ಭದ್ರಾವತಿ: ನಿಂತ ನೀರಿನಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಕಾಯಿಲೆಯನ್ನು ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಯು ತನ್ನ ವಂಶಾಭಿವೃದ್ಧಿಯನ್ನು ಮಾಡುತ್ತದೆ. ಇದು ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಹಾಗಾಗಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ.ಅಶೋಕ್ ಎಂದರು.
ನಗರಸಭೆಯ ಸಭಾಂಗಣದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅಂತರ್ ಇಲಾಖಾ ಸಭೆ ಹಾಗೂ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಹಾಗೂ ಅವುಗಳ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಕುರಿತು ಮಾಹಿತಿಯನ್ನು ನೀಡಿದ ಅವರು, ಒಂದು ಹೆಣ್ಣು ಸೊಳ್ಳೆ ತಾನು ಬದುಕುವ ಕಾಲಾವಧಿ ಒಂದು ತಿಂಗಳೊಳಗಾಗಿ 200 ರಿಂದ 300 ಮೊಟ್ಟೆಗಳನ್ನಿಟ್ಟು 15 ದಿನಗಳೊಳಗಾಗಿ ಮೊಟ್ಟೆಯಿಂದ ಲಾರ್ವಾ-ಪ್ಯೂಪಾ-ಸೊಳ್ಳೆಯಾಗಿ ಬೆಳೆದು ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ವೈರಾಣುವನ್ನು ವರ್ಗಾವಣೆ ಮಾಡಿ ರೋಗವನ್ನು ಹರಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಪ್ರತಿಯೊಬ್ಬ ಪ್ರಜೆಗೂ ಮಾಹಿತಿ ತಲುಪುವಂತಾಗಬೇಕು, ಅದಕ್ಕಾಗಿ ಎಲ್ಲಾ ಇಲಾಖೆಗಳು ತಮ್ಮ ತಮ್ಮ ಜವಾಬ್ದಾರಿಯನ್ನು ತಪ್ಪದೆ ನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ನಗರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿಯ ಸಿಬ್ಬಂದಿ ಹಾಗೂ ತಾಲ್ಲೂಕಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಆಡಳಿತ ವೈದ್ಯಾಧಿಕಾರಿ ಡಾ. ಶಂಕರಪ್ಪ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಿಂತ ನೀರಿನಲ್ಲಿರುವ ಸೊಳ್ಳೆಯಿಂದ ಡೆಂಗ್ಯೂ-ಚಿಕೂನ್ ಗುನ್ಯಾ: ಶಾಸಕರಿಂದ ಸಭೆ
RELATED ARTICLES