ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯು ಬಿರುಸುಗೊಂಡಿದೆ. ಜಿಲ್ಲೆಯ ಜೀವನಾಡಿ ನದಿಗಳಾದ ತುಂಗಾ, ವರದಾ, ಕುಮುದ್ವತಿ, ಶರಾವತಿ, ಭದ್ರ ನದಿಗಳು ಮೈತುಂಬಿ ಹರಿಯುತ್ತಿವೆ.
ಭಾರೀ ಮಳೆಯಿಂದಾಗಿ ಜಿಲ್ಲೆಯ ಲಿಂಗನಮಕ್ಕಿ, ಗಾಜನೂರಿನ ತುಂಗಾ, ಲಕ್ಕವಳ್ಳಿಯ ಭದ್ರಾ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ.
ರಾಜ್ಯದ 8 ಜಿಲ್ಲೆಗಳಿಗೆ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಯು ಒಳಗೊಂಡಿದೆ. ಶಿವಮೊಗ್ಗದಲ್ಲಿ ತುಂಗಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಗಾಜನೂರಿನ ತುಂಗಾ ಜಲಾಶಯದ 21 ಕ್ರಸ್ಟ್ ಗೇಟ್ ಗಳನ್ನು ತೆರೆದು ಇಂದು ತುಂಗಾ ನದಿಗೆ ಹರಿಸಲಾಗುತ್ತಿದೆ.
ಕಳೆದ ವಾರ ಬಿಡುವು ಪಡೆದಿದ್ದ ಮಳೆಯು ಈ ವಾರದ ಆರಂಭದಿಂದಲೂ ದಿನಕ್ಕೆ ಬಿರುಸುಗೊಂಡಿದೆ. ನಿನ್ನೆ ರಾತ್ರಿಯಿಂದ ಭಾರೀ ಮಳೆ ಮತ್ತು ಗಾಳಿಯಿಂದ ಹಲವೆಡೆ ಕೆಲ ಅನಾಹುತಗಳು ಸಂಭವಿಸಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 39.44 ಮಿ.ಮೀ ಮಳೆಯಾಗಿದೆ. ಈ ಪೈಕಿ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ.
ಜು.14ರ ಬೆಳಗ್ಗೆ 8.30ರಿಂದ ಜು.15ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗದಲ್ಲಿ 20 ಮಿ.ಮೀ, ಭದ್ರಾವತಿಯಲ್ಲಿ 12.90 ಮಿ.ಮೀ, ತೀರ್ಥಹಳ್ಳಿಯಲ್ಲಿ 56.20 ಮಿ.ಮೀ, ಸಾಗರದಲ್ಲಿ 71.20 ಮಿ.ಮೀ, ಶಿಕಾರಿಪುರ 24.90 ಮಿ.ಮೀ, ಸೊರಬದಲ್ಲಿ 33 ಮಿ.ಮೀ, ಹೊಸನಗರದಲ್ಲಿ 57.20 ಮಿ.ಮೀ ಮಳೆಯಾಗಿದೆ.
ಹೊಸನಗರದ ಮಾಣಿ ಜಲಾಶಯ ವ್ಯಪ್ತಿಯಲ್ಲಿ 102 ಮಿ.ಮೀ, ಯಡೂರಿನಲ್ಲಿ 94 ಮಿ.ಮೀ, ಹುಲಿಕಲ್‌ನಲ್ಲಿ 132 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 135 ಮಿ.ಮೀ, ಚಕ್ರಾ 140 ಮಿ.ಮೀ, ಸಾವೇಹಕ್ಲು 125 ಮಿ.ಮಿ ಮಳೆಯಾಗಿದೆ.
……………………………………………………..
ಬಿರುಸುಗೊಂಡ ಮಳೆ – ಶಿವಮೊಗ್ಗಕ್ಕೆ ರೆಡ್ ಅಲರ್ಟ್ ; ಮಲೆನಾಡಿನಲ್ಲಿ ಅಬ್ಬರ, ಕೆಲವು ಕಡೆ ಇನ್ನು ಬರ
ಶಿವಮೊಗ್ಗ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಭಾನುವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದೆ. ಜಿಲ್ಲೆಯಲ್ಲಿನ ಜೀವ ನದಿಗಳು ಮತ್ತೆ ಜೀವ ಕಳೆ ತುಂಬಿಕೊಂಡಿವೆ. ಕಳೆದ 24 ಗಂಟೆಗಳಲ್ಲಿ ಮಲೆನಾಡಿನ ಬಹು ಭಾಗದಲ್ಲಿ ಪುನರ್ವಸು ಮಳೆ ಜೋರಾಗಿಯೇ ಸುರಿಯುತ್ತಿದೆ. ಇದರಿಂದ ಜಿಲ್ಲೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ.
ಗಾಜನೂರಿನಲ್ಲಿರುವ ತುಂಗ ಜಲಾಶಯಕ್ಕೆ 33 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೆ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ನ ಬೆಕ್ಕಿನ ಕಲ್ಮಠದ ಹಿಂಭಾಗದಲ್ಲಿರುವ ಮಂಟಪ ಮುಳುಗಲು ಸೋಮವಾರ ಸಂಜೆಗೆ ಒಂದು ಅಡಿ ಬಾಕಿ ಇತ್ತು. ನದಿ ಮೈದುಂಬಿ ಹರಿಯುತ್ತಿತ್ತು. ನದಿ ಪಾತ್ರದ ಕೆಲವು ಬಡವಾಣೆಗಳಿಗೆ ನೀರು ನುಗ್ಗುವ ಅಪಾಯ ಕಂಡು ಬಂದಿತ್ತು.
ಭದ್ರ ಜಲಾಶಯಕ್ಕೆ 16 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.ಇದರಿಂದ ಸೋಮವಾರ ಬೆಳಗಿನ ಹೊತ್ತಿಗೆ ಭದ್ರಾ ಜಲಾಶಯದ ಮಟ್ಟ 139.8 ಅಡಿಯಿಂದ 141.3 ಅಡಿಗೆ ಏರಿಕೆಯಾಗಿತ್ತು. ಅಂದರೆ ಸುಮಾರು ಒಂದೂವರೆ ಅಡಿಯಷ್ಟು ನೀರು 24 ಗಂಟೆಯಲ್ಲಿ ಸಂಗ್ರಹವಾಗಿತ್ತು. ಕಳೆದ ವರ್ಷವೂ ಭದ್ರಜಲಾಶಯದ ನೀರಿನ ಮಟ್ಟ 141.3 ಅಡಿಯಷ್ಟೇ ಇತ್ತು. ಅದರಂತೆ ಲಿಂಗನಮಕ್ಕಿಯಲ್ಲಿ ಜಲಾಶಯಕ್ಕೆ 45,115 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
1819 ಅಡಿ ನೀರು ಸಂಗ್ರಹದ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದ ನಿರಿನ ಮಟ್ಟ ಭಾನುವಾರಕ್ಕೆ 1775.70 ಅಡಿ ನೀರು ಸಂಗ್ರಹವಿತ್ತು. ಇಂದು 1778.15 ಅಡಿ ಏರಿಕೆಯಾಗಿದೆ. ಅಂದರೆ 24 ಗಂಟೆಯಲ್ಲಿ 2.45 ಅಡಿ ಏರಿಕೆಯಾಗಿದೆ. ಕಳೆದ ವರ್ಷ ಜಲಾಶಯದ ನೀರಿನ ಮಟ್ಟ 1755.30 ಅಡಿ ನೀರು ಸಂಗ್ರಹವಾಗಿತ್ತು. ಮಲೆನಾಡಿನ ಬಹುತೇಕ ಸುರಿಯುತ್ತಿರುವ ಮಳೆಗೆ ನದಿಗಳು, ಜಲಾಶಯಗಳು ಭರ್ತಿಯಾಗುತ್ತಿರುವುದರ ನಡುವೆಯೇ, ಜಿಲ್ಲೆಯ ಅನೇಕ ಕಡೆಗಳಲ್ಲಿ ಈಗಲೂ ಅರೆ ಬರೆ ಮಳೆಯ ಸನ್ನಿವೇಶ ಕಂಡು ಬರುತ್ತಿದೆ.
ಮಲೆನಾಡು ಹೊರತು ಪಡಿಸಿದರೆ ಅರೆ ಮಲೆನಾಡಿನ ಭಾಗದಲ್ಲಿ ಬರುವ ಸೊರಬ, ಶಿಕಾರಿಪುರ ಭಾಗದಲ್ಲಿ ಮಳೆಯ ಪ್ರಮಾಣ ಈಗಲೂ ಶೇ. ೨೦ ರಷ್ಟು ಮಾತ್ರವೇ ಇದೆ. ರೈತರು ಭತ್ತದ ನಾಟಿಗೆ ಕಾಯುತ್ತಿದ್ದಾರೆ. ಮಳೆ ದೊಡ್ಡ ಪ್ರಮಾಣದಲ್ಲಿ ಸುರಿಯದ ಕಾರಣ ಈಗಲೂ ಕೆರೆ ಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿಲ್ಲ. ಕೆರೆ ಕಟ್ಟೆಗಳು ಭರ್ತಿಯಾಗಿದ್ದರೆ ಭತ್ತದ ನಾಟಿ ಕಾರ್ಯವನ್ನು ರೈತರು ಶುರು ಮಾಡಲಿದ್ದರೂ, ಆ ಮಟ್ಟದ ಮಳೆ ಬಾರದ ಕಾರಣ, ರೈತರಿಗೆ ಮತ್ತೆ ಬರದ ಆತಂಕ ಎದುರಾಗಿದೆ.
ಈಗ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗೆ ಸಾಲದು. ಮಳೆ ದೊಡ್ಡ ಪ್ರಮಾಣದಲ್ಲಿಯೇ ಸುರಿಯಬೇಕಿದೆ. ಕೆರೆ ಕಟ್ಟೆಗಳು ತುಂಬಿಕೊಂಡರೆ ಭತ್ತದ ನಾಟಿಗೆ ಅನುಕೂಲ ಆಗಲಿದೆ. ಆದರೆ ಈಗಿನ ಮಳೆಗೆ ಎಲ್ಲಿಯೂ ನೀರಿಲ್ಲ. ಸುಮ್ಮನೆ ತುಂತುರು ಮಳೆ ಸುರಿಯುತ್ತಿದೆ. ಹಾಗಾಗಿ ರೈತರಿಗೆ ಆತಂಕ ತಪ್ಪಿಲ್ಲ. ಈಗಲೂ ಕಾಲ ಮಿಂಚಿಲ್ಲ. ಮಳೆ ರಾಯ ಕಣ್ಣು ತೆರೆದರೆ ಕೆರೆ ಕಟ್ಟೆಗಳೇನು ತುಂಬುವುದು ದೊಡ್ಡ ಮಾತಲ್ಲ. ಪ್ರಕೃತಿ ಕಣ್ಣು ತೆರೆಬೇಕಷ್ಟೇʼ ಎನ್ನುವ ತಮ್ಮೊಳಗಿನ ಆತಂಕವನ್ನು ಶಿಕಾರಿಪುರದ ಪುನೇದ ಹಳ್ಳಿಯ ರೈತರೊಬ್ಬರು ಹೇಳಿಕೊಂಡರು.
ಸದ್ಯಕ್ಕೀಗ ಸುರಿಯುತ್ತಿರುವ ಮಳೆಯೂ ಜೋಳ ಮತ್ತು ಶುಂಠಿಗೆ ಹದ ಮಳೆಯಾಗಿದೆ. ಹೆಚ್ಚೇನು ಬಾರದ ತುಂತುರು ಮಳೆಗೆ ಜಿಲ್ಲೆಯ ಬಹುಭಾಗದಲ್ಲಿನ ರೈತರ ಹೊಲದಲ್ಲಿರುವ ಜೋಳ ನಳ ನಳಿಸುತ್ತಿದೆ. ಭವಿಷ್ಯಕ್ಕೆ ಅವು ಕೂಡ ಉತ್ತಮ ಮಳೆಯನ್ನೇ ಬೇಡುತ್ತಿವೆ. ಹಾಗೆಯೇ ಭತ್ತದ ನಾಟಿಕೆ ಮಳೆ ಅವಶ್ಯಕವಾಗಿಯೇ ಬೇಕಿದೆ. ಅಂತಹ ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ರೈತಾಪಿ ಜನರಿದ್ದಾರೆ. ಈಮಧ್ಯೆ ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಮೂರು ಜಿಲ್ಲೆಗಳಿಗೂ ಇಂದು ಹಾಗೂ ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆನಂತರದ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡಿಗೆ ನಾಳೆ ( ಜುಲೈ 16) ಆರೆಂಜ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸತತ ಮಳೆಯಿಂದ ಹಾರನಹಳ್ಳಿಯ ನವೀದ್ ಎಂಬುವರ ಮನೆ ಕುಸಿದಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.