Saturday, December 14, 2024
Google search engine
Homeಇ-ಪತ್ರಿಕೆಬಸವಕೇಂದ್ರದಿಂದ `ಕಾರ್ತಿಕ ಚಿಂತನ' ವಚನ ನುಡಿಗಟ್ಟುಗಳ ಕುರಿತು ಉಪನ್ಯಾಸ ಕಾರ್ಯಕ್ರಮ

ಬಸವಕೇಂದ್ರದಿಂದ `ಕಾರ್ತಿಕ ಚಿಂತನ’ ವಚನ ನುಡಿಗಟ್ಟುಗಳ ಕುರಿತು ಉಪನ್ಯಾಸ ಕಾರ್ಯಕ್ರಮ

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಬಸವ ಕೇಂದ್ರದ ಅಧ್ಯಕ್ಷ ಶರಣ ಜಿ.ಬೆನಕಪ್ಪ ಮಾಹಿತಿ

ಶಿವಮೊಗ್ಗ : ಕಾರ್ತಿಕ ಮಾಸದ ಪ್ರಯುಕ್ತ 18 ನೇ ವರ್ಷದ `ಚಿಂತಿನ ಕಾರ್ತಿಕ’ ಕಾರ್ಯಕ್ರಮವನ್ನು ಶಿವಮೊಗ್ಗ ಬಸವ ಕೇಂದ್ರದಿಂದ ನ.05 ರಿಂದ ಡಿ.02 ರವರೆಗೆ ಆಯೋಜಿಸಲಾಗಿದ್ದು, ವಿವಿಧೆಡೆ ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂದು ಶಿವಮೊಗ್ಗ ಬಸವ ಕೇಂದ್ರದ ಅಧ್ಯಕ್ಷ ಶರಣ ಜಿ.ಬೆನಕಪ್ಪ ತಿಳಿಸಿದರು.

ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣ ಚಳವಳಿಯ ಸಾರವಾಗಿರುವ ವಚನಗಳ ಹಲವು ನುಡಿಗಟ್ಟುಗಳು ಚಿಂತನೆಗೆ ಹಚ್ಚುವ ಗುಣ ಹೊಂದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಿಂತನ ಕಾರ್ತಿಕಕ್ಕೆ ವಚನಗಳ ನುಡಿಗಟ್ಟುಗಳನ್ನು ಆಯ್ದುಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನ.05 ರಂದು ಬಸವಕೇಂದ್ರದಲ್ಲಿ ನಡೆಯಲಿದ್ದು, ಬೆಂಗಳೂರು ಬಸವ ಸಮಿತಿಯ ಶರಣ ಅರವಿಂದ ಜತ್ತಿ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಬಸವಕೇಂದ್ರದ ಅಧ್ಯಕ್ಷರಾದ ಶರಣ ಜಿ. ಬೆನಕಪ್ಪ ವಹಿಸಲಿದ್ದಾರೆ. ವಿದ್ಯುತ್ ಇಲಾಖೆ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣ ಎಸ್.ಜಿ.ಶಶಿಧ‌ರ್ ಉಪಸ್ಥಿತರಿರುವರು ಎಂದರು.

ಈ ವೇಳೆ ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕ ಪ್ರಸನ್ನ ಡಿ. ಸಾಗರ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಜಿ.ವಿ.ಹರಿಪ್ರಸಾದ್, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಎನ್.ಮಂಜುನಾಥ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಹಾಸ ಹಿರೇಮಳಲಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಗುವುದು ಎಂದರು.

ಚಿಂತನ ಕಾರ್ತಿಕದ ಸಮಾರೋಪ ಸಮಾರಂಭ ಡಿ.02 ರಂದು ಮಧ್ಯಾಹ್ನ 3.00 ಗಂಟೆಗೆ ಶಿವಮೊಗ್ಗ ಬಸವಕೇಂದ್ರದಲ್ಲಿ ನಡೆಯಲಿದೆ. ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಂಕಣಕಾರರಾದ ಶರಣೆ ಶ್ರೀರಂಜನಿ ದತ್ತಾತ್ರಿ ಅವರು ನಿತ್ಯ ತೃಪ್ತಂಗೆ ನೈವೇದ್ಯದ ಹಂಗೇಕೆ? ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಿವು ಅರಿವು ಎನ್ನುಪ್ಪಿರಿ ಅರಿವು ಸಾಮಾನ್ಯವೇ, ಮಾಡಲಾಗದು ಅಳಿಮಾನ, ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಖಃ, ಈ ಲೋಕದೊಳಗೆ ಮತ್ತೆ ಅನಂತಲೋಕ, ಕಾಯಕದಿಂದ ಬಂದುದು ಲಿಂಗಾರ್ಪಿತ, ಎನ್ನ ಹೊಗಳತೆಗಡ್ಡಬಾರಾ, ನಾಳೆ ಬಪ್ಪುದು ನಮಗಿಂದೇ ಬರಲಿ, ಗುರು ಲಘುವಪ್ಪನೆ ಲಘು ಗುರುವಪ್ಪನೆ, ನಿಮ್ಮ ಮಂಡೆಗೆ ಹೂವ ತಾಹೆನಲ್ಲದೆ ಹುಲ್ಲ ತಾರೆನು, ಸಾವಿರಕೊಬ್ಬ ಸತ್ಯ ಲಕ್ಷಕೊಬ್ಬ ಭಕ್ತ ಕೋಟಿಗೊಬ್ಬ ಶರಣ, ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೇ, ಲೋಕದ ಡೊಂಕ ನೀವೇಕೆ ತಿದ್ದುವಿರಿ, ಎಲ್ಲರು ಅಹುದೆಂಬುದು ಪ್ರಮಾಣವಲ್ಲ ಎಲ್ಲರೂ ಅಲ್ಲೆಂಬುದು ಪ್ರಮಾಣವಲ್ಲ, ಕುಲಮದವಳಿಯಾದನ್ನಕ್ಕ ಶರಣನಾಗಲೇಕೆ, ಅನುಭಾವ ಭಕ್ತಿ ಗಾಧಾರ, ಕಾಲಗಂಜಿ ಭಕ್ತನಾದಡೆ ಕರ್ಮ ತುಂಬುದ ಮಾಬುದೇ, ಎಲ್ಲ ಎಲ್ಲವನರಿದು ಫಲವೇನಯ್ಯ ತನ್ನ ತಾನರಿಯಬೇಕಲ್ಲದೆ, ತನ್ನ ಸ್ಥಿತಿಯ ತಾನರಿಯದಿದ್ದಡೆ ಅದೇ ಪ್ರಳಯ, ಲಾಂಛ್ವಂಚನಕ್ಕೆ ಕೈಯ್ಯಾನದ ಭಾಷೆ, ತಾಯ ಮೊಲೆಹಾಲು ನಂಜಾಗಿ ಕೊಲುವಡೆ, ಮನದ ಮುಂದಣ ಆಸೆಯೇ ಮಾಯೆ, ಯೋಗಿಗೆ ಕೋಪವೇ ಮಾಯೆ, ಆನು ಒಲಿದಂತೆ ಆಡುವೆ, ಸೋಹಂ ಎಂದೆನಿಸದೆ ದಾಸೋಹಂ ಎಂದೇನಿಸಯ್ಯ ಎಂಬ ನುಡಿಗಟ್ಟುಗಳ ಬಗ್ಗೆ ವಿಶೇಷ ಉಪನ್ಯಾಸಗಳು ಪ್ರತೀ ದಿನ ವಿವಿಧೆಡೆ ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಶಿವಮೊಗ್ಗ ಬಸವಕೇಂದ್ರ ಹಾಗೂ ಚಿಕ್ಕಮಗಳೂರು ಬಸವತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅವರು ಸಾನ್ನಿಧ್ಯವಹಿಸಿ, ಆಶೀರ್ವಚನ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಚಂದ್ರಶೇಖರ್ ತಳಗಿಹಾಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಓಪನ್ ಮೈಂಡ್ಸ್ ಶಾಲೆಯ ಕಿರಣ್ ಕುಮಾರ್, ಬಸವ ಕೇಂದ್ರದ ಉಪಾಧ್ಯಕ್ಷ ಚಂದ್ರಪ್ಪ, ಅಕ್ಕನ ಬಳಗದ ಅಧ್ಯಕ್ಷೆ ಜಯಮ್ಮ ಕಬ್ಸದ್, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ಪಾಟೀಲ್, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಸ್.ಸ್ವಾಮಿ, ಬಸವ ಕೇಂದ್ರದ ನಿರ್ದೇಶಕ ಎ.ಜಿ.ಹಾಲಪ್ಪ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments