ಶಿವಮೊಗ್ಗ : ಕಾಂಗ್ರೆಸ್ ಪಕ್ಷ ಭದ್ರವಾಗಿದ್ದರೆ ದೇಶ ಸುಭದ್ರವಾಗಿರುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಂದು ಪಕ್ಷದ ಕಛೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ೧೩೨ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಹುಟ್ಟಿಕೊಂಡಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಪಕ್ಷವಾಗಿದೆ ಎಂದರು.
ಅನೇಕ ಹೋರಾಟದ ಫಲವಾಗಿ ನಾಡಿಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪಕ್ಷ ಯಶಸ್ವಿಯಾಗಿದೆ. ಸ್ವಾತಂತ್ರ್ಯ ನಂತರ ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಸೇರಿದಂತೆ ಅನೇಕರು ನಮ್ಮ ಪಕ್ಷದಿಂದ ಪ್ರಧಾನ ಮಂತ್ರಿಯಾಗಿ ೨೦ ಅಂಶದ ಕಾರ್ಯಕ್ರಮ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು.
ಬ್ಯಾಂಕುಗಳ ರಾಷ್ಟ್ರೀಕರಣ, ೧೮ ವರ್ಷಕ್ಕೆ ಮತದಾನದ ಹಕ್ಕು, ಇನ್ನು ಮುಂತಾದ ಯೋಜನೆಗಳನ್ನು ರೂಪಿಸುವ ಮೂಲಕ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದಂತಹ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಕಳೆದ ಮೂರುವರೆ ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ ಎಂದ ಅವರು, ಸಂವಿಧಾನದ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಇಂದು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ. ತಾಕತ್ತಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್,ಶಾಸಕರುಗಳಾದ ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್, ಕಾಡಾ ಅಧ್ಯಕ್ಷ ಸುಂದರೇಶ್, ಸೂಡಾಧ್ಯಕ್ಷ ಇಸ್ಮಾಯಿಲ್‌ಖಾನ್, ಕಲಗೋಡು ರತ್ನಾಕರ್ ಸೇರಿದಂತೆ ಮೊದಲಾದವರಿದ್ದರು.