ಗಾಜನೂರು: ತೀರ್ಥಹಳ್ಳಿ ಶಾಸಕ ಮತ್ತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಇಂದು ಸಂಸದ ಬಿ.ವೈ.ರಾಘವೇಂದ್ರ ಅವರು ಇಲ್ಲಿನ ತುಂಗಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.
ಬಾಗಿನ ಅರ್ಪಣೆ ನಂತರ ಮಾತನಾಡಿದ ಅವರು, ಕಳೆದ ವರ್ಷ ಮಳೆಯ ಕೊರತೆಯಿಂದ ರೈತರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದರು. ಈ ವರ್ಷ ಉತ್ತಮ ಮಳೆಯಿಂದ ರೈತರ ಹೊಲಗಳಿಗೆ ನೀರು ಮತ್ತು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರತಂತಾಗಿದೆ. ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ತುಂಗಾ ನದಿಗೆ ನೀರನ್ನು ಬಿಡಲಾಗುತ್ತಿದೆ ಎಂದರು.
ಸುಮಾರು 70ರಿಂದ 80 ಹೆಕ್ಟೇರ್ ಜಮೀನಿಗೆ ನೀರುಣಿಸುವ ಸಾಮರ್ಥ್ಯದ ಈ ಜಲಾಶಯವು ಹಾವೇರಿ, ದಾವಣಗೇರೆ ಮತ್ತು ಶಿವಮೊಗ್ಗ ಜಿಲ್ಲೆಯ ರೈತರ ಜೀವನದಿಯಾಗಿದೆ. ಕಳೆದ ವರ್ಷ ಶಿವಮೊಗ್ಗ ನಗರಕ್ಕೆ ಇಲ್ಲಿಂದಲೇ ನೀರನ್ನು ತೆಗೆದುಕೊಂಡು ಹೋಗಲಾಗಿತ್ತು. ಉತ್ತಮ ಮಳೆಯಾದರೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಈ ವರ್ಷ ಇನ್ನಷ್ಟು ಮಳೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಬರಗಾಲದಲ್ಲಿ ಜೂನ್ ವರೆಗೂ ಶಿವಮೊಗ್ಗ ನಗರಕ್ಕೆ ನೀರುಣಿಸುವ ಕಾರ್ಯ ತುಂಗ ಜಲಾಶಯದಿಂದ ನಡೆದಿತ್ತು. ಈಗ ಭರ್ತಿಯಾಗಿದೆ. ರೈತರು ಎಚ್ಚರಿಕೆಯಿಂದ ನೀರನ್ನ ಬಳಸಿಕೊಳ್ಳಲಿ ಎಂದರು.
ಪ್ರಧಾನಿ ಮೋದಿಯವರು ಬರುವ ಮಂಗಳವಾರದಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದು, ಇದು ಐತಿಹಾಸಿಕ ಬಜೆಟ್ ಆಗಲಿದೆ. ಈ ಬಜೆಟ್ಟಿನಲ್ಲಿ ಶಿವಮೊಗ್ಗ ನಗರಕ್ಕೆ ರೈಲ್ವೆ, ರಾಷ್ಟ್ರೀಯ ಮತ್ತು ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಮಾತನಾಡಿದ್ದೇನೆ. ನಾವೆಲ್ಲಾ ಸೇರಿ ನಮ್ಮ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಜಲಾಶಯದಲ್ಲಿ ಸಾಕಷ್ಟು ಹೂಳು ತುಂಬಿದ್ದು, ನೆಪ ಮಾತ್ರಕ್ಕೆ ಜಲಾಶಯ ಭರ್ತಿ ಎಂಬಂತಾಗಿದೆ. ಇಲ್ಲಿ ಶೇಖರಣೆಯಾಗಿರುವ ಮರಳನ್ನು ಎತ್ತಿದರೆ ಮೂರು ಜಿಲ್ಲೆಗೆ ಸಾಕಾಗುಷ್ಟು ಆಗುತ್ತದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಗಮನಹರಿಸಿ ಕೆಲಸ ಮಾಡುವಂತೆ ಸರಕಾರ ಗಮನಹರಿಸಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹಾಗೂ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.