Saturday, December 14, 2024
Google search engine
Homeಅಂಕಣಗಳುನಮ್ಮೂರ ಸಾಧಕರುಅಕ್ಷರ ವ್ಯಾಮೋಹಿ ನಂದೀಶ್

ಅಕ್ಷರ ವ್ಯಾಮೋಹಿ ನಂದೀಶ್

ಅನ್ನ ಕೊಟ್ಟ ಅಕ್ಷರಕ್ಕೆ ಋಣಿ ಎಂದೇ ಸದಾ ಹೇಳುವ ನಿಜಕ್ಕೂ ಅಕ್ಷರ ವ್ಯಾಮೋಹಿ. ಇವರ ಈ ವ್ಯಾಮೋಹ ಇಂದು ಎಷ್ಟೋ ಓದುಗರಿಗೆ, ನವ್ಯಕಾವ್ಯ ರಸಿಕರಿಗೆ ರಸದೌತಣವನ್ನೇ ಉಣಬಡಿಸುತ್ತದೆ ಎಂದರೆ ತಪ್ಪಿಲ್ಲ. ಸಣ್ಣ ಕವನಗಳನ್ನು ಗೀಚುವುದರಿಂದ ಪ್ರಾರಂಭವಾದ ಇವರ ಅಕ್ಷರಯಾನ ಇವರನ್ನು ಇಂದು ಒಬ್ಬ

Nandish
Nandish

ಯಶಸ್ವಿ ಸಿನಿಮಾ ಪತ್ರಕರ್ತನಾಗಿ, ಮೌನಮೋಹಿ ಎಂಬ ಕವನ ಸಂಕಲನದ ರೂವಾರಿಯಾಗಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಾವ್ಯಕನ್ನಿಕೆಗಾಗಿ ಇವರು ಬರೆಯುವ ತುಂಟು ಕವನಗಳ ಅಭಿಮಾನಿ ಬಳಗವೇ ಇದೆ. ಇವರ ಈ ಕವನಗಳು ಇವರನ್ನು ಇಂದು ಚಿತ್ರ ಸಾಹಿತಿಯನ್ನಾಗಿ ಮಾಡಿದೆ. ಸದಾ ಹಸನ್ಮುಖಿ, ಕೆಲವೊಮ್ಮೆ ಅಂತರ್ಮುಖಿ, ಸ್ವಲ್ಪ ಎಮೋಷನಲ್ ಆದರೂ ಪ್ರಾಕ್ಟಿಕಲ್ ಆಗಿರುವ ಟಿ.ಜಿ.ನಂದೀಶ್‌ರ ಕಿರು ಪರಿಚಯ ಇಲ್ಲಿದೆ.

ಮಾಳೂರು ನನ್ನೂರು
ಟಿ.ಜಿ.ಗಂಗಾಧರಯ್ಯ ಮತ್ತು ಆಶಾ ದಂಪತಿಗಳ ಚೊಚ್ಚಲ ಮಗ ನಂದೀಶ್. ತೀರ್ಥಹಳ್ಳಿಯ ಮಾಳೂರಿನ ಒಬ್ಬ ಕೃಷಿಕ ಮತ್ತು ವ್ಯಾಪಾರಿಯ ಮಗನಾಗಿ ಹುಟ್ಟಿದ ನಂದೀಶ್ ಮಲೆನಾಡ ಮಡಿಲಲ್ಲಿ ಆಡುತ್ತ, ಓದುತ್ತಾ ಬೆಳೆದು ಎಂಟನೇ ತರಗತಿಯಿಂದ ತೀರ್ಥಹಳ್ಳಿಯಲ್ಲಿ ಶಿಕ್ಷಣ ಮುಂದುವರೆಸಿದರು. ಇಂದು ಅಕ್ಷರವೇ ಜೀವಾಳ ಆದರೆ ಅಂದು ವಿಜ್ಞಾನ ಎಂಬ ಕಬ್ಬಿಣದ ಕಡಲೆ ಅರಗಿಸಿಕೊಳ್ಳಲಾಗದೆ ದ್ವಿತೀಯ ಪಿ.ಯು.ಸಿಯಲ್ಲಿ ಡುಮುಕಿ ಹೊಡೆದಾಗ ಜನ ಇವನೊಬ್ಬ ನಿಷ್ಪ್ರಯೋಜಕ ಎಂದು ಮೂದಳಿಸಿದರು. ಹಾಗೆಂದವರಿಗೆ ಒಂದು ನಮನ ಏಕೆಂದರೆ ಅಂದು ಅವರು ಹುಟ್ಟಿಸಿದ ಕಿಚ್ಚೇ ಇಂದಿನ ನಂದೀಶ್ ಸಾಧನೆಗೆ ನಾಂದಿಯಾಗಿದ್ದು. ಛಲ ತೊಟ್ಟ ನಂದೀಶ್ ಶ್ರೀ ಪದ್ಮಕ್ಕಿ ಮಹದೇಶ್‌ರವರ ಸಹಾಯದಿಂದ ಬಿಬಿಎಂ ಪದವಿ ಪಡೆದರು. ಅಪ್ಪನ ಹೆಗಲೇರಿ ಆಡುತ್ತಿದ್ದ ಹುಡುಗ ಹೆಗಲಿನಿಂದ ಕೆಳಗೆ ಇಳಿಯುವ ವೇಳೆಗಾಗಲೇ ಅಪ್ಪನ ಹೆಗಲು ಮರೆಯಾಗಿತ್ತು, ನಿನ್ನ ಪ್ರೀತಿಯ ವಾತ್ಸಲ್ಯದ ಸವಿ ಪೂರ್ತಿಯಾಗಿ ಸವಿಯುವ ಮುನ್ನವೇ ನಿನ್ನ ನನ್ನಿಂದ ಕಸಿದುಕೊಂಡ ಬಹ್ಮನಿಗೆ ನನ್ನ ಶಾಪವಿದೆ ಎನ್ನುವ ನಂದೀಶ್‌ರ ಸಾಲುಗಳೇ ಸಾಕು ಅದನ್ನು ವಿವರಿಸಲು. ಹಿರಿಯ ಮಗನಾಗಿ ಜವಾಬ್ದಾರಿ ಎನ್ನುವುದು ಇವರ ಹೆಗಲೇರಿತ್ತು. ಮುದ್ದಿನ ತಂಗಿ ಲಿಖಿತಾಳನ್ನು ಸಂತೋಷ್‌ರ ಜೊತೆ ಧಾರೆ ಎರೆಯುವವರೆಗಿನ ತಮ್ಮ ಜವಾಬ್ದಾರಿಗಳನ್ನೆಲ್ಲಾ ಚಾಚೂ ತಪ್ಪದೆ ನಿಭಾಯಿಸಿರುವ ನಂದೀಶ್‌ರಿಗೆ ಬಿಡುವು ಸಿಕ್ಕಾಗ ಅಮ್ಮನ ಕೈತುತ್ತು, ತಂಗಿ-ಭಾವನೊಂದಿಗಿಷ್ಟು ಏಳು-ಬೀಳುಗಳ ಚರ್ಚೆ, ಮುದ್ದಿನ ಸೊಸೆ ಜಾನು ಜೊತೆ ಮಗುವಾಗಿ ಬೆರೆತು ಆಡುವುದು, ಇವರದೊಂದು ಪುಟ್ಟ ಪ್ರೀತಿಯ ಪ್ರಪಂಚ.

ಮೌನಮೋಹಿಯಿಂದ ಚಿತ್ತಾರದವರೆಗೆ
ಇವರಲ್ಲಿನ ಕವಿಯನ್ನು ಗುರುತಿಸಿದ್ದು ಇವರ ಕನ್ನಡ ಮೇಷ್ಟ್ರು ಶ್ರೀ ಅರುಣ್ ಕುಮಾರ್, ನೀರೆರೆದು ಪೋಷಿಸಿದವರು ಗೆಳೆಯ ಮಧು. ಸಣ್ಣ ಸಣ್ಣ ಹಾಳೆ, ಸಿಕ್ಕ ಸಿಕ್ಕ ಪುಸ್ತಕಗಳಲ್ಲಿ ಮೂಡಿದ್ದ ಇವರ ಪ್ರೇಮಕಾವ್ಯಗಳು ಅದೆಷ್ಟು ಸೊಗಸಾಗಿದ್ದವೆಂದರೆ ಅದು ಮೌನಮೋಹಿ ಎಂಬ ಕವನ ಸಂಕಲನವಾಗಿ ಪ್ರಕಟವಾಯಿತು. ಮೌನವಾಗಿಯೇ ಆಕೆಯನ್ನು ಮೋಹಿಸಿದ ಕ್ಷಣಗಳ ಸೊಗಸಾದ ಚಿತ್ರಣ ಪ್ರತಿಯೊಂದು ಸಾಲಿನಲ್ಲೂ ಇದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಗೀvಸಾಹಿತಿಗಳಾದ ಕವಿರಾಜ್ ಮತ್ತು ವಿ.ನಾಗೇಂದ್ರ ಪ್ರಸಾದ್‌ರಿಂದ ಬಿಡುಗಡೆಗೊಂಡಿತ್ತು ಮೌನಮೋಹಿ. ನನ್ನ ಗೆಳೆಯ ಮಂಜು ದೊಡ್ಡಮನಿ ನನಗೆ ದೊಡ್ಡ ಆದರ್ಶ, ನನ್ನ ಮೌನಮೋಹಿ ಮತ್ತು ಅವರ ಖಾಲಿ ಪುಟದ ಕವನ ಪುಸ್ತಕ ಒಟ್ಟಿಗೆ ಬಿಡುಗಡೆ ಆಯ್ತು. ಇದಕ್ಕೆಲ್ಲಾ ಕಾರಣ ಗಣೇಶ್ ಕೋದೂರು ಅನ್ನುವ ಮಾತುಗಳಲ್ಲೇ ಅವರು ಬೆಳೆದು ಬಂದ ಹಾದಿಯಲ್ಲಿ ಜೊತೆಯಾಗಿ ನಿಂತ ಯಾರನ್ನೂ ಮರೆಯಬಾರದು ಎಂಬ ಭಾವವಿತ್ತು. ಈ ಕವನ ಸಂಕಲನದ ಯಶಸ್ಸು ಇವರನ್ನು ಮತ್ತಷ್ಟು ಕಾವ್ಯಗಳನ್ನು ಬರೆಯುವಂತೆ ಮಾಡಿತು. ಸಮಾಜಿಕ ಜಾಲತಾಣದಲ್ಲಿನ ಇವರ ಬರಹದ ಶೈಲಿ ಇವರನ್ನು ಚಿತ್ತಾರ ಸಿನಿ ಮಾಸಿಕದವೆರೆಗೆ ಕರೆತಂದಿತು.

ಸಿನಿಮಾಸಿಕದ ಉಪಸಂಪಾದಕನಾಗಿ
ಕನ್ನಡದ ಅತ್ಯುತ್ತಮ ಸಿನಿ ಮಾಸಿಕ ಚಿತ್ತಾರಕ್ಕೆ ಒಬ್ಬ ಬರಹಗಾರನಾಗಿ ಅಡಿಯಿಟ್ಟ ನಂದೀಶ್ ಇಂದು ಪತ್ರಿಕೆಯ ಉಪಸಂಪಾದಕನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಿನಿಮಾ ರಂಗದ ಎಲ್ಲಾ ದಿಗ್ಗಜರು, ನಾಯಕ-ನಾಯಕಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಚಿತ್ರಸಾಹಿತಿಗಳು ಹೀಗೆ ಎಲ್ಲರ ಸಂದರ್ಶನ ಮಾಡುತ್ತಾ, ಅದನ್ನು ಅಕ್ಷರ ರೂಪದಲ್ಲಿ ಪ್ರಕಟಿಸುತ್ತಾ, ಸಿನಿಮಾಗಳ ಆಗು ಹೋಗುಗಳ ಬಗ್ಗೆ ಬರೆಯುತ್ತಾ ತಮ್ಮದೇ ಛಾಪು ಮೂಡಿಸಿದ್ದಾರೆ ನಂದೀಶ್. ಚಿತ್ತಾರದ ನಂದೀಶ್ ಎನ್ನುವ ಮಟ್ಟಕ್ಕೆ ಇಂದು ಇವರು ಪ್ರಚಲಿತರಾಗಿದ್ದಾರೆ. ನನಗೆ ಒಂದು ಐಡೆಂಟಿಟಿ ತಂದು ಕೊಟ್ಟ ಪತ್ರಿಕೆ ಇದು. ಚಿತ್ತಾರಕ್ಕೆ ನಾನೊಬ್ಬನಿದ್ದೇನೆ ಎಂದು ಪರಿಚಯಿಸಿದ್ದು ನಿರ್ದೇಶಕ ಅರಸು ಅಂತಾರೆಯವರು, ಪತ್ರಿಕೆಗೆ ದಾರಿ ತೋರಿದ ವಸಂತ್‌ರಿಗೆ, ಕೆಲಸ ಕೊಟ್ಟ ಚಿತ್ತಾರದ ಮಾಲೀಕರಾದ ಕೆ.ಶಿವಕುಮಾರ್‌ರವರಿಗೆ, ಪತ್ರಿಕೋದ್ಯಮದ ಕೆಲಸ ಹೇಳಿಕೊಟ್ಟ ನಿಮಗೆ ಮತ್ತು ಪ್ರತಿಹಂತದಲ್ಲೂ ಜೊತೆಗಿರುವ ಅನಿಲ್ ಮತ್ತು ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ಸಲ್ಲಬೇಕು ಈ ಮೂರು ವರ್ಷದ ಪಯಣದ ಯಶಸ್ಸು ಅಂತಾನೆ ಎಲ್ಲರಿಗೂ ತಮ್ಮ ವಂದನೆ ಸಲ್ಲಿಸಿದರು ನಂದೀಶ್.

ಯುವ ಸಾಧಕ – ೨೦೧೫
ಪತ್ರಿಕೋದ್ಯಮದಲ್ಲಿನ ಈ ಯುವಕನ ಸಾಧನೆಯನ್ನು ಗುರುತಿಸಿದ ಆವಿ ಸಂಸ್ಥೆ ೨೦೧೫ನೇ ಸಾಲಿನಲ್ಲಿ ಯುವ ಸಾಧಕ -೨೦೧೫ ಎಂಬ ಪುರಸ್ಕಾರವಿತ್ತ್ತು ಗೌರವಿಸಿತು. ಸಾಧನೆಯ ಹಾದಿ ಈಗಷ್ಟೇ ಪ್ರಾರಂಭವಾಗಿದೆ ಎನ್ನುವುದು ನಂದೀಶ್‌ರ ಮಾತು.

ಸಾಮಾಜಿಕ ಜಾಲತಾಣದ ಪ್ರಶ್ನೆ – ಯಾರು ಆ ಕಾವ್ಯಕನ್ನಿಕೆ?
ಒಂದು ದಿನದಲ್ಲಿ ಹತ್ತಾರು ತುಂಟ ಸಾಲುಗಳು, ರಸಮಯ ಕಾವ್ಯಗಳು, ಚುಟುಕುಗಳು, ಎಲ್ಲವೂ ಅವಳಿಗಾಗಿ, ಆದರೆ ಓದಿ ಆನಂದಿಸುವವರು ಸಾವಿರಾರು ಮಂದಿ. ಒಮ್ಮೆ ಮುದ್ದು, ಒಮ್ಮೆ ಮುನಿಸು, ಒಮ್ಮೆ ಸರಸ, ಹೀಗೆ ಹತ್ತು ಹಲವು ಭಾವನೆಗಳ ಗುಚ್ಛವನ್ನೇ ಬಿಚ್ಚಿಡುತ್ತದೆ ಇವರ ಫೇಸ್‌ಬುಕ್‌ನ ಕವನಗಳು. ಇವರು ಆ ಕಾವ್ಯಕನ್ನಿಕೆಗಾಗಿ ಬರೆಯುವ ಸಾಲುಗಳಲ್ಲಿ ಇರುವ ಪ್ರೀತಿ ನನಗಾಗೇ ಆಗಿರಬಾರದೇ ಎಂದುಕೊಳ್ಳುವ ಎಷ್ಟೋ ಹೆಣ್ಣುಮಕ್ಕಳಿದ್ದಾರೆ ಆದರೆ ಆ ಸಾಲುಗಳು ಅವಳಿಗೆ ಮೀಸಲು. ಆದರೆ ಉಳಿದಿರುವ ಪ್ರಶ್ನೆ ಯಾರು ಆ ಕಾವ್ಯಕನ್ನಿಕೆ?

ಸಿನಿಮಾ ಸಂಭಾಷಣೆಕಾರ ಮತ್ತು ಗೀತಸಾಹಿತಿ ಟಿ.ಜಿ.ನಂದೀಶ್
ಸಿನಿಮಾ ಒಂದನ್ನು ನೋಡಿಬಂದರೆ ಸಾಕು ವಾರವೆಲ್ಲಾ ಅದೇ ಸಿನಿಮಾದ ಗುಂಗು, ಅದರ ಬಗ್ಗೆಯೇ ಚರ್ಚೆ ಹೀಗೆ, ಸದಾ ಸಿನಿಮಾ ಮನಸ್ಸಿನಲ್ಲಿ ಇರುತ್ತಿತ್ತು. ಸಿನಿಮಾ ನಾಯಕನಾಗಬೇಕು ಎಂಬ ಬಯಕೆಯೂ ಇತ್ತು. ಆದರೆ ಸಿನಿಮಾರಂಗಕ್ಕೆ ಪತ್ರಿಕೋದ್ಯಮದ ಮೂಲಕ ಹತ್ತಿರವಾದ ನಂದಿಶ್‌ರನ್ನು ಸಿನಿಮಾರಂಗಕ್ಕೆ ಕರೆದೊಯ್ದದ್ದು ಮಾತ್ರ ಅವರು ನಂಬಿದ್ದ ಅಕ್ಷರವೇ. ಹೌದು, ನಂದೀಶ್ ಈಗ ಸಿನಿಮಾ ಸಂಭಾಷಣೆಕಾರ ಮತ್ತು ಗೀತಸಾಹಿತಿ. ಅಜಯ್ ರಾವ್ ಅಭಿನಯದ ಧೈರ್ಯಂ ಚಿತ್ರಕ್ಕೆ ಶಿವತೇಜಸ್ ಜೊತೆಗೂಡಿ ನಂದೀಶ್ ಸಂಪೂರ್ಣ ಸಂಭಾಷಣೆಯನ್ನು ಬರೆದಿದ್ದಾರೆ. ಇತ್ತೀಚೆಗೆ ಬಹಳ ಸದ್ದು ಮಾಡುತ್ತಿರುವ ವಿನಾಶಿನಿ ಸಿನಿಮಾಗಾಗಿ ಜೊತೆಯಾಗಿ ನೀ ನಡೆವಾಗ ಸಿಗದಿರಲಿ ಸೇರುವ ಜಾಗ ಎಂಬ ಹಾಡಿಗೆ ದನಿಯಾಗಿರುವುದು ರಾಜೇಶ್ ಕೃಷ್ಣನ್ ಮತ್ತು ಅನುರಾಧ ಭಟ್.

ಮರೆಯಲಾಗದ ಅನುಭವಗಳು
ಕನ್ನಡ ಚಿತ್ರರಂಗದಲ್ಲಿ ವೈಭವ ಅಂದ್ರೆ ರವಿಚಂದ್ರನ್ ಸರ್ ಮತ್ತು ಸರಳತೆ ಅಂದ್ರೆ ಉಪೇಂದ್ರ ಸರ್, ಈ ವಿಭಿನ್ನ ಮಜಲುಗಳ ಸಾಧಕರ ಕೈ ಕುಲುಕೋ ಅವಕಾಶ ಸಿಕ್ಕರೆ ಸಾಕು ಎನ್ನುವವರಿದ್ದಾರೆ ಅಂತಹುದರಲ್ಲಿ ಅವರ ಎದುರು ಕುಳಿತು ಸಂದರ್ಶನ ಮಾಡೋದು ಅಂದ್ರೆ, ನಿಜಕ್ಕೂ ರೋಮಾಂಚನ ಆಗುತ್ತೆ. ನಾನೆಂದೂ ಮರೆಯಲಾಗದ ಕ್ಷಣ ಅದು ಎನ್ನುತ್ತಲೇ ತಮ್ಮ ಅನುಭವದ ಬುತ್ತಿ ಬಿಚ್ಚಿಟ್ಟರು ನಂದೀಶ್. ಮತ್ತೊಂದು ಮರೆಯಲಾಗದ ಕ್ಷಣ ಎಂದರೆ ವಿನಾಶಿನಿಗೆ ನಾ ಬರೆದ ಸಾಲುಗಳನ್ನು ರಾಜೇಶ ಕೃಷ್ಣನ್ ಸರ್ ಹಾಡಿದ್ದು. ಮೊದಲಿಗೆ ಡೇಟ್ ಇಲ್ಲ ಎಂದಿದ್ದ ಅವರು ಟ್ರ್ಯಾಕ್ ಕೇಳಿ, ಇಂತಹ ಒಂದು ಹಾಡನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಹೇಳಿ, ಬಂದು ನನ್ನ ಸಾಲಿಗೆ ದನಿಯಾಗಿದ್ದು. ಅಬ್ಬಾ!. ಹಾಡಿದ ನಂತರ ತುಂಬಾ ಚೆನ್ನಾಗಿ ಬರೆದಿದ್ದೀರಿ ಎಂದು ಬೆನ್ನು ತಟ್ಟಿದ ಆ ಕ್ಷಣ ನಾನೆಂದೂ ಮರೆಯಲಾರೆ ಅಂತಾನೆ ಮತ್ತೊಮ್ಮೆ ಪುಳಕಿತರಾದರು ನಂದೀಶ್.
ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ನಂದೀಶ್ ಪಯಣ ಸಾಧನೆಯ ಉತ್ತುಂಗ ಶಿಖರವನ್ನೇರಲಿ. ಇವರ ಕವನಗಳು ಇನ್ನಷ್ಟು ರಸದೌತಣವನ್ನು ಉಣಬಡಿಸಲಿ, ಸಿನಿಮಾ ರಂಗದಲ್ಲಿ ಇವರ ಸಾಹಿತ್ಯಕ್ಕೆ ಉತ್ತಮ ಮನ್ನಣೆದೊರೆತು ಈ ಯುವ ಪ್ರತಿಭೆ ಉತ್ತಮ ಚಿತ್ರಸಾಹಿತಿ, ಗೀತಸಾಹಿತಿ ಎಂಬ ಬಿರುದುಗಳಿಂದ ಗುರುತಿಸಿಕೊಳ್ಳುತ್ತಾ ಬೆಳೆಯಲಿ ಎನ್ನುವುದೇ ನಮ್ಮ ಹಾರೈಕೆ.

RELATED ARTICLES
- Advertisment -
Google search engine

Most Popular

Recent Comments