ಹಾಸನ: ಹೊಯ್ಸಳ ನಗರ ಬಡಾವಣೆಯಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದ ಬೆನ್ನಲ್ಲೇ, ಮೃತಪಟ್ಟಿರುವವರಲ್ಲಿ ಒಬ್ಬಾತ ಇನ್ನೊಬ್ಬನನ್ನು ಕೊಂದು ತಾನೂ ಶೂಟ್ ಮಾಡಿಕೊಂಡು ಸತ್ತಿರುವ ಶಂಕೆ ವ್ಯಕ್ತವಾಗಿದೆ.
ಮೃತಪಟ್ಟವರನ್ನು ಶರಾಫತ್ ಅಲಿ (52) ಮತ್ತು ಆಸೀಫ್ (46) ಎಂದು ಗುರುತಿಸಲಾಗಿದೆ. ಮೂಲತಃ ಇಬ್ಬರು ಸ್ನೇಹಿತರಾಗಿದ್ದರು. ಆಸೀಫ್ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಮತ್ತು ಶುಂಠಿ ವ್ಯಾಪಾರಿ ಎಂದು ಹೇಳಲಾಗಿದೆ. ದೆಹಲಿ ಮೂಲದ ಶರಾಫತ್ ಹಾಸನದ ಆಡುವಳ್ಳಿ ಬಡವಾಣೆಯಲ್ಲಿ ವಾಸವಾಗಿದ್ದರು.
ಇಬ್ಬರು ಹಾಸನದ ಕುಟುಂಬಗಳ ಆಳಿಯಂದಿರಾಗಿದ್ದು ವ್ಯವಹಾರದಲ್ಲಿ ಪಾಲುದಾರರು ಎನ್ನಲಾಗಿದೆ.
ಇಂದು ಮಧ್ಯಾಹ್ನ ಕೆ.ಎ.09 ಎಂಬಿ 003868 ನೋಂದಣಿ ಸಂಖ್ಯೆಯ ಟೆರಾನೋ ಕಾರಿನಲ್ಲಿ ಇಬ್ಬರೂ ಹೊಯ್ಸಳ ನಗರಕ್ಕೆ ಬಂದಿದ್ದರು. ಇವರನ್ನು ಅಪರಿಚಿತರು ಗುಂಡಿಕ್ಕಿ ಕೊಂದಿರಬಹುದೇ? ಅಥವಾ ಒಬ್ಬ ಮತ್ತೊಬ್ಬನನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರಬಹುದೇ? ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತ್ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಾಕ್ಷಿ ಕಲೆ ಹಾಕುತ್ತಿದ್ದಾರೆ.