Thursday, December 5, 2024
Google search engine
Homeಅಂಕಣಗಳುಕಂಕಣಬದ್ಧ ಗೀತಸಾಹಿತಿ ಕವಿರಾಜ್

ಕಂಕಣಬದ್ಧ ಗೀತಸಾಹಿತಿ ಕವಿರಾಜ್

ಲೇಖನ : ಸೌಮ್ಯ ಗಿರೀಶ್

ಇವರು ಬರೆದಿರುವ ಪ್ರತಿಯೊಂದು ಸಾಲು ಮೊದಲ ಮಳೆಯಂತೆ ಹರ್ಷ ನೀಡುತ್ತದೆ. ಹದಿಮೂರು ವರ್ಷಗಳಿಂದ ಸ್ಯಾಂಡಲ್‌ವುಡ್ ನೆಲದಲ್ಲಿ ತಮ್ಮ ಗೀತೆಗಳಿಂದ ಹಸಿರನ್ನು ಪಸರಿಸುತ್ತಾ ಬಂದಿರುವ, ಕನ್ನಡಕ್ಕಾಗಿ ಕಂಕಣ ಕಟ್ಟಿಕೊಂಡು ನಿಂತಿರುವ ಸಹಸ್ರಾರು ಹಾಡುಗಳ ಸರದಾರ ಕವಿರಾಜ್ರವರು ನಡೆದು ಬಂದ ಹಾದಿ ಇಲ್ಲಿದೆ.

ಶಿವಮೊಗ್ಗದ ಮಂಡಗದ್ದೆಯ ಬಾವಿಗದ್ದೆ ಗ್ರಾಮದಲ್ಲಿ ಶ್ರೀ. ಕೆ.ಪಿ.ಹರಿಯಪ್ಪ ನಾಯಕ್ ಮತ್ತು ಶ್ರೀಮತಿ. ಜಾನಕಿಯವರ ಪ್ರೀತಿಯ ಪುತ್ರನಾಗಿ, ಜನಿಸಿದವರೇ ಕವಿರಾಜ್. ಹುಟ್ಟಿದ್ದು ಮಾತ್ರ ಬಾವಿಗದ್ದೆ ಆದರೆ ಆಡುತ್ತಾ, ಕಲಿಯುತ್ತ, ನಲಿಯುತ್ತಾ ಬೆಳೆದದ್ದು ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ. ಸಾಹಿತ್ಯ ಸರಸ್ವತಿಗೆ ಸರಕಾರಿ ಶಾಲೆ, ಖಾಸಗಿ ಶಾಲೆ, ಹಳ್ಳಿ-ದಿಲ್ಲಿ ಎಂಬ ಬೇಧ ಭಾವವಿಲ್ಲ ಎನ್ನುವುದಕ್ಕೆ ಇವರು ಒಳ್ಳೆಯ ನಿದರ್ಶನ. ಪ್ರಾರ್ಥಮಿಕದಿಂದ ಪ್ರಾರಂಭಿಸಿ ಪ್ರೌಢ ಶಿಕ್ಷಣ ಮುಗಿಸುವವರೆಗೂ ಇವರು ಓದಿದ್ದು ಯಡೂರಿನ ಸರ್ಕಾರಿ ಶಾಲೆಯಲ್ಲೇ. ನಂತರ ಶಿವಮೊಗ್ಗ ನಗರದ ಡಿವಿಎಸ್ ಕಾಲೇಜು ಮತ್ತು ಸಹ್ಯಾದ್ರಿ ವಿಜ್ಞಾನ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದರು.


ಸಾಹಿತ್ಯದ ಒಲವು:
ಅಷ್ಟು ವಿದ್ಯಾವಂತರಿರದ ಕುಟುಂಬ, ಕುಟುಂಬದಲ್ಲೇ ಮೊದಲು ಹೆಚ್ಚಿನ ವಿದ್ಯಾರ್ಹತೆ ಪಡೆದವರು ಕರಿರಾಜ್‌ರವರೇ, ತಂದೆ ಅರಣ್ಯ ಗುತ್ತಿಗೆದಾರರು, ತಾಯಿ ಸಾದಾರಣ ಗೃಹಿಣಿ, ಒಂದು ಸರಳ ಸಜ್ಜನಿಕೆಯ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದವರು ಕವಿರಾಜ್‌ರವರು. ಚಿಕ್ಕಂದಿನಿಂದಲೇ ಓದುವುದು ಎಂದರೆ ಪಂಚಪ್ರಾಣ. ಮಂಡಕ್ಕಿ-ಮಿಠಾಯಿ ತಿಂದ ಕಾಗದಗಳನ್ನೂ ಸಹ ಬಿಸಾಡದೆ ಓದುವುದಕ್ಕಾಗಿ ಮನೆಗೆ ತಂದಿಟ್ಟುಕೊಂಡು ಅಮ್ಮನ ಬಾಯಲ್ಲಿ ಮನೆ ತುಂಬಾ ನೀನು ಕಾಗದದ ಕಸ ಹಾಕಬೇಡ ಎಂದು ಸಹಸ್ರಾರ್ಚನೆ ಮಾಡಿಸಿಕೊಂಡ ಎಷ್ಟೋ ದಿನಗಳಿವೆ. ತರಂಗ, ಸುಧಾ, iಯೂರ, ಚಂದಮಾಮ, ಬಾಲವಿಮಿತ್ರ ಮತ್ತು ಪ್ರಜಾಮತ ಪತ್ರಿಕೆ ಬರುವ ದಿನ ಅಕ್ಕ ಕವಿತಾ, ತಮ್ಮ ಕವಿರಾಜ್ ಮತ್ತು ತಂಗಿ ಕಲ್ಪನಾರ ನಡುವೆ ಶಾಲೆಯಿಂದ ಮನೆ ತಲುಪಲು ಪೈಪೋಟಿ, ಕಾರಣ ಯಾರು ಮನೆ ಮೊದಲು ತಲುಪುತ್ತಾರೋ ಅವರಿಗೆ ಪತ್ರಿಕೆಯನ್ನು ಮೊದಲು ಓದುವ ಅವಕಾಶ. ಹೀಗೆ ಓದುವ ಹಂಬಲ, ಸಾಹಿತ್ಯದ ಮೇಲಿನ ಒಲವು ಸಣ್ಣಂದಿನಿಂದಲೇ ಇತ್ತು. ಕಾಲೇಜು ದಿನಗಳಿಂದಲೇ ಕವಿತೆಗಳನ್ನು ಬರೆಯುತ್ತಿದ್ದರು ಮತ್ತು ಇದರ ಬಗ್ಗೆ ಅವರ ಗೆಳೆಯರಿಗೆ ಮಾತ್ರ ಗೊತ್ತಿತ್ತು. ಆದರೆ ಎಂದೂ ಬರೆಯುತ್ತೇನೆ ಎಂದು ಪ್ರಕಟಿಸಿದವರಲ್ಲ ಕವಿರಾಜ್‌ರವರು.
ಉದರ ನಿಮಿತ್ತ ಬೆಂಗಳೂರಿನತ್ತ:
ವಿದ್ಯಾಭ್ಯಾಸದ ನಂತರ ಕೆಲಸಕ್ಕಾಗಿ ಇವರು ನಡೆದದ್ದು ಬೆಂಗಳೂರಿನತ್ತ. ಬೆಂಗಳೂರಿನ ವಿಜಯನಗರದಲ್ಲಿದ್ದು ಇವರು ಮೆಡಿಕಲ್ ರೆಪ್ರೆಸೆಂಟೇವ್ ಆಗಿ ಕೈಯಲ್ಲಿ ಕಿಟ್ ಬ್ಯಾಗ್ ಹಿಡಿದು, ಸರದಿಯಲ್ಲಿ ನಿಂತು ವೈದ್ಯರನ್ನು ಭೇಟಿ ಮಾಡಿ, ಔಷಧಿಯ ವಿವರ ಹೇಳುತ್ತಾ ಒಂದೂವರೆ ವರ್ಷದಷ್ಟು ಕಾಲ ಕಳೆದರು. ಅದೇಕೋ ಜೀವನ ಏಕತಾನತೆಯಲ್ಲಿ ಸಾಗುತ್ತಿದೆ ಎಂಬ ಭಾವನೆ ಮೂಡಲಾರಂಭಿಸಿತು. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿ ಇವರು ಹೆಜ್ಜೆ ಹಾಕಿದ್ದು ಮಾಯಾನಾಗರಿ ಗಾಂಧಿನಗರದಂತೆ. ಗಾಂಧಿನಗರ ಎನ್ನುತ್ತಿದ್ದಂತೆ ಎಲ್ಲಾ ಪೋಷಕರ ಮನಸ್ಸಿನಲ್ಲಿ ಮೂಡುವ ಸಹಜ ಕಳವಳ ಇವರ ಪೋಷಕರಲ್ಲೂ ಮೂಡಿದ್ದುಂಟು ಆದರೆ ಮಗನ ಆಸೆಗೆ ತಣ್ಣಿರೆರೆಚದೆ ಕೈತುಂಬಾ ದುಡಿಯುವ ಕೆಲಸ ಬಿಟ್ಟು ಹೋಗುತ್ತಿದ್ದೀಯಾ, ಎಚ್ಚರವಾಗಿರು ಎನ್ನುವ ಕಾಳಜಿಯೊಂದಿಗೆ ಕಳುಹಿಸಿಕೊಟ್ಟರು.
ಗೀತಸಾಹಿತಿಯಾಗಿ ಕವಿರಾಜ್ಮಾರ್ಗ
ಕವಿರಾಜ್‌ರವರಲ್ಲಿರುವ ಕವಿಯನ್ನು ಗುರುತಿಸಿ ಸಿನಿರಂಗಕ್ಕೆ ಪರಿಚಯಿಸಿದ ಕೀರ್ತಿ ಗುರುಕಿರಣರವರಿಗೆ ಸಲ್ಲುತ್ತದೆ. ೨೦೦೨ರಲ್ಲಿ ದರ್ಶನ್‌ರವರ ಕರಿಯ ಚಿತ್ರಕ್ಕಾಗಿ ನನ್ನಲ್ಲಿ ನಾನಿಲ್ಲ ಹಾಡು ಕವಿರಾಜ್‌ರವರು ಬರೆದ ಮೊದಲ ಚಿತ್ರಗೀತೆ. ಅಲ್ಲಿಂದ ಪ್ರಾರಂಭವಾದ ಇವರ ಪಯಣ ಆಪ್ತಮಿತ್ರ, ರಾಮ ಶಾಮ ಭಾಮ, ಸಂಜು ಮತ್ತು ಗೀತ, ಮುಂಗಾರು ಮಳೆ, ಕೆಂಪೇಗೌಡ, ವಿಷ್ಣುವರ್ಧನ, ಒಲವೇ ಮಂದಾರ, ಬಚ್ಚನ್, ವಿಕ್ಟರಿ, ಬಹದ್ದೂರ್, ಪವರ್ ಸ್ಟಾರ್, ಮಾಣಿಕ್ಯ, ಮೈನಾ, ನಿನ್ನಿಂದಲೇ, ರಥಾವರ, ರಣವಿಕ್ರಮ, ಜ಼ೂಮ್ ಹೀಗೆ ನೂರಾರು ಸಿನಿಮಾಗಳು ಮತ್ತು ಸಾವಿರಾರು ಹಾಡುಗಳು ಎಲ್ಲರ ಬಾಯಲ್ಲೂ ಹಚ್ಚ ಹಸಿರಾಗಿದೆ. ಗಾಂಧಿನಗರದಲ್ಲಿ ಬಂದವರು ಎಷ್ಟೋ ಮಂದಿ ಒಂದೆರಡು ಸಿನಿಮಾಗಳು ಆಗುವಷ್ಟರಲ್ಲಿ ತರಗೆಲೆಗಳಂತೆ ಹಾರಿಹೋಗಿರುತ್ತಾರೆ. ಪ್ರತಿನಿತ್ಯ ಒಂದು ಹೊಸ ಟ್ರೆಂಡ್ ಹುಟ್ಟುತ್ತದೆ ಈ ಮಾಯಾನಗರಿಯಲ್ಲಿ. ಅಂತಹುದರಲ್ಲಿ ಅಲ್ಲಿಯೇ ೧೩ ವರ್ಷಗಳು ಗಟ್ಟಿಯಾಗಿ ನಿಂತು ಬೆಳೆಯುವುದು ಸಾಮಾನ್ಯ ಸಾಧನೆಯಲ್ಲಿ. ಪರಿಶ್ರಮ, ಶ್ರದ್ಧೆಯೊಂದಿಗೆ, ಸಾಹಿತ್ಯದ ಮೇಲೆ ಹಿಡಿತ ಮತ್ತು ಸಮಕಾಲೀನವಾಗಿ ಬರೆಯುವ ಸಾಮರ್ಥ್ಯ ಹೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಕವಿರಾಜ್‌ರವರು ನಡೆದು ಬಂದಿರುವ ಮಾರ್ಗ, ಚಿತ್ರರಂಗದಲ್ಲಿ ನೆಲೆನಿಂತಿರುವ ಬಗೆಯೇ ಸಾಕ್ಷಿ. ಬಹುನಿರೀಕ್ಷಿತ ಹೆಬ್ಬುಲಿ ಅಷ್ಟೇ ಇಲ್ಲದ ಇನ್ನೂ ಅನೇಕ ಚಿತ್ರಗಳಿಗೆ ಈಗಾಗಲೇ ಗೀತೆಗಳನ್ನು ರಚಿಸಿದ್ದಾರೆ ಕವಿರಾಜ್‌ರವರು.
ಕಾಡುವ ವಿಷಯ
ಚಿತ್ರಗಳಿಗೆ ಗೀತಸಾಹಿತ್ಯ ಎಂದರೆ ಸುಲಭ, ಅದೇನು ಬಿಡಿ ಯಾರಾದರೂ ಬರೆಯಬಹುದು ಎನ್ನುವ ಮಾತುಗಳು ಕೆಲವೊಮ್ಮೆ ನೋವನ್ನುಂಟು ಮಾಡುತ್ತದೆ ಎನ್ನುತ್ತಾರೆ ಕವಿರಾಜ್. ಒಬ್ಬ ಕವಿ ಕವಿತೆ ಬರೆಯುವುದಾದರೆ ಕವಿಗೆ ತನ್ನದೇ ಸ್ವಾತಂತ್ರ್ಯ, ಆಲೋಚನೆ, ಅನುಭವ-ಅನುಭಾವಗಳು, ಹಲವು ರೀತಿಯ ಸ್ಫೂರ್ತಿ ಇದ್ದು ತನ್ನಿಚ್ಛೆಯಂತೆ ಬರೆಯಬಹುದು ಆದರೆ ಒಬ್ಬ ಚತ್ರಗೀತಸಾಹಿತಿಯ ಕೆಲಸ ಅಷ್ಟು ಸುಲಭದ್ದಲ್ಲ. ಚಿತ್ರಕಥೆಯ ನಿರೀಕ್ಷೆ, ನಿರ್ದೇಶಕನ ಕಲ್ಪನೆ, ಕಥೆಯಲ್ಲಿನ ಸಂದರ್ಭ, ಸಂದರ್ಭದ ಭಾವನೆ, ಇವೆಲ್ಲದರ ಜೊತೆಗೆ ಕೆಲವೊಮ್ಮೆ ಕೊಟ್ಟ ಸಂಗೀತಕ್ಕೆ ಸರಿಯಾಗಿ ಸಾಹಿತ್ಯವನ್ನು ಬರೆಯುವುದರ ಜೊತೆಗೆ ಜನರೂ ಅದನ್ನು ಮೆಚ್ಚಿ, ಒಪ್ಪುವಂತೆ ಬರೆಯುವುದು ಸುಲಭ ಸಾಧ್ಯವಲ್ಲ. ಮತ್ತೊಂದು ನೋವುಂಟು ಮಾಡುವ ವಿಷಯ ಎಂದರೆ ಆಡುಭಾಷೆಯ ಸಾಹಿತ್ಯ ಬರೆದ ತಕ್ಷಣ ಅದೇನು ಸಾಹಿತ್ಯ ಬರಿತಾರೋ, ಇವೆಲ್ಲ ಬಳಸೋ ಪದಗಳ ಅಂತಾರೆ ಆದರೆ ಇದೇ ಸಾಹಿತ್ಯ ಎಂದು ಯಾರು, ಎಲ್ಲಿ ವ್ಯಾಖ್ಯಾನಿಸಿದ್ದಾರೆ, ಮೇಲು ಪಂಕ್ತಿಯ ಜನರು ಮಾತನಾಡುವುದು ಮಾತ್ರ ಸಾಹಿತ್ಯವೇ, ಸಾಮಾನ್ಯ ಜನ, ರಸ್ತೆಯಲ್ಲಿ ಓಡಾಡುವ ಹುಡುಗರು, ಹಳ್ಳಿಯ ಜನ, ಸಾಮಾನ್ಯ ಭಾಷೆ, ಎಲ್ಲವೂ ಸಾಹಿತ್ಯವಲ್ಲವೇ, ಅಲ್ಲ ಎಂದು ಹೇಳುವುದಾದರೆ ಅವರು ಅಸ್ಪೃಷ್ಯತೆಯನ್ನು ಸಾಹಿತ್ಯಕ್ಕೆ ತಂದಂತೆ ಆಗೋಲ್ಲವೇ ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಸಾಹಿತ್ಯಕ್ಕೆ ಯಾವುದೇ ಚೌಕಟ್ಟಿಲ್ಲ, ಒಬ್ಬರಿಗೆ ಹಿತವನಿಸದ್ದು ಮತ್ತೊಬ್ಬರಿಗೆ ಬಹಳ ಸೊಗಸು ಎನಿಸಬಹುದು ಮತ್ತು ಅದು ಬರೆಯುವವರ ಸಾಮರ್ಥ್ಯ ಕೂಡ.
ಕಂಕಣ ನಾಡು-ನುಡಿಗಾಗಿ
ಒಂದು ದಿನ ಬೆಂಗಳೂರಿನ ಪ್ರತಿಷ್ಠಿತ ಪಾದರಕ್ಷೆ ಮಳಿಗೆಯೊಂದಕ್ಕೆ ಕವಿರಾಜ್‌ರವರು ಹೋಗಿದ್ದರೆ, ಅಲ್ಲಿನ ಸೇಲ್ಸ್‌ಮ್ಯಾನ್ ಗ್ರಾಹಕರೊಬ್ಬರಿಗೆ ನೀವು ಹಿಂದಿಯಲ್ಲಿ ಹೇಳಿ, ಕನ್ನಡದಲ್ಲಿ ಹೇಳಬೇಡಿ ಎಂದರು, ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರದ ಅವರು ತಬ್ಬಿಬ್ಬಾದರು. ಇರುವುದು ಕರ್ನಾಟಕದಲ್ಲಿ, ದುಡಿಯುತ್ತಿರುವುದು ಕರ್ನಾಟಕದಲ್ಲಿ ಆದರೆ ಗ್ರಾಹಕರನ್ನು ಕನ್ನಡದಲ್ಲಿ ಮಾತನಾಡಬೇಡಿ ಎನ್ನುವ ಅಧಿಕಾರ ಏನಿದೆ ಎನ್ನುವುದು ಇವರ ಸಿಟ್ಟನ್ನು ಕೆರಳಿಸಿ, ಆ ಗ್ರಾಹಕರೊಂದಿಗೆ ತಾವು ಕೂಡ ಅಲ್ಲಿನ ಪದಾರ್ಥ ಖರೀಸುವುದಿಲ್ಲ, ನಮ್ಮ ಭಾಷೆಯನ್ನು ಬೇಡವೆಂದ ಜನರ ವಸ್ತುವನ್ನು ಧಿಕ್ಕರಿಸಿ ಹೊರಬಂದರೆ. ನಂತರ ಇದಕ್ಕೇನಾದರೂ ಮಾಡಬೇಕೆಂದು ನಿರ್ಧರಿಸಿದವರು ಕನ್ನಡ ನಾಡು-ನುಡಿಗಾಗಿ ಕಂಕಣ ಕಟ್ಟಿದರು. ಕಂಕಣ ಎನ್ನುವುದು ಕನ್ನಡ ಮಾತನಾಡಿ ಎಂದು ಐಟಿ, ಬಿಟಿ, ಉನ್ನತ ವರ್ಗದ ಹುದ್ದೆಯಲ್ಲಿರುವವರು, ವಲಸಿಗರನ್ನು ಕೋರಿಕೊಳ್ಳುವ ಮತ್ತು ಜಾಗೃತಿ ಮೂಡಿಸಿ ಕನ್ನಡ ಅರಿವು ಮೂಡಿಸುವ ಸಂಘಟನೆಯಾಗಿದೆ. ಈಗಾಗಲೇ ಕನ್ನಡಕ್ಕಾಗಿ ಹಲವಾರು ಸಂಘಗಳು ಹೋರಾಡುತ್ತಿವೆ ಆದರೆ ಅವರ ಹೋರಾಟದ ಶೈಲಿ ಬೇರೆ ಆದರೆ ಕವಿರಾಜ್‌ರವರು ಕಾರ್ಪೊರೇಟ್ ಉದ್ಯಮಿಗಳ ಕಿವಿಗೆ ಮತ್ತು ಮನಸ್ಸಿಗೆ ಮುಟ್ಟಬೇಕಾದರೆ ಬರಿಯ ಘೋಷಣೆಗಳಿಂದ ಸಾಧ್ಯವಿಲ್ಲ, ಹಾಗಾಗಿ ಇವರು ಒಂದು ಸುವ್ಯವಸ್ಥಿತ ರೀತಿಯಲ್ಲಿ, ಹೆಚ್ಚಿನ ಅರಚಾಟ, ಘೋಷಣೆಗಳನ್ನು ಕೂಗದೆ, ಫಲಕಗಳನ್ನು ಹಿಡಿದು, ಕಂಕಣ ಕಟ್ಟಿಕೊಂಡು, ಜಾಗೃತಿ ಮೂಡಿಸುತ್ತ, ಪ್ರತಿ ಬಾರಿಯೂ ಬೆಂಗಳೂರಿನ ಒಂದೊಂದು ಸ್ಥಳದಲ್ಲಿ ಕಂಕಣದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಬಹಳ ಯಶಸ್ಸು ಕಂಡಿದ್ದಾರೆ. ಕನ್ನಡ ನನ್ನ ಭಾಷೆ. ನಾನಿಂದು ಒಂದು ನೆಲೆ ಕಂಡುಕೊಂಡಿದ್ದೇನೆ ಎಂದರೆ ಅದು ನನ್ನ ಭಾಷೆಯಿಂದ ಮಾತ್ರ. ನನ್ನ ಭಾಷೆಯ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ಮತ್ತು ನನ್ನ ಭಾಷೆಯ ಉಳಿವಿಗಾಗಿ ನನ್ನ ಈ ಕಂಕಣ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕವಿರಾಜ್‌ರವರು. ಇದು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆದು ನಮ್ಮ ಭಾಷೆಯ ಕೀರ್ತಿಯನ್ನು ಸಾವಿರಾರು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಲಿ ಎನ್ನುವುದೇ ನಮ್ಮ ಹಾರೈಕೆ.
ಪ್ರಶಸ್ತಿ ಪುರಸ್ಕಾರಗಳು:
ಸಂಜು ವೆಡ್ಸ್ ಗೀತ ಚಿತ್ರದ ಸುಮಧುರ ಗೀತೆ ಗಗನವೇ ಬಾಗಿ ಮತ್ತು ಆಪ್ತಮಿತ್ರ ಚಿತ್ರದ ಘರನೆ ಘರಘರನೆ ಹಾಡುಗಳಿಗಾಗಿ ಪ್ರತಿಷ್ಠಿತ ಫಲಂಫೇರ್ ಪ್ರಶಸ್ತಿಯನ್ನು ಎರಡು ಬಾರಿ ಪಡೆದುಕೊಂಡಿರುವ ಕವಿರಾಜ್‌ರವರು ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ನ ಹ್ಯಾಟ್ರಿಕ್ ಸಾಧನೆ, ಸೈಮಾ ಪ್ರಶಸ್ತಿಯ ಪಡೆದುಕೊಂಡಿದ್ದಾರೆ. ಇಂತಹ ಪ್ರಶಸ್ತಿಗಳು ಸಾಧಕರಿಗೆ ಟಾನಿಕ್ ಇದ್ದಂತೆ, ಇನ್ನೂ ಹೆಚ್ಚು ಬರೆಯುವ ಸ್ಫೂರ್ತಿ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ ಎನ್ನುತ್ತಾರೆ ಕವಿರಾಜ್‌ರವರು. ಇನ್ನಷ್ಟು ಪ್ರಶಸ್ತಿಯ ಗರಿಗಳು ಇವರ ಮುಡಿಗೇರಲಿ ಎಂದು ಹಾರೈಸೋಣ.
ಓನೆ, ಓನೆ.. ಮುದ್ದು ಓನೆ
ಅಹೋ ರಾತ್ರಿ ಹಾಡುಗಳ ರೆಕಾರ್ಡಿಂಗ್, ಶೂಟಿಂಗ್ ಎಂದು ನಿರತರಾಗಿರುತ್ತಿದ್ದ ಕವಿರಾಜ್‌ರವರು ಈಗ ಒಂದೂವರೆ ವರ್ಷದಿಂದ ಸಂಜೆಯಾದರೆ ಸಾಕು ಮನೆಯತ್ತ ಓಡಲು ನೆಪ ಹುಡುಕುತ್ತಾರಂತೆ. ಮನೆಗೆ ಹೋಗಿ ಮುದ್ದು ಓನೆ, ಚಿನ್ನ ಓನೆ, ಓನೆ, ಓನೆ ಎಂದು ಮುದ್ದಾಡುತ್ತಾ ಕುಳಿತರೆ ಬೇರೆ ಪ್ರಪಂಚವೇ ಬೇಡ ಅಷ್ಟು ನೈಜ್ಯ ಅವರ ಈ ಸುಂದರ ಪ್ರಪಂಚ. ನೈಜ್ಯ ಇವರ ಒಂದೂವರೆ ವರ್ಷದ ಮಗಳು. ಅವಳ ಜೊತೆ ಇರುವ ಹೊತ್ತಿನಷ್ಟು ಹಗುರ ಮನಸ್ಸು, ಉಲ್ಲಾಸ, ಉತ್ಸಾಹ ಮತ್ತೆಂದೂ ಅನುಭವಿಸಿಲ್ಲ ಎನ್ನುತ್ತಾರೆ ಅವರು. ಸರಳ ವಿವಾಹದ ಮೂಲಕ ರಾಜೇಶ್ವರಿಯವನ್ನು ವರಿಸಿದ್ದ ಕವಿರಾಜ್ ಪ್ರಾಮಕಾವ್ಯ ಎಲ್ಲರಿಗೂ ಚಿರಪರಿಚಿತ. ರಾಜೇಶ್ವರಿ-ಕವಿರಾಜ್ ದಾಂಪತ್ಯಗೀತೆಯಲ್ಲಿ ಮುದ್ದು ಕಂದನಿಂದ ಕದ್ದ ಮುದ್ದಿನ ನಗು ಚಿಂತೆಯನ್ನು ಚಿಂದಿ ಮಾಡಿ ಸದಾ ನಗುತ್ತಿರುವಂತೆ ಮಾಡಲಿ ಎನ್ನುವುದೇ ನಮ್ಮ ಹಾರೈಕೆ.  

RELATED ARTICLES
- Advertisment -
Google search engine

Most Popular

Recent Comments