ಶಿವಮೊಗ್ಗ: ನಗರದ ಮೌಲಾನಾ ಆಜಾದ್ ಮಾದರಿ ಶಾಲೆಯು ಮಕ್ಕಳು ಖುಷಿಯಲ್ಲಿದ್ದಾರೆ. ಅವರ ಬೇಡಿಕೆ ಕೊನೆಗೂ ಈಡೇರಿದೆ. ಊಟ ಕೊಡಿ ಎಂದು ಉಸ್ತುವಾರಿ ಸಚಿವರ ಮುಂದೆ ಅವರು ಇಟ್ಟಿದ್ಸ ಬೇಡಿಕೆಯನ್ನು ಅತೀ ಶೀಘ್ರದಲ್ಲಿಯೇ ಈಡೇರಿಸಲಾಗಿದೆ. ಸೋಮವಾರದಿಂದಲೇ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸವಿದು, ಸಂಭ್ರಮ ಪಟ್ಟರು.
ಹೌದು, ಸೋಮಿನಕೊಪ್ಪದಲ್ಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು, ಮಕ್ಕಳು ಸಂತಸದಲ್ಲಿ ಓಡಾಡುತ್ತಿದ್ದರು. ಇದಕ್ಕೆ ಕಾರಣವೇ ಆ ಶಾಲೆಯಲ್ಲೂ ಬಿಸಿಯೂಟ ಶುರುವಾಗಿದ್ದು. ಇಲ್ಲಿನ ಲಷ್ಕರ್ ಮೊಹಲ್ಲಾದಲ್ಲಿದ್ದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಯು ಈಗ ಸೋಮಿನಕೊಪ್ಪದ ಸ್ವಂತ ಕಟ್ಟಡದಲ್ಲಿ ನಡೆಯುತ್ತಿದೆ.
ಕಳೆದ ಒಂದು ವರ್ಷದ ಹಿಂದೆಯೇ ಈ ಶಾಲೆಯನ್ನು ಲಷ್ಕರ್ ಮೊಹಲ್ಲಾದಿಂದ ಸೋಮಿನಕೊಪ್ಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು, ಸ್ವಂತಹ ಕಟ್ಟಡವೇನೋ ಇತ್ತು, ಆದರೆ ಈ ಶಾಲೆಯ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಇರಲಿಲ್ಲ. ಇದೇ ಕಾರಣಕ್ಕೆ ಕಳೆದ ಶುಕ್ರವಾರ ಈ ಮಕ್ಕಳು ಜಿಲ್ಲಾಡಳಿತದ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದು ಸಚಿವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು.
ಮಕ್ಕಳ ಅಹವಾಲು ಸ್ವೀಕರಿಸಿದ್ದ ಸಚಿವರು, ಸೋಮವಾರದಿಂದಲೇ ಈ ಶಾಲೆಯ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೇ ಹಿನ್ನೆಲೆಯಲ್ಲಿ ಜೂ.29 ರಿಂದ ಹತ್ತಿರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಿಂದ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಶುರುವಾಗಿದೆ.