ಶಿವಮೊಗ್ಗ: ವೃತ್ತಿ ಜತೆಯಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ ಎಂದು ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಭಾರಧ್ವಾಜ್ ಹೇಳಿದರು.
ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ಸೈಕಲ್ ಕ್ಲಬ್, ಮೂರ್ತಿ ಸೈಕಲ್ ಆಂಡ್ ಫಿಟ್ನೆಸ್ ವತಿಯಿಂದ ಹರ್ಕ್ಯೂಲಸ್ ಕಂಪನಿ ಸಹಯೋಗದಲ್ಲಿ ಆಯೋಜಿಸಿದ್ದ ಸೈಕಲ್ ಸವಾರಿ ಜಾಗೃತಿ ಮತ್ತು ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸೈಕಲ್ ಕ್ಲಬ್ ವತಿಯಿಂದ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದು, 50ಕ್ಕೂ ಹೆಚ್ಚು ಸದಸ್ಯರು ಗಿನ್ನೆಸ್ ದಾಖಲೆ ಮಾಡಿದ ಗೌರವ ನಮ್ಮ ಸಂಸ್ಥೆಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೈಕಲ್ ಕ್ಲಬ್ ಹಿರಿಯ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಸೈಕಲ್ ತುಳಿಯುವ್ಯದರಿಂದ ಸದಾ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಸದಾ ಲವಲವಿಕೆಯಿಂದ ಇರುವ ಜತೆಯಲ್ಲಿ ಬುದ್ಧಿಶಕ್ತಿ ಚುರುಕಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹಿರೋಗಳು. ರಕ್ತದ ಕೊರತೆ ಹೆಚ್ಚಿರುವುದನ್ನು ನಾವು ಕಾಣುತ್ತೇವೆ. ರಕ್ತದಾನ ಮಾಡಲು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಗಳು ಮುಂದಾಗಬೇಕು. ಇತರರನ್ನು ರಕ್ತದಾನ ಮಾಡಲು ಪ್ರೇರೆಪಿಸಬೇಕು ಎಂದು ಹೇಳಿದರು.
ಹರ್ಕ್ಯೂಲಸ್ ಕಂಪನಿಯ ಅಜಿತ್ ಚವ್ಹಾಣ್, ತೇಜಸ್ವಿ, ದಿನಕರ್ ವಸಂತ್, ಅಭಿಲಾಶ್, ರಾಜೇಶ್, ಪ್ರಮೋದ್, ದರ್ಶನ್, ಶ್ರೀಧರಚಂದ್ರ ಕೇಸರಿ, ನಾಗರಾಜ್, ಅಕ್ಷಯ್, ಕಾರ್ಯದರ್ಶಿ ಗೀರೀಶ್ ಕಾಮತ್, ಸಂಜಯ್, ಡಾ. ನಂದಕಿಶೋರ್, ಧರಣೇಂದ್ರ ದಿನಕರ್, ರಜನಿಕಾಂತ್ ಉಪಸ್ಥಿತರಿದ್ದರು.