ಲೇಖನ : ಸೌಮ್ಯ ಗಿರೀಶ್
ಅನುಭವವೇ ನನ್ನ ಗುರುಕುಲ ರಕ್ಷಿತ್ ತೀರ್ಥಹಳ್ಳಿ
ಯುವಕರು ಚಿತ್ರರಂಗದತ್ತ ಆಕರ್ಷಿತರಾಗುವುದು ಸಾಮಾನ್ಯ. ಆದರೆ ಎಲ್ಲರಿಗೂ ಹೀರೋ ಆಗಬೇಕು ಅನ್ನೋ ಹುಚ್ಚೇ ಹೆಚ್ಚು ಆದರೆ ಇಲ್ಲೊಬ್ಬ ಮಲೆನಾಡ ಮಗ, ಆ ಯುವಕನ ಆಶಯ ತೆರೆಯ ಮೇಲೆ ನಟಿಸವುದಲ್ಲ, ಬದಲಾಗಿ ನಟಿಸು ವವರನ್ನು ನಿರ್ದೇಶಿಸುವುದು. ಅವರೇ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ. ಭರವಸೆ ಯಿಂದ ಭರವಸೆ ಮೂಡಿಸಿರುವ ಈ ಯುವ ಸಾಧಕನ ಪರಿಚಯ ಇಲ್ಲಿದೆ.
ಸಾಹಿತ್ಯ ಕೃಷಿ ಆರಂಭವಾಗಿದ್ದು ಬಾಲ್ಯದಲ್ಲೇ…
ತಂದೆ ಚಂದ್ರಪ್ಪನವರ ಊರು ತೀರ್ಥಹಳ್ಳಿಯ ಮೇಗರವಳ್ಳಿಯ ಜಾವಗಲ್, ತಾಯಿ ಶಾಲಿನಿ ಯವರು ಆರಗದ ಕೆರೆಗದ್ದೆಯವರು. ಈ ಮೇಗರ ವಳ್ಳಿಯ ಬಾಲಕ ಮಲೆನಾಡ ಮಡಿಲಲ್ಲಿ ಆಡುತ್ತಾ ಬೆಳೆದರೂ ತಂದೆಯವರ ಕಾಯಕದ ನಿಮಿತ್ತ ಇವರ ಶಾಲಾ ಶಿಕ್ಷಣ ಆಗಿದ್ದು ಮಾತ್ರ ದಾವಣ ಗೆರೆ, ರಾಣೆಬೆನ್ನೂರು ಹಾಗೂ ಹರಿಹರದಲ್ಲಿ. ಮಲೆನಾಡಿನವರಿಗೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧ ಎನ್ನುವುದಕ್ಕೆ ಈ ಹುಡುಗ ಕೂಡ ಹೊರತಾಗಿರಲಿಲ್ಲ. ಬಾಲ್ಯದಿಂದಲೇ ಪ್ರಾರಂಭ ವಾಗಿತ್ತು ಇವರ ಸಾಹಿತ್ಯ ಕೃಷಿ.
ಮರಳಿ ಮಲೆನಾಡಿಗೆ
ಶಾಲಾ ಶಿಕ್ಷಣ ಹೊರಗಾದರೂ ಕಾಲೇಜು ಶಿಕ್ಷಣದ ವೇಳೆಗೆ ಇವರು ಬಂದದ್ದು ಮಾತ್ರ ಮರಳಿ ಗೂಡಿಗೆ. ತೀರ್ಥಹಳ್ಳಿಯಲ್ಲಿ ಡಿಪ್ಲೊಮಾ ಶಿಕ್ಷಣ ಪ್ರಾರಂಭಿಸಿದರು. ಶಿಕ್ಷಣಕ್ಕಾಗಿ ಓದುತ್ತಿದ್ದರೇ ಹೊರತು ಚಿತ್ತವೆಲ್ಲಾ ಬಾಲ್ಯದಲ್ಲಿ ಚಿಗುರೊಡೆದಿದ್ದ ಸಾಹಿತ್ಯದತ್ತವೇ ಇತ್ತು. ಇವರ ಸಾಹಿತ್ಯಾಸಕ್ತಿ ಇಷ್ಟು ಹೊತ್ತಿಗಾಗಲೇ ಹೆಮ್ಮರವಾಗಿ ಬೆಳೆದು ಕಥೆ, ಕವನ, ಚುಟುಕು ರೂಪ ಪಡೆದಿತ್ತು. ಆದರೆ ಇಲ್ಲಿ ಆರಂಭ ವಾದ ಹೊಸ ಕನಸು ಎಂದರೆ ತಮ್ಮ ಬರವಣಿಗೆಯ ಮೆರುಗನ್ನು ಬಣ್ಣದನಾಡಿನಲ್ಲಿ ಪಸರಿಸಬೇಕು ಎಂಬುದು.
ಕನಸ ಹೊತ್ತು ಬೆಂಗಳೂರಿನತ್ತ
ಶಿಕ್ಷಣ ಪೂರೈಸಿದ ಕೂqಲೇ ಕೆಲಸ ಅರಸಿ ಬಂದದ್ದು ಬೆಂಗಳೂರಿಗೆ. ಕೆಲಸಕ್ಕಿಂತ ಹೆಚ್ಚು ಕಾಡಿದ್ದು ಮಾತ್ರ ಸಿನಿ ದನಿಯಾದ ಕನಸು. ಅದನ್ನು ನನಸಾಗಿಸುವ ಪ್ರಯತ್ನ ಮಾತ್ರ ನಿಲ್ಲಿಸಲಿಲ್ಲ ರಕ್ಷಿತ್. ಕಥೆ, ಹಾಡು, ಕವನಗಳನ್ನು ಕೈಯಲ್ಲಿ ಹಿಡಿದು ಕೈಕಟ್ಟಿ ಕೂರದೆ ಅವಕಾಶಗಳ ಕದ ತಟ್ಟಲು ಹೊರಟರು. ಸಿನಿಮಾ, ಧಾರಾವಾಹಿ ಹೀಗೆ ಕೆಲ ವೊಂದು ಅವಕಾಶಗಳು ದೊರೆಯಲು ಪ್ರಾರಂಭಿ ಸಿತಾದರೂ ಗುರುತಿಸಿಕೊಳ್ಳಲಾಗದೆ ಉಳಿದರು. ಇದಕ್ಕೆ ಕಾರಣ ಸಾಮರ್ಥ್ಯವಿರಲಿಲ್ಲ ಎಂಬು ದಲ್ಲ, ಇವರ ಸಾಮರ್ಥ್ಯವನ್ನು ಬೇರೆಯವರು ಬಂಡವಾಳ ಮಾಡಿ ಕೊಂಡಿದ್ದು. “ಯಾವ ಮಟ್ಟಕ್ಕೆ ಎಂದರೆ ಕೊನೆಗೆ ಅವ ಕಾಶಗಳು ಕೈಯಲ್ಲಿತ್ತು ಆದರೆ ಎಲ್ಲವೂ ಹಿಡನ್ ರೈಟರ್ ಆಗಿ.” ಅನ್ನುವ ಅವರ ಮಾತುಗಳೇ ಹೇಳು ತ್ತಿತ್ತು ಪ್ರಯತ್ನ ಇತ್ತು ಆದರೆ ಕೀರ್ತಿ ಬೇರೆ ಯವರಿಗೆ ಸಲ್ಲುತ್ತಿತ್ತು ಎನ್ನುವುದು.
ಇನ್ನೆಂದೂ ಲೇಖನಿ ಹಿಡಿಯುವುದಿಲ್ಲ…!!
ಗಾಂಧಿನಗರದಲ್ಲಿ ದಿನಕ್ಕೆ ನೂರಾರು ಅವಕಾಶ ಕಾಂಕ್ಷಿಗಳು ನಿರ್ಮಾಪಕರ, ನಿರ್ದೇಶಕರ ಬಳಿ ತಮ್ಮ ಕಥೆ ಹಿಡಿದು ಹೋಗುತ್ತಾರೆ. ಆದರೆ ಇದ ರಲ್ಲಿ ಹುಟ್ಟುವ ಎಷ್ಟೋ ಕಥೆಗಳು ಹೇಳಿದವರಿಗಿಂತ ಕೇಳಿದವರ ಸ್ವಂತ ಆಗುವುದೇ ಹೆಚ್ಚು. ಇದಕ್ಕೆ ರಕ್ಷಿತ್ ಕೂಡ ಹೊರತಲ್ಲ. ೨೦೧೦ರಲ್ಲಿ ಬಹಳ ಆಸೆಯಿಂದ ಹೇಳಿದ ಕಥೆ, “ನಿರ್ಮಾಪಕರು ಸಿಕ್ಕ ಕೂಡಲೇ ಸಿನಿಮಾ ಮಾಡೋಣ” ಅನ್ನೋ ಮಾತು ಕೇಳಿದ್ದಷ್ಟೆ ಮತ್ತೆ ಆ ಕಥೆ ಕೇಳಿದ ವ್ಯಕ್ತಿ ಕಂಡದ್ದು ನಿರ್ದೇಶಕನಾಗಿ ತೆರೆಯ ಮೇಲೆ. ೨೦೧೧ರಲ್ಲಿ ರಕ್ಷಿತ್‌ರ ಅದೇ ಕಥೆ, ದೃಶದಿಂದ ದೃಶ್ಯದವರೆಗೆ ಯಥಾವತ್ ಸಿನಿಮಾ ಆಗಿ ಹೋಗಿತ್ತು. ಅಂದಿನ ಆ ಬೇಸರ ಅವರು “ನಾನು ಇನ್ನೆಂದೂ ಲೇಖನಿ ಹಿಡಿಯುವುದಿಲ್ಲ” ಎಂಬ ನಿರ್ಧಾರ ಮಾಡಿಯೇ ಬಿಟ್ಟರು.
ಪ್ರತಿಜ್ಞೆಯನ್ನೂ ಹಿಮ್ಮೆಟ್ಟಿಸಿದ ಅಭಿಲಾಷೆ
ಬೇಸರದಲ್ಲಿ ಮಾಡಿದ್ದು ಪ್ರತಿಜ್ಞೆ ಆದರೆ ಪ್ರಜ್ಞಾ ಪೂರ್ವಕವಾಗಿ ಯೋಚಿ ಸಿದಾಗ ಬೇರೆಯವರ ಮೇಲೆ ಅವಲಂಬನೆ ಯಾದರೆ ತಾನೆ ಈ ಸಂಕಷ್ಟ, ಇನ್ನೇನು ಮಾಡಿದರೂ ಸ್ವಂತವಾಗೇ ಮಾಡುತ್ತೇನೆ ಎಂದು ನಿರ್ಧರಿಸಿದರು. ಒಂದು ವರ್ಷದಿಂದ ಹಿಡಿಯದಿದ್ದ ಲೇಖನಿ ಮತ್ತೆ ಶಾಹಿಯಿಂದ ತುಂಬಿತು.
‘ಸ್ವಪ್ರಯತ್ನದ ಕಿರುಹೆಜ್ಜೆ ’ ಕಿರುಚಿತ್ರಗಳು
“ಕೆಲಸ ಕಲಿತು ಸ್ವತಂತ್ರ ನಿರ್ದೇಶಕನಾಗ ಬೇಕು, ಏನು ಮಾಡಬೇಕು ಎಂದು ಕೇಳಿದವರಲ್ಲಿ ಕೆಲವರು ತರಬೇತಿ ಅಂದ್ರು, ಕೆಲವರು ಕೆಲಸ ಮಾಡಿ ಕಲಿ ಅಂದ್ರು” ಅನ್ನುತ್ತಲೇ ಅನುಭವ ಹೇಳಿದ ಅವರು ಆರಿಸಿಕೊಂಡದ್ದು ಸ್ವಂತ ಅನುಭವದ ಹಾದಿಯನ್ನು. ಅನುಭವ ಕೊಡುವ ಕಲಿಕೆಗಿಂತ ಉತ್ತಮ ಕಲಿಕೆ ಯಾವುದಿದೆ. ಹಾಗಾಗೆ ಇವರು ಪ್ರಾರಂಭಿಸಿದ್ದು ಕಿರುಚಿತ್ರಗಳಿಂದ. ಕಿರುಚಿತ್ರಗಳು ಇಂದು ಸಾಮಾಜಿಕ ಜಾಲತಾಣ ಗಳಿಂದಾಗಿ ಬಹಳ ಪ್ರಸಿದ್ಧಿ ಹೊಂದಿದೆ ಜೊತೆಗೆ ಬೆಳೆವವರಿಗೆ ಉತ್ತಮ ವೇದಿಕೆಯಾಗಿದೆ. ಈ ವೇದಿಕೆಯನ್ನು ಸದುಪಯೋಗ ಮಾಡಿಕೊಂಡ ರಕ್ಷಿತ್ ಒಟ್ಟು ೬ ಕಿರುಚಿತ್ರಗಳನ್ನು ನಿರ್ದೇಶಿಸಿದರು. ಇದಕ್ಕೆ ಇವರ ಜೊತೆಯಾದವರು ಇವರ ಗೆಳೆಯರು ಎನ್ನುವುದನ್ನು ಅವರು ಮರೆಯಲಿಲ್ಲ. ೬ ಗೆಳೆಯರು ಒಟ್ಟು ಗೂಡಿ ಮಾಡಿದ ಈ ಆರು ಪ್ರಯತ್ನಗಳೂ ಇವರಿಗೆ ಒಂದೊಂದು ಹೊಸ ಪಾಠವನ್ನು ಕಲಿಸುತ್ತಾ ಹೋಯಿತು. ಒಂದು ಚಿತ್ರದಲ್ಲಿ ಮಾಡಿದ ತಪ್ಪಿನಿಂದ ಮತ್ತೊಂದು ಚಿತ್ರ ಉತ್ತಮಗೊಳ್ಳುತ್ತಾ ಹೋಯಿತು. ಅನುರಾಗ, ನನ್ನ ಮೊದಲ ಅನುರಾಗ, ಟ್ವೆಂಟಿ ಪ್ಲಸ್, ಅದೇ ಪ್ರೀತಿ ಬೇರೆ ರೀತಿ, ಅಗಳು ಮತ್ತು ಐ ಇವರ ಕಿರುಚಿತ್ರಗಳು.
ಕನಸನ್ನು ನನಸಾಗಿಸಿದ ‘ಹೊಂಬಣ್ಣ’
ಅಂತೂ ನಿರ್ದೇಶಕನಾಗಬೇಕೆಂಬ ಕನಸು ನನಸಾಗುವ ಸಮಯ ಬಂದೇ ಬಿಟ್ಟಿತು. ಅದೇ ಇವರ ಕನಸಿನ ಚಿತ್ರ ‘ಹೊಂಬಣ್ಣ’. ಸ್ವತಂತ್ರ ನಿರ್ದೇ ಶಕನಾಗಿ ಇದು ಇವರ ಮೊದಲ ಚಿತ್ರ. ಇದರಲ್ಲಿ ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ ಎಲ್ಲವೂ ಇವರದ್ದೇ. ರಾಮಕೃಷ್ಣ ನಿಗಡೆ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಿವಮೊಗ್ಗದವರೇ ಆದ ಸುಬ್ಬು ತಲಬಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧನು ಗೌಡ, ಶಿವಮೊಗ್ಗದ ಮತ್ತೊಂದು ಬೆಡಗಿ ಈಟಿವಿಯ ನಿರೂಪಕಿ ಶರ್ಮಿತಾ ಶೆಟ್ಟಿ ಕೂಡ ಇದ್ದಾರೆ. ಇಷ್ಟೇ ಅಲ್ಲದೆ ದತ್ತಣ್ಣ, ಸುಚೀಂದ್ರ ಪ್ರಸಾದ್, ನೀನಾಸಂ ಅಶ್ವತ್ಥ್, ಮೈಸೂರು ಗೋಪಿ, ಅಂಬುಜಾಕ್ಷಿ, ಹೀಗೆ ದೊಡ್ಡ ತಾರಾ ಬಳಗವೇ ಇದೆ.
ಅರಣ್ಯರೋದನಕ್ಕೊಂದು ದರ್ಪಣ ‘ಹೊಂಬಣ್ಣ’
ಇವರ ಹಿಂದಿನ ಕಿರುಚಿತ್ರಗಳ ಟೈಟಲ್ ಕೇಳಿದರೆ ಇವರು ಮತ್ತೊಂದು ಲವ್ ಸ್ಟೋರಿ ಯನ್ನು ಹೆಣೆದಿರಬಹುದು ಎನಿಸುತ್ತದೆ. ಇಂದಿನ ಟ್ರೆಂಡ್ ಎಂದರೆ ಲವ್, ಅಂಡರ್‌ವರ್ಲ್ಡ್, ಲ್ಯಾಂಡ್ ಮಾಫಿಯಾ ಹೀಗೆ ಕಮರ್ಷಿಯಲ್ ಸಬ್ಜೆಕ್ಟ್ ಮಾಡೋರೆ ಹೆಚ್ಚು. ಮಲೆನಾಡ ಮಡಿಲಲ್ಲಿ ರೈತರ ಅಳಲು, ಕಾಡಿನ ಸಿರಿ ಕಂಡು ಬೆಳೆದ ಇವರು ಇಂದು ಅಲ್ಲಿ ಕೇಳಿ ಬರುತ್ತಿರುವ ರೈತರ ಅರಣ್ಯರೋದನವನ್ನು ಮನಮುಟ್ಟುವಂತೆ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ.
ಇವರು ಆಯ್ಕೆಮಾಡಿಕೊಂಡಿರುವ ವಿಷಯ ಅರಣ್ಯ ಒತ್ತುವರಿ ಮತ್ತು ಬಗರ್‌ಹುಕುಂ ನದ್ದಾಗಿದೆ. ‘ಹುಟ್ತಾನೆ ಭೂಮಿಗ್ಯಾರು ಬೇಲಿ ಹಾಕಂಡ್ ಹುಟ್ಟಲ್ಲ’ ಅಂತಾನೆ ‘ಹೊಂಬಣ್ಣ’ ಸಿನಿಮಾ ಮಾಡಿದ್ದಾರೆ ರಕ್ಷಿತ್. ಸಾಮಾಜಿಕ ವಿಷಯ ಇರಬಹುದು ಆದರೆ ಇದರಲ್ಲಿ ಒಂದು ಸವಿಯಾದ ಪ್ರೇಮಕಥೆ, ನವಿರಾದ ಹಾಸ್ಯ, ರೋಮಾಂಚಕಾರಿ ದೃಶ್ಯಗಳು, ರೈತರ ಸಂಕಷ್ಟಗಳು, ಬಗರ್ ಹುಕುಂನ ಸಾಧಕ- ಭಾದಕಗಳು ಎಲ್ಲವನ್ನೂ ತುಂಬಾ ನವಿರಾಗಿ ಹೆಣೆದಿದ್ದಾರೆ ರಕ್ಷಿತ್ ತೀರ್ಥಹಳ್ಳಿ. ಇಂಥ ದ್ದೊಂದು ಪ್ರಯತ್ನ ಗೆದ್ದರೆ ಅದು ಮಲೆನಾಡಿನ ಹುಡುಗನಿಗೆ ಸಲ್ಲುವ ಗೆಲುವಲ್ಲ ಮಲೆನಾಡಿನ ರೈತರ ಜೊತೆಗೆ ಮೈಸೂರು, ಮಡಿಕೇರಿ, ಹೀಗೆ ಹತ್ತು ಹಲವು ಜಿಲ್ಲೆಗಳಲ್ಲಿ ಅರಣ್ಯರೋದನ ಮಾಡುತ್ತಿರುವ ರೈತರ ಕೂಗಿಗೊಂದು ದನಿಯಾದ ಸಾರ್ಥಕತೆ ಸಿಗುತ್ತದೆ. ಇವರ ಈ ಪ್ರಯತ್ನ ಗೆಲ್ಲಲಿ , ‘ಹೊಂಬಣ್ಣ’ ಗೆದ್ದು ಇವರ ಪ್ರಗತಿಯ ಹಾದಿ ಹೊಂಬಣ್ಣವಾಗಲಿ ಎನ್ನುವುದೇ ನಮ್ಮ ಆಶಯ.