ಶಿವಮೊಗ್ಗ: ಎಲ್ಲಾ ಖಾಸಗಿ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆ ಯ ಜಿಲ್ಲಾ ಘಟಕ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಕಾಯ್ದೆಯನ್ನು ಅಗತ್ಯವಾಗಿ ಜಾರಿಗೆ ತರಬೇಕಾಗಿದೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬುವುದು ಹಲವು ದಶಕಗಳ ಹೋರಾಟವಾಗಿದೆ. ಈ ಹಿನ್ನಲೆಯಲ್ಲಿ ಡಾ. ಸರೋಜಿನಿ ಮಹಿಷಿ ಆಯೋಗದ ವರದಿ ಕೂಡಲೇ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳು, ರಾಜ್ಯದ ಕಾನೂನನ್ನು ಗಾಳಿಗೆ ತೂರಿವೆ. ಈ ರಾಜ್ಯದ ಸೌಲಭ್ಯಗಳನ್ನು ಪಡೆದುಕೊಂಡು ಕನ್ನಡಿಗರನ್ನು ನೇಮಿಸದೇ ಅನ್ಯರಿಗೆ ಆದ್ಯತೆ ಕೊಡುತ್ತಿದೆ. ಇದು ನಿಲ್ಲಬೇಕು. ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ ಅನ್ವಯ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಲು ಬಲಿಷ್ಟ ಕಾನೂನನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದಜೆರ್ಯ ಶೇ.೧೦೦ರಷ್ಟು ಹುದ್ದೆಗಳು ಇತರೆ ಸಂಸ್ಥೆಗಳಲ್ಲಿ ಶೇ.೮೦ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಾತಿ ಇರಬೇಕು. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಘಟಕದ ವಲಯಗಳಲ್ಲಿ ಶೇ.೧೦೦ರಷ್ಟು ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿಯೂ ಕೂಡ ಶೇ.೯೦ರಷ್ಟು ಮೀಸಲಾತಿ ನೀಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ನಿಂಬೆಹಣ್ಣು ಮಂಜುನಾಥ್, ಪ್ರಮುಖರಾದ ವೆಂಕಟೇಶ್ ಹೆಗಡೆ, ಮಂಜುನಾಥ್ ಎಸ್. ಕೋಟ್ಯಾನ್, ಶಬ್ಬೀರ್, ಗಂಗಾಧರ್, ರಂಗನಾಥ್, ಗೋಪಿ, ಅನಿಲ್‌ಕುಮಾರ್, ಲಿಂಗರಾಜ್, ರವಿ, ಚಂದ್ರಪ್ಪ ಸೇರಿದಂತೆ ಹಲವರಿದ್ದರು.