ಶಿವಮೊಗ್ಗ : ಬಹುರಾಷ್ಟ್ರೀಯ ಕಂಪನಿಗಳು ನಗರದ ವಿವಿಧ ಕಟ್ಟಡಗಳ ಮೇಲೆ ಜಾಹೀರಾತು ಫಲಕಗಳನ್ನು ಅಳವಡಿಸಿದ್ದು, ಈ ಕಂಪನಿಗಳು ಪಾಲಿಕೆಗೆ ಯಾವುದೇ ಕಂದಾಯವನ್ನು ನೀಡದೆ ಇರುವುದರಿಂದ ತೀವ್ರ ನಷ್ಟವಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
ಮೇಯರ್ ಏಳುಮಲೈ ಅಧ್ಯಕ್ಷತೆಯಲ್ಲಿ ಇಂದು ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪಾಲಿಕೆ ಆಡಳಿತ ಪಕ್ಷದ ನಾಯಕ ಮೋಹನ್ ರೆಡ್ಡಿ, ಓಪೋ ಹಾಗೂ ವಿವೋ ಮೊಬೈಲ್‌ಗೆ ಸಂಬಂಧಿಸಿದ ಜಾಹೀರಾತು ಫ್ಲೆಕ್ಸ್‌ಗಳನ್ನು ನಗರದ ಕಟ್ಟಡಗಳ ಮೇಲೆ ಅಳವಡಿಸಲಾಗಿದೆ. ಆದರೆ ಈ ಬಹುರಾಷ್ಟ್ರೀಯ ಕಂಪನಿಗಳು ಪಾಲಿಕೆಗೆ ಯಾವುದೇ ತೆರಿಗೆಯನ್ನು ನೀಡದೇ ಇರುವುದರಿಂದ ತೀವ್ರ ನಷ್ಟವಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ ಸದಸ್ಯರುಗಳಾದ ನಾಗರಾಜ್ ಕಂಕಾರಿ, ಪಾಲಾಕ್ಷಿ, ನಗರದಲ್ಲಿ ಜಾಹಿರಾತು ಫಲಕಗಳ ಹಾವಳಿ ಹೆಚ್ಚಾಗಿರುವು ದರಿಂದ ತಕ್ಷಣ ನಿಗಧಿ ಪಡಿಸಿದ ಸ್ಥಳದಲ್ಲಿ ಮಾತ್ರ ಹೋಲ್ಡಿಂಗ್ಸ್ ಹಾಕಲು ಕ್ರಮ ಕೈಗೊಳ್ಳಬೇಕು, ಇನ್ನೊಂದು ವಾರದಲ್ಲಿ ಇದನ್ನು ಜಾರಿ ಮಾಡಿ ಎಂದು ಒತ್ತಾಯಿಸಿದರು.
ನಗರದ ೨೦ ಸ್ಥಳಗಲ್ಲಿ ತಲಾ ೧೫ ಸಾವಿರರೂ ಖರ್ಚು ಮಾಡಿ ೪೦ ಹೋಲ್ಡಿಂಗ್ಸ್ ಹಾಕುವ ಫ್ರೇಮ್‌ಗಳನ್ನು ಪಾಲಿಕೆಯಿಂದಲೇ ಸಿದ್ಧಪಡಿ ಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ರೆವಿನ್ಯೂ ಡಿ.ಸಿ. ನಾಗರಾಜ್ ಸಭೆಗೆ ತಿಳಿಸಿದರು.
ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪಾಲಿಕೆ ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ಜಾಹಿರಾತು ಹೋಲ್ಡಿಂಗ್ಸ್ ಹಾಕಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮಹಾನಗರ ಪಾಲಿಕೆಯಿಂದ ನಗರದ ಬಡ ಕುಟುಂಬಗಳಿಗೆ ಅನಿಲ ಭಾಗ್ಯ ನೀಡಲು ನಿರ್ಣಯ ಕೈಗೊಳ್ಳಲಾಯಿತು.
ಇಂದು ಪಾಲಿಕೆ ಸಭಾಂಗಣದಲ್ಲಿ ನಡೆದ ಮುಂದುವರೆದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿ ವಾರ್ಡ್‌ಗೆ ತಲಾ ೨೫ ಗ್ಯಾಸ್ ಸ್ಟೌವ್ ಸಂಪರ್ಕ ನೀಡಲು ಸಮ್ಮತಿಸಲಾಯಿತು.
ಸದಸ್ಯ ರಾಜಶೇಖರ್ ಈ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಸರ್ಕಾರದ ಅನಿಲ ಭಾಗ್ಯ ಯೋಜನೆಯಡಿ ಬಾರದ ಅನೇಕ ಬಡ ಕುಟುಂಬಗಳಿದ್ದು ಅವರಿಗೆ ಗ್ಯಾಸ್‌ಸ್ಟೌವ್ ನೊಂದಿಗೆ ಅನಿಲ ಸಂಪರ್ಕ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಗ್ಯಾಸ್‌ಸ್ಟೌವ್ ನೀಡಲು ಕ್ರಮ ಕೈಗೊಂಡಿದ್ದಾಗ ಸರ್ಕಾರದ ಯೋಜನೆ ಬಂದಿತೆಂದು ಕೈಬಿಡಲಾಗಿತ್ತು. ಆದರೆ ಈಗ ಎಲ್ಲರಿಗೂ ಯೋಜನೆಯಡಿ ಸೌಲಭ್ಯ ಸಿಗದಿದ್ದ ರಿಂದ ಬಡವರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿ ಮಾಡಲು ಪಾಲಿಕೆ ಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಯಿತು.
ಸದಸ್ಯ ರಮೇಶ್ ಮಾತನಾಡಿ, ಕೆಲ ದಿನಗಳಲ್ಲೇ ರಾಜಕೀಯ ಪಕ್ಷಗಳ ಸಮಾವೇಶ ಇರುವುದರಿಂದ ನಿಗದಿತ ಸ್ಥಳದಲ್ಲೇ ಜಾಹಿರಾತು ಫಲಕ ಹಾಕುವ ನೀತಿಯನ್ನು ಮುಂದಕ್ಕೆ ಹಾಕಬೇಕೆಂದರು.
ಮೇಯರ್ ಏಳುಮಲೈ ಬಾಬು ಅಧ್ಯಕ್ಷತೆ ವಹಿಸಿದ್ದರು, ಆಯುಕ್ತ ಮುಲೈ ಮುಹಿಲಾನ್ ಉಪಸ್ಥಿತರಿದ್ದರು.
ಮೋಹನ್ ರೆಡ್ಡಿ : ಓಪೋ ಹಾಗೂ ವಿವೋ ಮೊಬೈಲ್‌ಗೆ ಸಂಬಂಧಿಸಿದ ಜಾಹೀ ರಾತು ಫ್ಲೆಕ್ಸ್‌ಗಳನ್ನು ನಗರದ ಕಟ್ಟಡಗಳ ಮೇಲೆ ಅಳವಡಿಸಲಾಗಿದೆ. ಆದರೆ ಈ ಬಹುರಾಷ್ಟ್ರೀಯ ಕಂಪನಿಗಳು ಪಾಲಿಕೆಗೆ ಯಾವುದೇ ತೆರಿಗೆಯನ್ನು ನೀಡದೇ ಇರುವುದರಿಂದ ತೀವ್ರ ನಷ್ಟವಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು. ಪಾಲಿಕೆಯಿಂದ ಪರವಾನಿಗೆ ಪಡೆದ ಜಾಹೀರಾತು ಏಜೆನ್ಸಿದಾರರು ನಿಯಮದಂತೆ ಪಾಲಿಕೆಗೆ ಶುಲ್ಕ ಪಾವತಿಸುತ್ತಾರೆ. ಇವರುಗಳಿಂದ ಪಾಲಿಕೆಗೆ ಆದಾಯವಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳು ಯಾವುದೇ ತೆರಿಗೆಯನ್ನು ಕಟ್ಟದೇ ಉಚಿತವಾಗಿ ಪ್ರಚಾರ ಕಾರ‍್ಯ ನಡೆಸುತ್ತಿದ್ದು, ಈ ಬಗ್ಗೆ ಕ್ರಮ ಅನಿವಾರ್ಯವಾಗಿದೆ.