ಶಿವಮೊಗ್ಗ: ಎಸ್ಸಿ ಎಸ್ಟಿ ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಅಸ್ತು ಎಂದಿರುವ ತೀರ್ಪನ್ನು ಸ್ವಾಗತಿಸುತ್ತವೆ ಮತ್ತು ಈ ಆದೇಶವನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ.ಆರ್.ಹೆಚ್.ಎಸ್.) ರಾಜ್ಯ ಪ್ರಧಾನ ಕಾರ್ಯದರ್ಶಿ ಬಾನು ಪ್ರಸಾದ್ ಬಿ.ಎ. ಹೇಳಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ತೀರ್ಪಿನಿಂದ ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸಂಪೂರ್ಣ ನ್ಯಾಯ ದೊರಕಿದೆ. ಕಳೆದ 30 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಉಚ್ಚ ನ್ಯಾಯಾಲಯವು ನೀಡಿದ ಐತಿಹಾಸಿಕ ತೀರ್ಪಿನಿಂದ ತಮ್ಮ ತಮ್ಮ ರಾಜ್ಯ ಸರಕಾರಗಳ ಸಂಪುಟದಲ್ಲಿಟ್ಟು ಸುಪ್ರೀಂ ಕೋರ್ಟ್ ಆದೇಶದಂತೆ ಸಂಪುಟದ ಒಪ್ಪಿಗೆ ಪಡೆದು ಜಾರಿ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದರು.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಅದೇ ರೀತಿ ಹಿಂದುಳಿದ ಸಮುದಾಯಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕಾಂತರಾಜ್ ವರದಿಯನ್ನು ಅನುಷ್ಟಾನಗೊಳಿಸಬೇಕು. ಆ ಮೂಲಕ ಎಲ್ಲಾ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂದು ಹೇಳಿದರು.
ಜನಸಂಖ್ಯೆ ಆಧಾರದ ಮೇಲೆ ಸುಪ್ರಿಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿಯೇ ಒಳ ಮೀಸಲಾತಿ ಬಗ್ಗೆ ವಾಗ್ದಾನ ಮಾಡಿತ್ತು. ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಕೊಡಲು ಇನ್ನೂ ಹೆಚ್ಚಿನ ಅನುಕೂಲವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕೆಂದು ಆದೇಶಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಖಂಡ ಎ.ಗಂಗಾಧರ್, ಬಿ.ವೆಂಕಟೇಶ್, ಸುನಿಲ್, ರಾಮು, ಪ್ರತಾಪ್, ನರಸಿಂಹ, ಮೈಲಾರಪ್ಪ ಜಯಂತ್ ಇತರರು ಉಪಸ್ಥಿತರಿದ್ದರು.