ದಾವಣಗೆರೆ: ಶೀಲ ಶಂಕಿಸಿ ಪತ್ನಿ ತಲೆ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಮೂಲದ ಆರೋಪಿಯನ್ನು 6 ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಇದ್ದಲ ನಾಗೇನಹಳ್ಳಿ ಗ್ರಾಮದ ಕುರಿಗಾಯಿ ಕದರಪ್ಪ (60) ಬಂಧಿತ ಆರೋಪಿ. ಚನ್ನಗಿರಿ ತಾ. ಗುಡ್ಡದ ಕುಮಾರನಹಳ್ಳಿ ಗ್ರಾಮದ ಅಡಕೆ ತೋಟದಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಕಳೆದ ಜನವರಿ 25ರ ರಾತ್ರಿ ತನ್ನ
ಪತ್ನಿ ಸಾಕಮ್ಮನ ತಲೆ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಮೃತಳ ಮಗನಾದ ಕುರಿಗಾಯಿ ದಯಾನಂದ ದೂರು ದಾಖಲಿಸಿದ್ದರು.
ಸಾಕಮ್ಮನ ಕೊಲೆಯಾದ ನಂತರ ಆರೋಪಿ ಕದರಪ್ಪ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಬೆಂಗಳೂರು ಇತರೆ ಕಡೆಗಳಲ್ಲಿ ತಲೆ ಮರೆಸಿಕೊಂಡಿದ್ದ. ಆರು ತಿಂಗಳ ನಂತರ ಪತ್ನಿ ಕೊಲೆ ಆರೋಪಿ ಕದರಪ್ಪನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಎಎಸ್ಪಿ ವಿಜಯಕುಮಾರ ಎಂ.ಸಂತೋಷ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿಎಸ್‌ಐ ಎಚ್. ಕೆ.ವೀಣಾ, ಸಿಬ್ಬಂದಿ ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿ ನಾಗೇನಹಳ್ಳಿ ಕದರಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ
ಕಾರ್ಯಾಚರಣೆಯನ್ನು ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.
ಪತ್ನಿ ಶೀಲ ಶಂಕಿಸಿ ತಲೆ ಮೇಲೆ ಕಲ್ಲು ಎತ್ತಾಕಿ ಹತ್ಯೆ: ಕುರಿಗಾಯಿ ಪತಿ ಬಂಧನ
RELATED ARTICLES