಳ ವ್ಯಕ್ತಿತ್ವ ಎಲ್ಲರಿಗೂ ಒಲಿಯುವಂತಹದ್ದಲ್ಲ, ಅದು ರೂಢಿಯಿಂದ ಬರುವಂತಹದ್ದು. ಅತಿಯಾಸೆ ಪಡದೆ ಸಿಕ್ಕ ಸಂತಸದಲ್ಲೇ ಸಂತುಷ್ಟ ಬದುಕನ್ನು ಸದಾ ಸವಿಯುವ ಹುಮ್ಮಸ್ಸಿನ ಈ ನಮ್ಮೂರ ಹುಡುಗಿ
ಶ್ವೇತಾ ಕಿರುತೆರೆಗೆ ಬಂದದ್ದು ಅಚಾನಕ್ಕಾಗಿಯಾದರೂ ಬೆಳೆದು ಗುರುತಿಸಿಕೊಂಡಿರುವುದು ಮಾತ್ರ ಕರ್ನಾಟಕದ ಮನೆಮಗಳಾಗಿ. ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವ, ಬದುಕಿನ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಅರ್ಥೈಸುವ ಈ ಮುದ್ದುಮೊಗದ ಮಲೆನಾಡ ಚೆಲುವೆ ಶ್ವೇತಾರ ಪರಿಚಯ ಇಲ್ಲಿದೆ.
ಶಿವಮೊಗ್ಗದ ಸಿಹಿಮೊಗದ
ನಮ್ಮೂರಿನಲ್ಲಿ ಆಡುತ್ತಾ ಬೆಳೆದ ಹುಡುಗಿ ಶ್ವೇತಾ ಮೇರಿ ಇಮ್ಯಾಕುಲೇಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಡಿವಿಎಸ್‌ನಲ್ಲಿ ದ್ವಿತೀಯ ಪಿಯು ಮುಗಿಸಿದರು. ರಾಜೇಂದ್ರ ಪ್ರಸಾದ್ ಮತ್ತು ಜಯಶ್ರೀ ದಂಪತಿಗಳ ಮುದ್ದುಮಗಳಾದ ಕಾರಣ ಕೇಳಿದ್ದೆಲ್ಲಾ ಸಿಗುತ್ತಿತ್ತಾದರೂ ತಾಯಿ ಶಿಕ್ಷಕಿಯಾದ್ದರಿಂದ ಪ್ರತಿಯೊಂದರ ಮೌಲ್ಯ ವನ್ನೂ ಕಲಿಸಿದರು. ಎಲ್ಲಾ ಸಿಗಬಹುದು ಆದರೆ ನಿನಗೆ ಯಾವುದು ಅವಶ್ಯಕ ಎನ್ನುವುದು ನಿನಗೆ ತಿಳಿದಿರಬೇಕು ಎನ್ನುವ ಅವರ ಅಮ್ಮನ ನುಡಿಗಳು, ಹಾಗೆಯೇ ಕಾಲಕಾಲಕ್ಕೆ ತಿದ್ದುತ್ತಾ, ತೀಡುತ್ತಾ ಒಳ್ಳೆಯ ಗುಣಗಳನ್ನು ತಿಳಿಸುತ್ತಾ ಬೆಳೆಸಿದ ರೀತಿ ಶ್ವೇತಾರನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿತು ಎನ್ನುವುದರಲ್ಲಿ ಅನುಮಾನವಿಲ್ಲ.
ಓದಿಗಾಗಿ ಬೆಂಗಳೂರಿನತ್ತ
ಶಿವಮೊಗ್ಗದಲ್ಲಿ ಒಂದು ವರ್ಷದ ಬಿಸಿಎ ಓದುವ ವೇಳೆಗೆ ಇದು ನನಗಲ್ಲ ಎನಿಸಿದ ಶ್ವೇತಾ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆಯಲು ಪಯಣ ಬೆಳೆಸಿದ್ದು ಬೆಂಗಳೂರಿನತ್ತ. ಬೆಂಗಳೂರಿನ ಆರ್‌ವಿ ಕಾಲೇಜ್‌ನಿಂದ ಅರ್ಕಿಟೆಕ್ಟ್ ಆಗಿ ಹೊರಬಂದ ಶ್ವೇತಾ ಅದೇ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಆದರೆ ಅನಿರೀಕ್ಷಿತವಾಗಿ ಇವರಿಗೆ ಒಲಿದದ್ದು ಕಿರುತೆರೆಯ ನಂಟು. ಅಲ್ಲಿಂದ ಶ್ವೇತಾ ಹಿಂತಿರುಗಿ ನೋಡಬೇಕೆಂದರೂ ಬಿಡುತ್ತಿಲ್ಲ ಬಣ್ಣದ ಬದುಕು.
ಪ್ರೇಕ್ಷಕರ ಮನೆಮಗಳಾಗಿಸಿದ ಶ್ರೀರಸ್ತು ಶುಭಮಸ್ತು
ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಶ್ವೇತಾರ ಒಂದು ಸರಳ ಭಾವಚಿತ್ರ ಅಚಾನಕ್ಕಾಗಿ ಕನ್ನಡ ಕಿರುತೆರೆಯ ಶ್ರೇಯೋತ್ತುಂಗದಲ್ಲಿರುವ ನಿರ್ದೇಶಕಿ-ನಿರ್ಮಾಪಕಿ ಶೃತಿ ನಾಯ್ಡುರ ಕಣ್ಣಿಗೆ ಬಿತ್ತು. ಅಷ್ಟು ಹೊತ್ತಿಗಾಗಲೇ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಾಯಕಿಗಾಗಿ ೩೦೦೦ ಜನರನ್ನು ಆಡಿಷನ್ ಮಾಡಿ ಕೈಬಿಡಲಾಗಿತ್ತು. ಆದರೆ ಈ ಭಾವಚಿತ್ರ ಮೂಡಿಸಿದ ಭರವಸೆ ಆ ಯಾವ ಆಡಿಷನ್ ಕೂಡ ನೀಡಿರಲಿಲ್ಲ. ಶ್ವೇತಾರನ್ನು ಸಂಪರ್ಕಿಸಿದ ಶೃತಿ ನಾಯ್ಡು ಅಂದು ಒಲ್ಲೆ ಎಂದಿದ್ದ ಶ್ವೇತಾರ ಮನವೊಲಿಸಿ, ನಾನಿದ್ದೇನೆ ಎಂಬ ಭರವಸೆ ನೀಡಿ ತಮ್ಮ ಧಾರಾವಾಹಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಸುಮಾರು ೭೦೦ ಕಂತುಗಳಲ್ಲಿ ಬಂದ ಧಾರಾವಾಹಿಯಲ್ಲಿನ ಶ್ವೇತಾರ ನಟನೆ ಎಷ್ಟು ನೈಜವಾಗಿತ್ತೆಂದರೆ ಅವರು ಪ್ರತಿಯೊಬ್ಬರ ಮನೆಮಾತಾದರು.
ನನ್ನನ್ನು ಅರ್ಥ ಮಾಡಿಕೊಂಡು ಸದಾ ಬೆನ್ನೆಲುಬಾಗಿ ಸದಾ ಒಬ್ಬ ಮಹಿಳಾ ನಿರ್ಮಾಪಕಿ-ನಿರ್ದೇಶಕಿ ನನ್ನ ಪಕ್ಕದಲ್ಲೇ ಇದ್ದಾರೆ ಎಂಬ ನಂಬಿಕೆಯೇ ನನ್ನ ಈ ಯಶಸ್ಸಿಗೆ ಕಾರಣ. ಎರಡು ವರ್ಷ ಒಂದು ಸೀರಿಯಲ್ ನಾಯಕಿಯಾಗಿ ಕೆಲಸ ಮಾಡುವುದು ಸುಲಭವಲ್ಲ. ಖಾಸಗಿ ಜೀವನ, ಒಂದಷ್ಟು ಖಾಸಗಿ ಕೆಲಸಗಳಿಗೂ ಸಮಯ ಸಿಗದಷ್ಟು ನಿರತವಾಗಿ ಕೆಲಸ ಮಾಡಬೇಕು. ಆದರೆ ಆ ಕಷ್ಟವನ್ನು ಮರೆಸಿದ್ದು ಶ್ರೀರಸ್ತು ಶುಭಮಸ್ತು ತಂಡದ ಆತ್ಮೀಯತೆ ಮತ್ತು ಕಾರ್ಯ ವೈಖರಿ. ಒಂದು ಕುಟುಂಬದಂತೆಯೇ ಇತ್ತು ಸೆಟ್‌ನ ವಾತಾವರಣ. ಶ್ರೀರಸ್ತು ಶುಭಮಸ್ತು ಆದ ನಂತರ ನನ್ನನ್ನು ಜನ ಗುರುತಿಸಲು ಪ್ರಾರಂಭಿಸಿದರು. ನನ್ನ ಸೊಸೆ ನಿನ್ನ ಹಾಗೇ ಇರಬೇಕಮ್ಮ ಅಂದೋರು ಎಷ್ಟೋ ಜನ. ಪಾತ್ರವೇ ನಾವು ಎಂದು ಜನ ಪರಿಗಣಿಸುವುದಕ್ಕಿಂತ ಬೇರೆ ಖುಷಿ ಯಾವುದಿದೆ ಎನ್ನುತ್ತಲೇ ತಮ್ಮ ಮೊದಲ ಸಕ್ಸಸ್ ಸ್ಟೋರಿ ಬಿಚ್ಚಿಟ್ಟರು ಶ್ವೇತಾ. ಒಮ್ಮೆ ನನ್ನ ಕೈಲಿ ಇದು ಸಾಧ್ಯವೇ ಎಂದಿದ್ದ ಶ್ವೇತಾ ಅದೇ ಪಾತ್ರದ ಅಭಿನಯದಿಂದಾಗಿ ಜ಼ೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ನಟಿ ಪ್ರಶಸ್ತಿಗೆ ಪಾತ್ರರಾದರು. ಇದು ಅವರ ಶ್ರದ್ಧೆಗೆ ಹಿಡಿದ ಕೈಗನ್ನಡಿ.
ನೃತ್ಯ ಕಲಿಕೆಗೆ ನಾಂದಿ ಡ್ಯಾನ್ಸಿಂಗ್ ಸ್ಟಾರ್
ಪ್ರತಿಷ್ಠಿತ ರಿಯಾಲಿಟಿ ಶೋನಿಂದ ಅಹ್ವಾನ ಬಂದಾಗಲು ರಿಯಾಲಿಟಿ ಶೋಗಳಿಂದ ದೂರ ಉಳಿಯಬೇಕು ಎಂದು ನಿರ್ಧರಿಸಿದ್ದವರು ಶ್ವೇತಾ. ಧಾರಾವಾಹಿಯಿಂದಾಗಿ ನನಗೊಂದು ಇಮೇಜ್ ಬಂದಿದೆ, ಅದನ್ನು ಹಾಗೇ ಉಳಿಸಿಕೊಳ್ಳಲು ಇಷ್ಟಪಡುತ್ತೇನೆ. ರಿಯಾಲಿಟಿ ಶೋಗಳಲ್ಲಿನ ನಮ್ಮ ನಡುವಳಿಕೆ ಎಷ್ಟೇ ಸರಿ ಇದ್ದರೂ ಜನರು ಅವರ ಗ್ರಹಿಕೆಗೆ ನಮ್ಮನ್ನು ತೂಗುತ್ತಾರೆ ಎಂಬ ಭಾವನೆ ನನ್ನದು ಎನ್ನುವ ಶ್ವೇತಾರ ಮಾತು ಬಹುತೇಕರು ಒಪ್ಪುವಂತಹದ್ದೇ ಆಗಿದೆ. ಹಾಗಾದರೆ ಡ್ಯಾನ್ಸಿಂಗ್ ಸ್ಟಾರ್ ಒಪ್ಪಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಏನಾದರೂ ಹೊಸತು ಕಲಿಯುವುದು ಎಂದರೆ ನಾನು ಸದಾ ಸಿದ್ಧ. ಕಲಿಯುವುದಕ್ಕೆ ಸಿಗುತ್ತದೆ ಎಂದರೆ ನಾನು ಆ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ, ಹಾಗಾಗಿ ಡ್ಯಾನ್ಸಿಂಗ್ ಸ್ಟಾರ್ ಒಪ್ಪಿಕೊಂಡೆ. ನನಗೊಬ್ಬರು ಕೊರಿಯೋಗ್ರಾಫರ್ ಗುರುವಾಗಿ ಸಿಕ್ತಾರೆ, ಹಲವು ಬಗೆಯ ನೃತ್ಯ, ಪರಿಣಿತಿ ಅಲ್ಲದಿದ್ದರೂ ಅದರ ಬಗ್ಗೆ ಜ್ಞಾನ ಮತ್ತು ಆ ಮಜಲಿನ ನಾಲ್ಕು ಹೆಜ್ಜೆ ಕಲಿತರೆ ಅದಕ್ಕಿಂತ ದೊಡ್ಡದೇನಿದೆ, ಮಯೂರಿಯವರಂತಹ ನಾಟ್ಯ ಪ್ರವೀಣರು ಮತ್ತು ರವಿಚಂದ್ರನ್‌ರಂತಹ ಕಲಾವಿದರ ಪೋಷಣೆ ಕೂಡ ಸಿಗುವುದರಿಂದ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಶೋ ಮಾಡಿದೆ ಎನ್ನುತ್ತಾರೆ ಶ್ವೇತಾ.
ಬಹುನಿರೀಕ್ಷೆಯ ರಾಧಾ ರಮಣ
ಇನ್ನೇನು ತೆರೆಯ ಮೇಲೆ ಬಂದು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿರುವ ನೀಲಾ ಪ್ರೊಡಕ್ಷನ್ಸ್ ನಿರ್ಮಾಣದ, ಶಿವು ಅವರ ನಿರ್ದೇಶನದ ಧಾರಾವಾಹಿ ರಾಧಾ ರಮಣ. ಇದರಲ್ಲಿ ಶ್ವೇತಾ ನಾಯಕಿಯ ಪಾತ್ರವಹಿಸುತ್ತಿದ್ದು, ಈಗಾಗಲೇ ಟ್ರೇಲರ್ ಮತ್ತು ಟೀಸರ್‌ಗಳಲ್ಲಿನ ಶ್ವೇತಾರ ಪಾತ್ರ ತುಂಬಾ ಕುತೂಹಲ ಮೂಡಿಸಿದೆ. ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಶ್ವೇತಾ. ನನಗೆ ತುಂಬಾ ಹತ್ತಿರವಾದ ಪಾತ್ರ, ಯಾಕೆ ಅಂದ್ರೆ ನನ್ನ ಅಮ್ಮ ಕೂಡ ಟೀಚರ್, ಹಾಗಾಗಿ ಅದೇನೋ ಒಂಥರಾ ಖುಷಿ ಅಂತಾರೆ ಶ್ವೇತಾ.
ಆತ್ಮತೃಪ್ತಿಗಾಗಿ ಆ ಮಕ್ಕಳ ಜೊತೆ
ಒಂದು ಎನ್‌ಜಿಓದಲ್ಲಿ ಸಕ್ರಿಯವಾಗಿರುವ ಶ್ವೇತಾ ಬಿಡುವು ಸಿಕ್ಕರೆ ಸಾಕು. ಅದನ್ನು ಅನಾಥ ಮಕ್ಕಳ ಜೊತೆ, ಅವಶ್ಯಕತೆ ಇರುವ ಮಕ್ಕಳ ಜೊತೆ ಕಳೆಯುತ್ತಾರೆ. ಒಂದು ಜನ್ಮದಿನದಂದು ಮಾತ್ರ ಅವರನ್ನು ನೆನಪಿಸಿಕೊಂಡು, ಅಲ್ಲಿಗೆ ಹೋಗಿ ಸಂಭ್ರಮಿಸಿದರೆ ಸಾಲದು ಎಂದು ನಂಬಿರುವ ಶ್ವೇತಾ ಆ ಮಕ್ಕಳಿಗೆ ಪಾಠ ಹೇಳಿಕೊಡುವ ಮತ್ತು ಅವರ ಅವಶ್ಯಕತೆಗಳಿಗಿಷ್ಟು ಸ್ಪಂದಿಸುವ ಕೆಲಸ ಮಾಡುತ್ತಿದ್ದು, ನಾನು ಒಮ್ಮೆ ೩೦೦೦ದ ಉಡುಗೆಯೊಂದನ್ನು ತೆಗೆದುಕೊಂಡೆ ಎಂದು ನನ್ನಮ್ಮನಿಗೆ ಫೋನ್‌ನಲ್ಲಿ ಹೇಳಿದಾಗ ನನ್ನ ಅಮ್ಮ ನಾನು ನನ್ನ ಸರ್ಕಾರಿ ಶಾಲೆಯ ೪೦ ಮಕ್ಕಳಿಗೆ ಚಡ್ಡಿ ಹೊಲಿಸ್ತಿದ್ದೆ ಆ ದುಡ್ಡಲ್ಲಿ ಅಂದಾಗ ನನಗೆ, ಹೌದಲ್ಲಾ ಎನಿಸಿತು ಎನ್ನುವ ಮಾತುಗಳು ಜೀವನದ ಎಷ್ಟು ದೊಡ್ಡ ಮೌಲ್ಯವನ್ನು ತಿಳಿಸುತ್ತದೆ. ನಟನೆ ನನ್ನ ಹೊಟ್ಟೆಪಾಡಿಗಾಗಿ ಆದರೆ ಮಕ್ಕಳ ಜೊತೆ ನಾನು ಕಳೆಯುವ ಕಾಲ ನನ್ನ ಆತ್ಮತೃಪ್ತಿಗಾಗಿ. ಒಂದು ರೀತಿಯಲ್ಲಿ ನನ್ನ ಸ್ವಾರ್ಥ ಕೂಡ. ಏಕೆಂದರೆ ಬಿಡುವಿಲ್ಲದ ಜೀವನದಲ್ಲಿ ಬಿಡುವಿನ ಸಮಯ ಕಳೆಯಲು, ಒತ್ತಡ ದೂರ ಮಾಡಿಕೊಳ್ಳಲು ಹುಡುಗಿಯರು ಶಾಪಿಂಗ್ ಹೋಗ್ತಾರೆ ಆದ್ರೆ ನಾನು ಈ ಮಕ್ಕಳ ಜೊತೆ ಇದ್ದರೆ ನನ್ನ ಎಲ್ಲಾ ಒತ್ತಡಗಳೂ ಮಂಗಮಾಯ ಅಂತಾನೆ ಸರಳವಾಗಿ ತಮ್ಮ ಸಮಾಜಮುಖಿ ಚಿಂತನೆಯನ್ನು ತಿಳಿಸಿದರು ಶ್ವೇತಾ.
ಸಂಗಾತಿ – ಸಂಪ್ರೀತಿ – ಸಂತೃಪ್ತಿ
ಆರ್‌ಜೆ ಪ್ರ.. ದೀ… ಪ.. ಎಂದರೆ ಸಾಕು ಬೆಂಗಳೂರಿನ ಎಫ್‌ಎಂ ರೇಡಿಯೋ ಕೇಳುಗರ ಕಿವಿ ಚುರುಕಾಗುತ್ತದೆ. ಹೌದು, ಆರ್‌ಜೆ ಪ್ರದೀಪ ಶ್ವೇತಾರ ಜೀವನ ಸಂಗಾತಿ. ಜೀವದ ಗೆಳೆಯ ಜೀವನ ಸಂಗಾತಿಯಾದದ್ದೇ ಒಂದು ವಿಶೇಷ. ಮೊದಲ ಬಾರಿಗೆ ವಧುಪರೀಕ್ಷೆಗೆ ಶ್ವೇತಾರನ್ನು ತಮ್ಮ ಕಾರಲ್ಲೇ ಒಯ್ದಿದ್ದ ಗೆಳೆಯ ಪ್ರದೀಪ ಮುಂದೊಂದು ದಿನ ಶ್ವೇತಾ ತಂದೆ, ತಾಯಿ ಮತ್ತು ತಮ್ಮನನ್ನು ಭೇಟಿಯಾಗಿ ನಾವು ಐದು ವರ್ಷದಿಂದ ಒಳ್ಳೆಯ ಸ್ನೇಹಿತರು. ಅವಳನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆ, ಮದುವೆ ಮಾಡಿಕೊಡಿ ಎಂದು ಹೇಳುತ್ತಲೇ ಎಲ್ಲರನ್ನೂ ಒಪ್ಪಿಸಿಯಾಗಿತ್ತು. ಖುದ್ದು ಶ್ವೇತಾರಿಗೆ ಇದೊಂದು ಧಿಡೀರ್ ಸುದ್ದಿಯಾದದ್ದೂ ಹೌದು. ಆದರೆ ಇಂದು ಆ ಸಂಗಾತಿಯ ಸಂಪ್ರೀತಿ ಪ್ರತಿಯೊಂದು ಹೆಜ್ಜೆಯಲ್ಲೂ ಇರುವುದು ಶ್ವೇತಾರ ಯಶಸ್ಸಿನ ಗುಟ್ಟು ಎಂದರೆ ಅತಿಶಯೋಕ್ತಿಯಲ್ಲ. ನನಗೆ ತುಂಬಾ ಖುಷಿ ಕೊಡೋದು ಅಂದ್ರೆ ಪ್ರದೀಪನ ಅಭಿಮಾನಿಗಳನ್ನು ನೋಡಿದಾಗ. ಎಷ್ಟೋ ಕಣ್ಣಿಲ್ಲದವರು ಇವನ ಶೋ ಕೇಳಿ, ಅಭಿಮಾನಿಗಳಾಗಿ, ಸ್ಟೂಡಿಯೋಗೆ ಬಂದು ಪ್ರದೀಪನನ್ನ ಮುಟ್ಟಿ, ಹೋ ಇವರೇನಾ ಅವರು ಎಂದು ಪಡುವ ಸಂತಸ, ಅದಕ್ಕೇನು ಬೆಲೆ ಕಟ್ಟಲು ಸಾಧ್ಯ. ಈ ರೀತಿ ಜನರ ಮನಸ್ಸು ಗೆಲ್ಲುವುದು ಕಷ್ಟ ಎನ್ನುತ್ತಲೇ ತನ್ನ ಪತಿಯ ಸಾಧನೆಯನ್ನು ಹೊಗಳುತ್ತಾರೆ ಶ್ವೇತಾ. ಬಂದ ಅವಕಾಶವನ್ನು ಬಿಡಬೇಡ, ಮನಸ್ಸಿಗೆ ಒಪ್ಪದ್ದನ್ನು ಮಾಡಬೇಡ ಎನ್ನುತ್ತಲೇ ತಮ್ಮ ಬೆಂಬಲವನ್ನು, ಸ್ಫೂರ್ತಿಯನ್ನು ಸೂಚಿಸುವ ಪ್ರದೀಪ, ನಾನು ಹೆಂಡ್ತಿ, ನೀನು ಗಂಡ, ನೀನು ದುಡಿ, ನಾನು ಮನೆ ನೊಡ್ಕೋತೀನಿ, ಇವೆಲ್ಲಾ ನಮ್ಮಲ್ಲಿ ಇಲ್ಲ, ಎಲ್ಲವನ್ನೂ ಸಮ ಸಮ ಹಂಚಿಕೊಳ್ತೀವಿ, ಮೊದಲು ಯಾರು ಏಳ್ತೀವೋ ಅವರು ಬೆಡ್‌ಕಾಫಿ ರೆಡಿ ಮಾಡ್ತೀವಿ, ಯಾರಿಗೆ ಬಿಡುವಿರತ್ತೋ ಅವರು ಮನೆಗೆಲಸ ಮಾಡ್ತೀವಿ, ಗಂಡ-ಹೆಂಡತಿ ಅನ್ನೋ ಹಮ್ಮು-ಬಿಮ್ಮು ನಮ್ಮಲ್ಲಿಲ್ಲ ಎನ್ನುವ ಶ್ವೇತಾ, ಒಟ್ಟಾರೆ ಸಂತೃಪ್ತ ಬದುಕಿಗೆ ಇನ್ನೇನು ಬೇಕು. ಅರಿತು ನಡೆವ ಜೀವಗಳು ಬೆಸೆದು, ಸಮತೋಲನ ಕಾಯ್ದುಕೊಂಡು, ಸಾಮರಸ್ಯದಿಂದಿರುವ ಇವರ ಜೀವನ ಹೀಗೆಯೇ ಸಂತಸಮಯವಾಗಿರಲಿ. ಶ್ವೇತಾರ ಬಣ್ಣದ ಬದುಕಿನ ಹಾದಿ ಮತ್ತಷ್ಟು ಬಣ್ಣಗಳಿಂದ ಕೂಡಿ ಮತ್ತಷ್ಟು ಮನೆ-ಮನಗಳನ್ನು ಗೆಲ್ಲಲಿ ಎನ್ನುವುದೇ ನಮ್ಮ ಆಶಯ.