ಉತ್ತರ ಕನ್ನಡ: ಜಿಲ್ಲೆಯಾದ್ಯಂತ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 766E- ಕುಮಟಾ-ಶಿರಸಿ ರಸ್ತೆಯ ಸಂಚಾರ ಬಂದ್ ಆಗಿದ್ದು, ಜಿಲ್ಲೆಯ ಹಲವು ಗ್ರಾಮಗಳು ಜಲದಿಗ್ಭಂದನಕ್ಕೊಳಗಾಗಿವೆ.
ಅಘನಾಶಿನಿಯ ಉಪನದಿಯಾದ ಚಂಡಿಕಾ ಆರ್ಭಟ ಜೋರಾಗಿದ್ದು ಮಲೆನಾಡು ಹಾಗೂ ಕರಾವಳಿಯನ್ನು ಸಂಧಿಸುವ ಪ್ರಮುಖ ಮಾರ್ಗ ಬಂದ್ ಆಗಿದೆ.
ಹಾಗೆಯೇ ಕರಾವಳಿಯಾದ್ಯಂತ ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ವಾರಾಹಿ ನದಿಯ ಉಪನದಿ ಕಬ್ಜೆ ನದಿಯು ತಡರಾತ್ರಿ ನುಗ್ಗಿ ಹರಿದ ಪರಿಣಾಮ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಕಮಲಶಿಲೆ ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯದ ಗರ್ಭಗುಡಿಯು ಅರ್ಧ ಭಾಗ ಮುಳುಗಿದ್ದರೆ, ದುರ್ಗಾಪರಮೇಶ್ವರಿಯ ಲಿಂಗ ಸಂಪೂರ್ಣ ಮುಳುಗಿರುವ ಕುರಿತು ವರದಿಯಾಗಿದೆ.
ಇನ್ನೊಂದೆಡೆ ಹೊನ್ನಾವರ-ಸಾಗರ ಮಾರ್ಗದಲ್ಲಿ ಕೂಡ ಗುಡ್ಡ ಕುಸಿತವಾಗಿದೆ. ವರ್ನಕೇರಿ ಗ್ರಾಮದಲ್ಲಿ ಹಠಾತ್ತಾಗಿ ಕುಸಿದ ಮಣ್ಣಿನಿಂದ ಕಾರವಾರ-ಶಿವಮೊಗ್ಗ-ಬೆಂಗಳೂರು ಮಾರ್ಗದ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿದೆ.
ಕುಮಟಾ-ಶಿರಸಿ, ಹೊನ್ನಾವರ-ಸಾಗರ ಹಾಗೂ ಅಂಕೋಲಾ-ಶಿರಸಿ ವಯಾ ಯಾಣ ರಸ್ತೆಗಳು ಬಂದ್ ಆಗಿವೆ.